Inspirational Story: 73ರ ಇಳಿ ವಯಸ್ಸಿನಲ್ಲೂ ಸೈಕಲ್ನಲ್ಲೇ 2,500 ಕಿ.ಮೀ. ಪ್ರಯಾಣಿಸಿದ ವೃದ್ಧ
Kiran Seth: 73 ವರ್ಷದ ಕಿರಣ್ ಸೇಠ್ ಪದ್ಮಶ್ರೀ ಪುರಸ್ಕೃತರಾಗಿದ್ದು, 5 ರಾಜ್ಯಗಳನ್ನು ದಾಟಿ 2,500 ಕಿ.ಮೀ ದೂರವನ್ನು ಸೈಕಲ್ನಲ್ಲಿ ಸಂಚರಿಸಿದ್ದಾರೆ.
ನವದೆಹಲಿ: ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎಂಬುದಕ್ಕೆ ಉದಾಹರಣೆ ಎಂಬಂತೆ ದೆಹಲಿಯಲ್ಲಿ 73 ವರ್ಷದ ವೃದ್ಧರೊಬ್ಬರು ಬರೋಬ್ಬರಿ 2,500 ಕಿ.ಮೀ. ಸೈಕಲ್ನಲ್ಲೇ ಪ್ರಯಾಣಿಸಿದ್ದಾರೆ. ದೆಹಲಿಯಿಂದ ಸೈಕಲ್ ಸವಾರಿ (Cycling) ಆರಂಭಿಸಿದ 73 ವರ್ಷ ಕಿರಣ್ ಸೇಠ್ (Kiran Seth) ಭಾನುವಾರ ರಾಜ್ಘಾಟ್ಗೆ ಬಂದು ತಲುಪಿದ್ದಾರೆ. 5 ರಾಜ್ಯಗಳಲ್ಲಿ ಸಂಚರಿಸಿರುವ ಅವರು ಇಳಿ ವಯಸ್ಸಿನಲ್ಲೂ ಎರಡೂವರೆ ಸಾವಿರ ಕಿ.ಮೀ. ಸೈಕಲ್ ತುಳಿದು ಅಚ್ಚರಿ ಮೂಡಿಸಿದ್ದಾರೆ.
ಅಂದಹಾಗೆ, ಈ ಕಿರಣ್ ಸೇಠ್ ಪದ್ಮಶ್ರೀ ಪುರಸ್ಕೃತರಾಗಿದ್ದು, ಸ್ಪಿಕ್ ಮಕೇ (SPIC MACAY) ಸಂಸ್ಥಾಪಕರಾಗಿದ್ದಾರೆ. ಸೈಕಲ್ ಸವಾರಿಯೆಂದರೆ ಕಿರಣ್ ಸೇಠ್ ಅವರಿಗೆ ಬಹಳ ಇಷ್ಟ. ಪರಿಸರ ಸ್ನೇಹಿಯಾಗಿರುವ ಸೈಕಲನ್ನು ಸಾರ್ವಜನಿಕರು ಸಾರಿಗೆ ವ್ಯವಸ್ಥೆಯಾಗಿ ಹೆಚ್ಚೆಚ್ಚು ಬಳಸಬೇಕೆಂಬುದರ ಬಗ್ಗೆ ಅರಿವು ಮೂಡಿಸಲು ಕಿರಣ್ ಸೇಠ್ ಈ ಅಭಿಯಾನ ಕೈಗೊಂಡಿದ್ದಾರೆ. ಸೈಕಲ್ ಸವಾರಿಯಿಂದ ಆರೋಗ್ಯಕ್ಕೂ ಒಳ್ಳೆಯದು ಎಂದಿರುವ ಅವರು ಸೈಕಲ್ ಬಳಕೆಯಿಂದ ಪೆಟ್ರೋಲ್, ಡೀಸೆಲ್ ಉಳಿಸಲು ಸಹಾಯಕವಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Success Story: 71ನೇ ವಯಸ್ಸಿನಲ್ಲೂ ಜೆಸಿಬಿ, ಲಾರಿಯಂತಹ 11 ರೀತಿಯ ವಾಹನಗಳನ್ನು ಚಲಾಯಿಸುತ್ತಾರೆ ಈ ಅಜ್ಜಿ!
ಮಾರ್ಚ್ 11ರಂದು ದೆಹಲಿಯಿಂದ ತಮ್ಮ ಸೈಕಲ್ ಪ್ರಯಾಣವನ್ನು ಆರಂಭಿಸಿದ ಕಿರಣ್ ಸೇಠ್ ಮೊದಲು ಜೈಪುರದವರೆಗೆ ಸೈಕಲ್ನಲ್ಲಿ ಪ್ರಯಾಣಿಸಬೇಕೆಂದು ಪ್ಲಾನ್ ಮಾಡಿದ್ದರು. ಆದರೆ, ಜೈಪುರಕ್ಕೆ ತಲುಪಿದ ನಂತರ ಇನ್ನೂ ಮುಂದುವರೆಯಲು ನಿರ್ಧರಿಸಿದರು. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣದ ಜಿಲ್ಲೆಗಳನ್ನು ದಾಟಿ ಭಾನುವಾರ ರಾಜ್ಘಾಟ್ ತಲುಪಿದ್ದಾರೆ.
‘ಸೈಕ್ಲಿಂಗ್ ಎಂದರೆ ಧ್ಯಾನವಿದ್ದಂತೆ. ಅದರಿಂದ ಆರೋಗ್ಯ ಹೆಚ್ಚಾಗುವುದು ಮಾತ್ರವಲ್ಲದೆ ಮನಸಿನ ನೆಮ್ಮದಿಯೂ ಹೆಚ್ಚುತ್ತದೆ. ನಾನು ದಿನವೂ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸೈಕ್ಲಿಂಗ್ ಮಾಡುತ್ತಿದ್ದೆ. ಆಮೇಲೆ ಬಿಸಿಲು ಹೆಚ್ಚಾಗುತ್ತಿದ್ದುದರಿಂದ ಸೈಕ್ಲಿಂಗ್ ನಿಲ್ಲಿಸುತ್ತಿದ್ದೆ. ನಾನು ಗಂಟೆಗೆ 15 ಕಿ.ಮೀ. ದೂರವನ್ನು ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದೆ. ಹೀಗೆ ದಿನಕ್ಕೆ 40ರಿಂದ 50 ಕಿ.ಮೀ. ಸೈಕ್ಲಿಂಗ್ ಮಾಡುತ್ತಿದ್ದೆ’ ಎಂದು ಕಿರಣ್ ಸೇಠ್ ಹೇಳಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Wed, 8 June 22