‘ನಸಾಬ್’ ಶೀರ್ಷಿಕೆಯಲ್ಲಿ ಬರುತ್ತಿದೆ ಹೊಸ ಸಿನಿಮಾ; ಬಂಜಾರ ಭಾಷೆಯಲ್ಲಿ ಈ ಟೈಟಲ್ ಅರ್ಥವೇನು?
ಒಬ್ಬ ಸಾಮಾನ್ಯ ಹುಡುಗ ಹೇಗೆ ‘ನಸಾಬ್’ ಆಗಿ ಬೆಳೆಯುತ್ತಾನೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಕನ್ನಡದಲ್ಲಿ ರಿಯಲ್ ಲೈಫ್ ವ್ಯಕ್ತಿಗಳ ಜೀವನವನ್ನು ಆಧರಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ. ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ಮಾತ್ರ ಆಗಿವೆ. ಸಿನಿಮಾ ಆಗಬಹುದಾದ ಅನೇಕ ನೈಜ ಘಟನೆಗಳು ನಮ್ಮಲ್ಲಿ ಇವೆ. ಈಗ ‘ನಸಾಬ್’ (Nasab) ಶೀರ್ಷಿಕೆಯಲ್ಲಿ ಒಂದು ಹೊಸ ಸಿನಿಮಾ ಬರುತ್ತಿದೆ. ಈ ಚಿತ್ರದಲ್ಲಿ ಕೂಡ ರಿಯಲ್ ಲೈಫ್ ಸಂಗತಿಗಳನ್ನು ತೋರಿಸಲಾಗುವುದು. ಅಂದಹಾಗೆ, ‘ನಸಾಬ್’ ಎಂಬುದು ಬಂಜಾರ ಭಾಷೆಯ (Banjara Language) ಪದ. ಸರ್ವೋಚ್ಛ ನಾಯಕ ಎಂಬುದು ಈ ಪದದ ಅರ್ಥ. ಇಂಥ ಡಿಫರೆಂಟ್ ಟೈಟಲ್ನಲ್ಲಿ ಸಿನಿಮಾ (New Kannada Movie) ಸಿದ್ಧವಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..
‘ನಸಾಬ್’ ಚಿತ್ರದ ಕಥಾವಸ್ತು ಏನು? ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಆಪ್ತ ಸಹಾಯಕರಾದ ಕೆ. ಕಿಶೋರ್ ಕುಮಾರ್ ಅವರ ಆತ್ಮಕಥೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿದೆ. ಹೊಸ ನಟ ಕೀರ್ತಿ ಕುಮಾರ್ ಅವರು ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲೇ ಹೇಳಿದಂತೆ ಬಂಜಾರ ಭಾಷೆಯಲ್ಲಿ ‘ನಸಾಬ್’ ಎಂದರೆ ಸರ್ವೋಚ್ಚ ನಾಯಕ ಎಂಬರ್ಥವಿದೆ. ಒಬ್ಬ ಸಾಮಾನ್ಯ ಹುಡುಗ ಹೇಗೆ ‘ನಸಾಬ್’ ಆಗಿ ಬೆಳೆಯುತ್ತಾನೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಈ ಸಿನಿಮಾವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಶೀರ್ಷಿಕೆ ಅನಾವರಣ ಆಯಿತು.
ಇದನ್ನೂ ಓದಿ: Koli Esru Movie: ಕನ್ನಡದ ‘ಕೋಳಿ ಎಸ್ರು’ ಚಿತ್ರಕ್ಕೆ ಅಟ್ಟಾವಾ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ 2 ಪ್ರಮುಖ ಪ್ರಶಸ್ತಿ
‘ಕೀರ್ತಿ ಕ್ರಿಯೇಶನ್ಸ್’ ಬ್ಯಾನರ್ ಮೂಲಕ ಸುಜಾತಾ ಕೆ. ಅವರು ನಿರ್ಮಿಸುತ್ತಿರುವ ‘ನಸಾಬ್’ ಚಿತ್ರಕ್ಕೆ ಡಾ. ರಾಗಂ ಅವರು ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ಸಂಗೀತ ಸಂಯೋಜನೆಯನ್ನೂ ಮಾಡುತ್ತಿದ್ದಾರೆ. ‘ನಸಾಬ್’ ಸಿನಿಮಾದಲ್ಲಿ ಕೀರ್ತಿ ಕುಮಾರ್ ಜೊತೆ ಅಮೃತಾ, ಜಯಶ್ರೀ, ಹೇಮಂತ್, ಪದ್ಮವಾಸಂತಿ, ವಿಜಯ್ ಕಾಶಿ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಹಮ್ಮದ್ ಹಸೀಬ್ ಅವರ ಛಾಯಾಗ್ರಹಣವಿದ್ದು, ಶಿಜ ಅವರ ನಿರ್ದೇಶನದಲ್ಲಿ ಪಟ್ಟದಕಲ್ಲು, ಐಹೊಳೆ, ಅಮಿನಘಡ ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ‘ನಸಾಬ್’ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರುವ ಗುರಿ ಇಟ್ಟುಕೊಳ್ಳಲಾಗಿದೆ.

‘ನಸಾಬ್’ ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ
ಬೆಂಗಳೂರಿನ ಮಹಾರಾಣಿ ಕಾಲೇಜಿನ ಆವರಣದಲ್ಲಿರುವ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಜಂಬುನಾಥ ಸ್ವಾಮಿ ಎಸ್. ಮಳಿಮಠ, ಬಂಜಾರ ಶಕ್ತಿಪೀಠದ ಶ್ರೀಕುಮಾರ ಮಹಾರಾಜ ಸ್ವಾಮೀಜಿ, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶ ಮೂರ್ತಿ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಜರಿದ್ದು ‘ನಸಾಬ್’ ಸಿನಿಮಾ ಶೀರ್ಷಿಕೆ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.