5 ದಿನದಲ್ಲಿ 75 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಮೂಲಕ ಗಿನ್ನೆಸ್ ದಾಖಲೆ; ಏನಿದರ ವಿಶೇಷತೆ?
ರಾಷ್ಟ್ರೀಯ ಹೆದ್ದಾರಿ 53ರಲ್ಲಿ ಒಂದೇ ಪಥದಲ್ಲಿ 75 ಕಿಮೀ ಉದ್ದದ ಕಾಂಕ್ರೀಟ್ ರಸ್ತೆಯನ್ನು 5 ದಿನದಲ್ಲಿ ನಿರ್ಮಿಸುವ ಮೂಲಕ ಗಿನ್ನೆಸ್ ದಾಖಲೆಯನ್ನು ನಿರ್ಮಿಸಲಾಗಿದೆ. ಮಹಾರಾಷ್ಟ್ರದ ಅಮರಾವತಿ ಮತ್ತು ಅಕೋಲಾ ಜಿಲ್ಲೆಗಳ ನಡುವೆ ಈ NH-53 ಹಾದು ಹೋಗುತ್ತದೆ.
ನವದೆಹಲಿ: ಭಾರತದಲ್ಲಿ ದಾಖಲೆಯ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಮೂಲಕ ಗಿನ್ನೆಸ್ ದಾಖಲೆ (Guinness World Record) ಸೃಷ್ಟಿಸಲಾಗಿದೆ. 105 ಗಂಟೆ 33 ನಿಮಿಷದಲ್ಲೇ 75 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಡಾಂಬರು, ಕಾಂಕ್ರೀಟ್ ಹಾಕಿ ಅಮರಾವತಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ-53 ನಿರ್ಮಾಣ ಮಾಡಲಾಗಿದೆ. ರಾಜ್‌ಪಥ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಹಾಗೂ ಜಗದೀಶ್ ಕದಂ ಕಂಪನಿಗಳಿಂದ ಈ ಅತೊ ದೊಡ್ಡ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು, ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಈ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಸಲಹೆಗಾರರು ಮತ್ತು ರಾಜ್‌ಪಥ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಮತ್ತು ಜಗದೀಶ್ ಕದಮ್ ಅವರು ರಾಷ್ಟ್ರೀಯ ಹೆದ್ದಾರಿ 53ರಲ್ಲಿ ಒಂದೇ ಪಥದಲ್ಲಿ 75 ಕಿಮೀ ನಿರಂತರ ಬಿಟುಮಿನಸ್ ಕಾಂಕ್ರೀಟ್ ರಸ್ತೆ ನಿರ್ಮಿಸುವ ಮೂಲಕ ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಮಹಾರಾಷ್ಟ್ರದ ಅಮರಾವತಿ ಮತ್ತು ಅಕೋಲಾ ಜಿಲ್ಲೆಗಳ ನಡುವೆ NH-53 ಹಾದು ಹೋಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Proud Moment For The Entire Nation!
Feel very happy to congratulate our exceptional Team @NHAI_Official, Consultants & Concessionaire, Rajpath Infracon Pvt Ltd & Jagdish Kadam, on achieving the Guinness World Record (@GWR) of laying 75 Km continuous Bituminous Concrete Road… pic.twitter.com/hP9SsgrQ57
— Nitin Gadkari (@nitin_gadkari) June 8, 2022
ಈ ಸಾಧನೆಗಾಗಿ ಇಡೀ ತಂಡವನ್ನು ಅಭಿನಂದಿಸಿರುವ ಸಚಿವ ನಿತಿನ್ ಗಡ್ಕರಿ, “ಇಡೀ ರಾಷ್ಟ್ರಕ್ಕೆ ಇದು ಹೆಮ್ಮೆಯ ಕ್ಷಣ! ನಿರಂತರ 75 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಿಸಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸಾಧಿಸಿದ್ದಕ್ಕಾಗಿ NHAI, ಕನ್ಸಲ್ಟೆಂಟ್ಸ್ ಮತ್ತು ಕನ್ಸೆಷನೇರ್, ರಾಜ್‌ಪಥ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಮತ್ತು ಜಗದೀಶ್ ಕದಮ್ ಅವರ ತಂಡವನ್ನು ಅಭಿನಂದಿಸಲು ತುಂಬಾ ಸಂತೋಷವಾಗುತ್ತಿದೆ. ಅಮರಾವತಿ ಮತ್ತು ಅಕೋಲಾ ನಡುವಿನ NH-53 ವಿಭಾಗದಲ್ಲಿ ಒಂದೇ ಪಥದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಈ ಅಸಾಮಾನ್ಯ ಸಾಧನೆಯನ್ನು ಸಾಧಿಸಲು ಹಗಲಿರುಳು ಶ್ರಮಿಸಿದ ನಮ್ಮ ಎಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. (Source)
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗೆ ಲಗ್ಗೆ ಇಟ್ಟ ಗಜಪಡೆ, ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರು!
