Guinness Record: ಗಿನ್ನೆಸ್ ವಿಶ್ವ ದಾಖಲೆ ಮಾಡಲು ಹೊರಟ ಕನ್ನಡದ ಸಿನಿಮಾ ‘ದೇವರ ಆಟ ಬಲ್ಲವರಾರು’
Devara Aata Ballavararu: ಗಿನ್ನೆಸ್ ದಾಖಲೆ ಮಾಡುವ ಗುರಿಯನ್ನು ‘ದೇವರ ಆಟ ಬಲ್ಲವರಾರು’ ಚಿತ್ರತಂಡ ಹೊಂದಿದೆ. ಅದರ ಮೊದಲ ಹೆಜ್ಜೆಯಾಗಿ ಮಡಿಕೇರಿಯಲ್ಲಿ ಸತತವಾಗಿ 36 ಗಂಟೆಗಳ ಕಾಲ ಚಿತ್ರೀಕರಣ ನಡೆಸಲಾಗುತ್ತಿದೆ.
ಅನೇಕ ಹೊಸ ಪ್ರಯತ್ನಗಳಿಗೆ ಸ್ಯಾಂಡಲ್ವುಡ್ (Sandalwood) ಸಾಕ್ಷಿ ಆಗುತ್ತಿದೆ. ಆ ರೀತಿಯ ಇನ್ನೊಂದು ಹೊಸ ಪ್ರಯೋಗಕ್ಕೆ ‘ದೇವರ ಆಟ ಬಲ್ಲವರಾರು’ ಚಿತ್ರತಂಡ ಮುಂದಾಗಿದೆ . ಈ ಹಿಂದೆ ಸಂಚಾರಿ ವಿಜಯ್ ನಟನೆಯ ‘ಫಿರಂಗಿ ಪುರ’ ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ದನ್ ಪಿ. ಜಾನಿ ಅವರು ಈಗ ‘ದೇವರ ಆಟ ಬಲ್ಲವರಾರು’ (Devara Aata Ballavararu) ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 30 ದಿನಗಳಲ್ಲಿ ಸಿನಿಮಾದ ಎಲ್ಲ ಪ್ರಕ್ರಿಯೆ ಮುಗಿಸಿ, ಸಿನಿಮಾ ಬಿಡುಗಡೆ ಮಾಡುವ ಮೂಲಕ ಗಿನ್ನೆಸ್ ದಾಖಲೆ (Guinness World Record) ಮಾಡುವ ಗುರಿಯನ್ನು ಈ ಚಿತ್ರತಂಡ ಇಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ಈಗ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆ ಬಗ್ಗೆ ‘ದೇವರ ಆಟ ಬಲ್ಲವರಾರು’ ತಂಡ ಮಾಹಿತಿ ಹಂಚಿಕೊಂಡಿದೆ.
ಗಿನ್ನೆಸ್ ದಾಖಲೆ ಮಾಡುವ ಪಯಣದಲ್ಲಿ ಮೊದಲ ಹೆಜ್ಜೆಯಾಗಿ ಮಡಿಕೇರಿಯಲ್ಲಿ ಜೂನ್ 19ರ ಬೆಳಗ್ಗೆ 10 ಗಂಟೆಯಿಂದ ಜೂನ್ 20ರ ರಾತ್ರಿ 10 ಗಂಟೆ ತನಕ ಸತತವಾಗಿ 36 ಗಂಟೆಗಳ ಕಾಲ ಚಿತ್ರೀಕರಣ ನಡೆಸಲಾಗುತ್ತಿದೆ. ವಿಶಾಲವಾದ ಜಾಗದಲ್ಲಿ 19 ಅಡಿ ಉದ್ದವಾದ ಸೆಟ್ ಹಾಕಲಾಗಿದೆ. ಚೆನ್ನೈನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾ ನಿರ್ದೇಶಕ ಬಾಲಚಂದ್ರನ್ ಹಾಗೂ ಅವರ ತಂಡದವರು ಅದ್ದೂರಿ ಸೆಟ್ ನಿರ್ಮಾಣ ಮಾಡಿದ್ದಾರೆ. 180ಕ್ಕೂ ಅಧಿಕ ಜನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ನಿರ್ದೇಶಕ ಜನಾರ್ದನ್ ಪಿ. ಜಾನಿ ತಿಳಿಸಿದ್ದಾರೆ.
