ಮೇಕೆದಾಟು (Mekedatu) ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ. ಅದರಲ್ಲಿ ಭಾಗವಹಿಸುವಂತೆ ಹಲವು ಸಂಘಟನೆಗಳಿಗೆ ಆಹ್ವಾನ ನೀಡಲಾಗುತ್ತಿದೆ. ಈ ಸಲುವಾಗಿ ಗುರುವಾರವಷ್ಟೇ (ಡಿ.30) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿಕೆ ಶಿವಕುಮಾರ್ (DK Shivakumar) ತೆರಳಿದ್ದರು. ಈಗ ಈ ಪಾದಯಾತ್ರೆಗೆ ನಾದಬ್ರಹ್ಮ ಹಂಸಲೇಖ (Nadabrahma Hamsalekha) ಕೂಡ ಸಾಥ್ ನೀಡುತ್ತಿದ್ದಾರೆ. ಹಲವು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಂಸಲೇಖ (Hamsalekha) ಅವರು ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ಸಂಗೀತ ನಿರ್ದೇಶಕನಾಗಿ, ಗೀತರಚನಕಾರನಾಗಿ ಅವರ ಕೊಡುಗೆ ಅಪಾರ. ಈಗ ಅವರು ಮೇಕೆದಾಟು ಪಾದಯಾತ್ರೆ (Mekedatu Padayatra) ಕುರಿತಂತೆ ಎರಡು ಹಾಡುಗಳನ್ನು ಬರೆಯುತ್ತಾರೆ ಎಂಬ ಬಗ್ಗೆ ಮಾಹಿತಿ ಕೇಳಿಬಂದಿದೆ.
ಹಂಸಲೇಖ ಅವರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದಾರೆ. ಪಾದಯಾತ್ರೆಯಲ್ಲಿ ಭಾಗಿ ಆಗುವಂತೆ ಅವರಿಗೆ ಆಹ್ವಾನ ನೀಡಲಾಗಿದೆ. ಕನ್ನಡದ ಎಲ್ಲ ಸ್ಟಾರ್ ಕಲಾವಿದರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಹಿರಿಯ ನಟಿಯರಾದ ಉಮಾಶ್ರೀ, ಜಯಮಾಲಾ ಹಾಗೂ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಸ್ಟಾರ್ ನಟರನ್ನು ಆಹ್ವಾನಿಸುವ ಜವಾಬ್ದಾರಿ ನೀಡಲಾಗಿದೆ. ಬಳಿಕ ಡಿಕೆ ಶಿವಕುಮಾರ್ ಅವರು ಖುದ್ದಾಗಿ ನಟರಿಗೆ ಕರೆ ಮಾಡಿ ಆಹ್ವಾನಿಸಲಿದ್ದ್ದಾರೆ.
ಪೇಜಾವರ ಶ್ರೀಗಳ ಬಗ್ಗೆ ಇತ್ತೀಚೆಗೆ ಹಂಸಲೇಖ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣ ಆಗಿತ್ತು. ಆಗ ಹಂಸಲೇಖ ಪರವಾಗಿ ಕಾಂಗ್ರೆಸ್ ನಾಯಕರು ನಿಂತುಕೊಂಡಿದ್ದರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಮತ್ತು ಸಿದ್ದರಾಮಯ್ಯ ಜೊತೆಯಾಗಿ ಪಾಲ್ಗೊಂಡಿದ್ದರು. ಈಗ ಕಾಂಗ್ರೆಸ್ನ ಮುಂದಾಳತ್ವದ ಮೇಕೆದಾಟು ಪಾದಯಾತ್ರೆಗೆ ಹಂಸಲೇಖ ಸಾಥ್ ನೀಡಲಿದ್ದಾರೆ.
ಸ್ಟಾರ್ ನಟರಿಗೆ ಡಿಕೆ ಶಿವಕುಮಾರ್ ಆಹ್ವಾನ:
ಮೇಕೆದಾಟು ಪಾದಯಾತ್ರೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರನ್ನು ಆಹ್ವಾನಿಸುವ ಬಗ್ಗೆ ಡಿಕೆ ಶಿವಕುಮಾರ್ ಅವರು ಗುರುವಾರ (ಡಿ.30) ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡರು. ‘ಚಿತ್ರೋದ್ಯಮಕ್ಕೆ ವಾಣಿಜ್ಯ ಮಂಡಳಿಯೇ ಬೇರು. ಕಲಾವಿದರು, ನಿರ್ಮಾಪಕರು, ಪ್ರದರ್ಶಕರು ಎಲ್ಲರೂ ಇಲ್ಲಿಯೇ ಬಂದು ನ್ಯಾಯ ಕೇಳಬೇಕು. ಸುದೀಪ್, ಶಿವರಾಜ್ಕುಮಾರ್, ಯಶ್, ದರ್ಶನ್ ಸೇರಿದಂತೆ ಎಲ್ಲ ನಟರಿಗೂ ವಾಣಿಜ್ಯ ಮಂಡಳಿ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಆದರೆ ಯಾರಿಗೂ ಬಲವಂತ ಮಾಡುವುದಿಲ್ಲ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
‘ನಮ್ಮ ನೀರು ನಮ್ಮ ಹಕ್ಕು. ಪಾದಯಾತ್ರೆಯಲ್ಲಿ ಪ್ರತಿ ದಿನ ನಡೆಯಿರಿ ಅಂತ ನಾನು ಹೇಳಲ್ಲ. ಒಂದು ದಿನ ಅಥವಾ ಅರ್ಧ ದಿನ ಬೇಕಿದ್ದರೂ ನಡೆಯಬಹುದು. ಬಂದು ಈ ಹೋರಾಟಕ್ಕೆ ಬೆಂಬಲ ನೀಡಬೇಕಾದ್ದು ಅವರ ಧರ್ಮ. ಅವರೆಲ್ಲರ ಮೇಲೆ ನನಗೆ ವಿಶ್ವಾಸ ಇದೆ. ಯಾವಾಗಲೂ ಈ ನಾಡಿನ ಹಿತಕ್ಕಾಗಿ ಅವರು ಸಹಾಯ ಮಾಡಿಕೊಂಡು ಬಂದಿದ್ದಾರೆ. ಇದು ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲ ವರ್ಗಕ್ಕೂ ಸೇರಿದ ವಿಚಾರ. ವಾಣಿಜ್ಯ ಮಂಡಳಿ ಮೂಲಕ ಎಲ್ಲ ಕಲಾವಿದರಿಗೂ ಆಹ್ವಾನ ತಲುಪಿಸುತ್ತೇನೆ. ಖುದ್ದಾಗಿ ದೂರವಾಣಿ ಕರೆ ಮಾಡಿ ಕರೆಯುತ್ತೇನೆ. ಎಲ್ಲರಿಗೂ ಫೋನ್ ಕರೆ ಮಾಡಲು ಸಾಧ್ಯವಾಗದೇ ಇರಬಹುದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ; ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ
ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವ ಪಡೆದು, ಮೇಕೆದಾಟು ಹೋರಾಟಕ್ಕೆ ಬೆಂಬಲ ಕೋರಿದ ಡಿಕೆ ಶಿವಕುಮಾರ್