‘ಟಾಕ್ಸಿಕ್’ ಸಿನಿಮಾದಲ್ಲಿ ಬ್ರಿಟೀಷ್ ನಟ ಬೆನೆಡಿಕ್ಟ್, ಯಾರೀತ?
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವು ಬಾಲಿವುಡ್, ದಕ್ಷಿಣ ಭಾರತದ ಖ್ಯಾತ ನಟರು ನಟಿಸುತ್ತಿದ್ದಾರೆ. ಇವರೆಲ್ಲರ ಜೊತೆಗೆ ಬ್ರಿಟೀಷ್ ನಟರೊಬ್ಬರು ತಾವು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಖಾತ್ರಿ ಪಡಿಸಿದ್ದಾರೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸದ್ಯಕ್ಕೆ ಭಾರತ ಅತಿ ಹೆಚ್ಚು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದು. ಮಲಯಾಳಂನ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಮುನ್ನವೇ ಭಾರಿ ನಿರೀಕ್ಷೆ ಹುಟ್ಟಿಸಿದೆ. ಯಶ್ ನಟಿಸುತ್ತಿರುವ ಈ ಸಿನಿಮಾದಲ್ಲಿ ಹಲವು ಸ್ಟಾರ್ ನಟ-ನಟಿಯರು ನಟಿಸುವುದು ಈಗಾಗಲೇ ಖಾತ್ರಿಯಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ಕೆಲವು ಬಾಲಿವುಡ್ ನಟರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಬ್ರಿಟೀಷ್ ನಟರೊಬ್ಬರು ತಾವು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯವನ್ನು ಖಾತ್ರಿಪಡಿಸಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಬ್ರಿಟೀಷ್ ನಟ ಬೆನಡಿಕ್ಟ್ ಗ್ಯಾರೆಟ್, ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್ಗಳ ಜೊತೆಗೆ ನಡೆಸಿದ ಪ್ರಶ್ನೋತ್ತರ ಸಂವಾದದಲ್ಲಿ ತಾವು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಹೇಳಿದ್ದಾರೆ.
‘ಟಾಕ್ಸಿಕ್’ ಸಿನಿಮಾದಲ್ಲಿ ನಿಮ್ಮ ಪಾತ್ರ ಏನು? ಎಂಬ ಪ್ರಶ್ನೆಗೆ, ‘ನಾನು ಈಗಲೇ ಅದನ್ನೆಲ್ಲ ಹೇಳಲಾರೆ, ನಾನು ನನ್ನ ಪಾತ್ರದ ಬಗ್ಗೆ ಬಹಿರಂಗವಾಗಿ ಮಾತನಾಡುವಂತಿಲ್ಲ, ನಾನು ಒಪ್ಪಂದದಲ್ಲಿದ್ದೇನೆ, ನೀವು ಎಷ್ಟೇ ಕೇಳಿದರು ಪಾತ್ರದ ಬಗ್ಗೆ ಏನೂ ಹೇಳಲಾರೆ’ ಎಂದಿದ್ದಾರೆ ಬೆನಡಿಕ್ಟ್ ಗ್ಯಾರೆಟ್. ‘ಯಶ್ ಬಗ್ಗೆ ಹೇಳಿ’ ಎಂಬ ಮತ್ತೊಬ್ಬ ಅಭಿಮಾನಿಯ ಪ್ರಶ್ನೆಗೆ, ‘ಯಶ್ ಅದ್ಭುತವಾದ ವ್ಯಕ್ತಿ, ಅವರ ಗಡ್ಡ, ನನ್ನ ಗಡ್ಡಕ್ಕಿಂತಲೂ ಹೆಚ್ಚು ಚೆನ್ನಾಗಿದೆ’ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, ‘ಗೀತು ಮೋಹನ್ದಾಸ್ ಬಹಳ ಶಿಸ್ತಿ ನಿರ್ದೇಶಕಿಯಾ?’ ಎಂದು ಪ್ರಶ್ನಿಸಿದ್ದಾನೆ, ಅದಕ್ಕೆ ಉತ್ತರಿಸಿರುವ ಬೆನಡಿಕ್ಟ್, ‘ಇದೇ ಮೊದಲ ಬಾರಿಗೆ ನಾನು ಮಹಿಳಾ ನಿರ್ದೇಶಕಿಯೊಟ್ಟಿಗೆ ಕೆಲಸ ಮಾಡುತ್ತಿದ್ದೇನೆ, ಆಕೆ ಕೊಡುವ ಬೆಂಬಲ, ಸಲಹೆ, ಆಕೆಗಿರುವ ಉತ್ಸಾಹ ಅದ್ಭುತವಾದುದು’ ಎಂದಿದ್ದಾರೆ. ‘ನಿಮ್ಮ ಇದೇ ಫಿಸಿಕ್ ಟಾಕ್ಸಿಕ್ ಸಿನಿಮಾದಲ್ಲಿ ಇರಲಿದೆಯೇ?’ ಎಂಬ ಪ್ರಶ್ನೆಗೆ ಅದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು ಎಂದಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾಗಾಗಿ ಬಂದ ನಯನತಾರಾ; ಬೆಂಗಳೂರಲ್ಲಿ ‘GOAT’ ನೋಡಿದ ತಮಿಳು ನಟಿ
‘ಟಾಕ್ಸಿಕ್’ ಸಿನಿಮಾದ ಬಗ್ಗೆ ನಟ ಬೆನಡಿಕ್ಟ್ಗೆ ಹಲವು ಪ್ರಶ್ನೆಗಳು ಎದುರಾಗಿವೆ. ‘ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾದಲ್ಲಿ ಇದ್ದಾರೆಯೇ?’ ಎಂಬ ಪ್ರಶ್ನೆಗೆ. ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ ಬೆನಡಿಕ್ಟ್. ಅದಾದ ಬಳಿಕ ‘ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದೇವೆ ಎಂದು ಯಶ್ಗೆ ತಿಳಿಸಿ, ಇದೇ ವರ್ಷದಲ್ಲಿ ಸಿನಿಮಾ ಬಿಡುಗಡೆ ಮಾಡಿಸಿ’ ಎಂದಿದ್ದಾರೆ ಮತ್ತೊಬ್ಬ ಅಭಿಮಾನಿ, ಅದಕ್ಕೆ ‘ಬೆನಡಿಕ್ಟ್, ನನ್ನ ಬಳಿ ಯಶ್ ಮೊಬೈಲ್ ನಂಬರ್ ಇಲ್ಲ, ಆದರೆ ನೀವೆಲ್ಲ ಕಾಯುತ್ತಿದ್ದೀರೆಂದು ಅವರಿಗೆ ಗೊತ್ತಿದೆ. ಸಿನಿಮಾ 2024 ರಲ್ಲಿ ಬಿಡುಗಡೆ ಆಗುವುದಿಲ್ಲ. 2025ರಲ್ಲಿ ಬಿಡುಗಡೆ ಆಗಲಿದೆ’ ಎಂದಿದ್ದಾರೆ.
ಬೆನಡಿಕ್ಟ್, ಮೂಲತಃ ಬ್ರಿಟನ್ನವರು ಆದರೆ ಈಗ ನೆಲೆಸಿರುವುದು ಮುಂಬೈನಲ್ಲಿಯೇ. ಫಿಟ್ನೆಸ್ ಫ್ರೀಕ್ ಆಗಿರುವ ಬೆನಡಿಕ್ಟ್ ಜಿಮ್ ನಡೆಸುತ್ತಾರೆ, ಪರ್ನನಲ್ ಟ್ರೈನರ್ ಸಹ. ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಾರೆ. ಈಗಾಗಲೇ ಕೆಲ ಇಂಗ್ಲೀಷ್ ಹಾಗೂ ಭಾರತೀಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕೆಲವು ಜಾಹೀರಾತುಗಳಲ್ಲಿಯೂ ಸಹ ಬೆನಡಿಕ್ಟ್ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಜವಾನ್’, ‘ದಿ ಕೇರಳ ಸ್ಟೋರಿ’, ‘ಧಕ್-ಧಕ್’ ಮಲಯಾಳಂ ಸಿನಿಮಾ ‘ಕಾಂಜುರಿಂಗ್ ಕಣ್ಣಪ್ಪನ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