ಈ ತಂಡವು ಜೂನ್ 3ರಂದು ಬೆಳಿಗ್ಗೆ 7:27ಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯನ್ನು ನಿರ್ಮಿಸಲು ಪ್ರಾರಂಭಿಸಿತು. ಜೂನ್ 7ರಂದು ಸಂಜೆ 5 ಗಂಟೆಗೆ 75 ಕಿಮೀ ರಸ್ತೆಯನ್ನು ನಿರ್ಮಿಸಿ, 105 ಗಂಟೆ 33 ನಿಮಿಷಗಳ ದಾಖಲೆಯ ಸಮಯದಲ್ಲಿ ಅದನ್ನು ಪೂರ್ಣಗೊಳಿಸಿತು. ಎನ್‌ಎಚ್‌ಎಐನ ಸುಮಾರು 800 ಉದ್ಯೋಗಿಗಳು ಮತ್ತು ರಾಜ್‌ಪಥ್ ಇನ್‌ಫ್ರಾಕಾನ್‌ನ 720 ಕಾರ್ಮಿಕರು, ಸ್ವತಂತ್ರ ಸಲಹೆಗಾರರು ಸೇರಿದಂತೆ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 75 ಕಿ.ಮೀ ಏಕ ಪಥದ ರಸ್ತೆಯು 35 ಕಿಮೀ ದ್ವಿಪಥದ ರಸ್ತೆಗೆ ಸಮನಾಗಿರುತ್ತದೆ.
ಹೊಸದಾಗಿ ನಿರ್ಮಿಸಲಾದ ರಸ್ತೆಯ ಮಹತ್ವದ ಕುರಿತು ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, “ಅಮರಾವತಿಯಿಂದ ಅಕೋಲಾಕ್ಕೆ ಸಂಪರ್ಕಿಸುವ ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 53ರ ಭಾಗವಾಗಿದೆ. ಇದು ಪ್ರಮುಖ ಪೂರ್ವ-ಪಶ್ಚಿಮ ಕಾರಿಡಾರ್ ಆಗಿದೆ. ಇದು ಪ್ರಮುಖ ನಗರಗಳಾದ ಕೋಲ್ಕತ್ತಾ, ರಾಯ್‌ಪುರ, ನಾಗ್‌ಪುರ, ಅಕೋಲಾ, ಧುಲೆ, ಮತ್ತು ಸೂರತ್ ಇದು ನಮ್ಮ ದೇಶದ ಖನಿಜ ಸಮೃದ್ಧ ಪ್ರದೇಶದ ಮೂಲಕ ಹಾದುಹೋಗುತ್ತದೆ. ಅಮರಾವತಿಯಿಂದ ಅಕೋಲಾವರೆಗಿನ ಈ ಭಾಗದಲ್ಲಿ ಸುಮಾರು ಶೇ. 35ರಷ್ಟು ಮತ್ತು ಅಕೋಲಾದಿಂದ ಚಿಕ್ಲಿ ವಿಭಾಗದಲ್ಲಿ ಸುಮಾರು ಶೇ. 65ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ನನಗೆ ತಿಳಿಸಲಾಗಿದೆ. ಹೀಗಾಗಿ, ಈ ಸಾಧನೆಯಿಂದ ಪ್ರಯಾಣಿಕರಿಗೆ ಹೆಚ್ಚಿನ ಸಮಾಧಾನ ಸಿಗಲಿದೆ, ಸಂಚಾರ ಸುಗಮವಾಗಲಿದೆ, ಪ್ರಯಾಣದ ಸಮಯವೂ ಕಡಿಮೆಯಾಗಲಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Wed, 8 June 22