ಇದನ್ನೂ ಓದಿ: 5 ದಿನದಲ್ಲಿ 75 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಮೂಲಕ ಗಿನ್ನೆಸ್ ದಾಖಲೆ; ಏನಿದರ ವಿಶೇಷತೆ?
ಸಿಂಧೂ ಲೋಕನಾಥ್, ಅರ್ಜುನ್ ರಮೇಶ್, ಸಂಪತ್ ರಾಮ್, ಅರ್ಜುನ್, ಮೇದಿನಿ ಕೆಳಮನೆ, ವರ್ಷಾ ವಿಶ್ವನಾಥ್ ಮುಂತಾದ ಕಲಾವಿದರು ‘ದೇವರ ಆಟ ಬಲ್ಲವರಾರು’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣ ನಡೆಯುತ್ತಿರುವ ಸ್ಥಳದಲ್ಲಿ ಜೂನ್ 16ರಿಂದ 5 ದಿನಗಳ ಕಾಲ ತಾಲೀಮು ನಡೆಸಲಾಯಿತು. ಆನಂತರ ಚಿತ್ರೀಕರಣ ಪ್ರಾರಂಭಿಸಲಾಯಿತು. ‘ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಶೂಟಿಂಗ್ ಆದ ನಂತರ ಎಲ್ಲಾ ಕಾರ್ಯಗಳನ್ನು ಮುಗಿಸಿ ಜುಲೈ 20ರಂದು ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು ಆ ಸ್ಥಳದಲ್ಲೇ ಇರುತ್ತಾರೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕದ ಡಲ್ಲಾಸ್‍ನಲ್ಲಿ ಸಾಮೂಹಿಕ ಭಗವದ್ಗೀತೆ ಕಂಠಪಾಠ ಪಾರಾಯಣದಲ್ಲಿ ಗಿನ್ನೆಸ್ ದಾಖಲೆ
‘ಶನಿ’ ಧಾರಾವಾಹಿ ಖ್ಯಾತಿಯ ಅರ್ಜುನ್ ರಮೇಶ್ ಅವರು ‘ದೇವರ ಆಟ ಬಲ್ಲವರಾರು’ ಸಿನಿಮಾಗಾಗಿ 2 ತಿಂಗಳಲ್ಲಿ 14 ಕೆಜಿ ದೇಹದ ತೂಕ ಇಳಿಸಿಕೊಂಡಿದ್ದಾರೆ. ಇದು ಅವರ 5ನೇ ಸಿನಿಮಾ. ‘ಈ ಚಿತ್ರದ ನಿರ್ದೇಶಕರ ಕಾರ್ಯವೈಖರಿ ಕಂಡು ಆಶ್ಚರ್ಯವಾಯಿತು. ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರದ ಹೆಸರು ಸೂರಿ’ ಎಂದಿದ್ದಾರೆ ಅರ್ಜುನ್ ರಮೇಶ್. ನಟಿ ಸಿಂಧೂ ಲೋಕನಾಥ್ ಅವರು 3 ವರ್ಷಗಳ ಗ್ಯಾಪ್ ಬಳಿಕ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಚೇಳಿನ ಭಂಗಿಯಲ್ಲಿ 29 ನಿಮಿಷ ನಿಂತು ಗಿನ್ನೆಸ್ ದಾಖಲೆ ಬರೆದ ದುಬೈ ಮೂಲದ ಯೋಗ ತರಬೇತುದಾರ
1975ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ‘ದೇವರ ಆಟ ಬಲ್ಲವರಾರು’ ಸಿನಿಮಾ ಹೊಂದಿರಲಿದೆ. ಆ್ಯಕ್ಷನ್-ಥ್ರಿಲ್ಲರ್ ಪ್ರಕಾರದಲ್ಲಿ ಈ ಚಿತ್ರ ಮೂಡಿಬರಲಿದೆ. ಹನುಮಂತರಾಜು, ಲತಾ ರಾಗ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನಿಲ್ ಜೈನ್ ಅವರು ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.