ಮಹಾನ್ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು 2020ರ ಸೆ.25ರಂದು ನಿಧನರಾದರು. ಅಭಿಮಾನಿಗಳು ಎಂದೂ ಮರೆಯಲು ಸಾಧ್ಯವಿಲ್ಲದಷ್ಟು ಸಾಧನೆಯನ್ನು ಎಸ್ಪಿಬಿ ಮಾಡಿದ್ದಾರೆ. ಎಷ್ಟೇ ಹೊಸ ಗಾಯಕರು ಚಿತ್ರರಂಗಕ್ಕೆ ಬಂದರೂ ಇಂದಿಗೂ ಕೋಟ್ಯಂತರ ಸಂಗೀತಪ್ರಿಯರಿಗೆ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರೇ ಫೇವರಿಟ್. ನಿಧನರಾಗುವುದಕ್ಕೂ ಮುನ್ನ ಅವರು ಕನ್ನಡದ ‘ಅಕ್ಷಿ’ ಚಿತ್ರದ ಒಂದು ಗೀತೆಗೆ ಧ್ವನಿಯಾಗಿದ್ದರು.
ಜನರಲ್ಲಿ ನೇತ್ರದಾನದ ಕುರಿತು ಅರಿವು ಮೂಡಿಸುವಂತಹ ಪ್ರಯತ್ನವನ್ನು ಅಕ್ಷಿ ಸಿನಿಮಾ ಮಾಡಲಿದೆ. ಕಲಾದೇಗುಲ ಶ್ರೀನಿವಾಸ್ ಅವರು ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಒಂದು ಗೀತೆ ತುಂಬ ವಿಶೇಷವಾಗಿದೆ. ಕಣ್ಣು ಇಲ್ಲದವರಿಗೆ ಬಣ್ಣಗಳ ಬಗ್ಗೆ ವಿವರಿಸಿ ಹೇಳುವಂತಹ ಸಾಲುಗಳನ್ನು ಕಲಾದೇಗುಲ ಶ್ರೀನಿವಾಸ್ ಬರೆದಿದ್ದಾರೆ. ಈ ಹಾಡಿಗೆ ಜೀವ ತುಂಬಿರುವವರು ಎಸ್.ಪಿ. ಬಾಲಸುಬ್ರಹ್ಮಣ್ಯಂ. ನಿಧನರಾಗುವುದಕ್ಕೂ ಮುನ್ನ ಅವರು ಹಾಡಿದ ಕೊನೇ ಕೆಲವು ಹಾಡುಗಳಲ್ಲಿ ಇದು ಕೂಡ ಒಂದು.
ಈವರೆಗೂ ಬಣ್ಣವನ್ನೇ ನೋಡಿರದ ವ್ಯಕ್ತಿಗಳಿಗೆ ಬಣ್ಣಗಳ ಬಗ್ಗೆ ವಿವರ ನೀಡುವುದು ಹೇಗೆ? ಇಂಥದ್ದೊಂದು ಕುತೂಹಲ ಮೂಡುವುದು ಸಹಜ. ಅದನ್ನು ತಿಳಿದುಕೊಳ್ಳಲು ಜನರು ಸಿನಿಮಾ ನೋಡಬೇಕು. ಮೊದಲೇ ಹಾಡನ್ನು ಬಿಡುಗಡೆ ಮಾಡುವ ಬದಲು ಜನರು ನೇರವಾಗಿ ಚಿತ್ರಮಂದಿರದಲ್ಲಿಯೇ ಅದನ್ನು ನೋಡಲಿ ಎಂಬುದು ನಿರ್ದೇಶಕ ಮನೋಜ್ ಕುಮಾರ್ ಅವರ ಆಸೆ. ಏಪ್ರಿಲ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
‘ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದರಿಂದ ರೆಕಾರ್ಡಿಂಗ್ ಸಮಯದಲ್ಲಿ ನನಗೆ ಎಸ್.ಪಿ.ಬಿ. ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ರಾಷ್ಟ್ರ ಪ್ರಶಸ್ತಿ ಬಂದಿರುವ ಈ ಸಮಯದಲ್ಲಿ ಅವರು ನಮ್ಮೊಂದಿಗೆ ಇದ್ದಿದ್ದರೆ ಹೆಚ್ಚು ಖುಷಿ ಪಡುತ್ತಿದ್ದರು. ಈಗ ಅವರಿಲ್ಲ ಎಂಬದೇ ಬೇಸರ’ ಎನ್ನುತ್ತಾರೆ ನಿರ್ದೇಶಕರು. ಇಳಾ ವಿಟ್ಲ, ಗೋವಿಂದೇ ಗೌಡ, ಮಿಥುನ್, ಸೌಮ್ಯ ಪ್ರಭು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಆಗಲಿದೆ.
‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಫೇಮಸ್ ಆದವರು ಗೋವಿಂದೇ ಗೌಡ. ಅಂಥ ಹಾಸ್ಯ ಕಲಾವಿದ ಈ ಸಿನಿಮಾದಲ್ಲಿ ಗಂಭೀರವಾದ ಪಾತ್ರ ನಿಭಾಯಿಸಿದ್ದಾರೆ. ಅವರೇ ಆಯ್ಕೆಯೇ ಅನೇಕರಿಗೆ ಅಚ್ಚರಿ ಮೂಡಿಸುತ್ತದೆ. ಅದಕ್ಕೆ ನಿರ್ದೇಶಕರು ನೀಡುವ ಕಾರಣ ಬೇರೆ ರೀತಿ ಇದೆ.
‘ಇದುವರೆಗೂ ಎಲ್ಲರನ್ನೂ ನಗಿಸುವಂತಹ ಕಲಾವಿದ ಏಕಾಏಕಿ ಎಮೋಷನಲ್ ಆದ ವಿಷಯ ಹೇಳಿದರೆ ಅದರ ಪರಿಣಾಮ ಹೆಚ್ಚು ತೀವ್ರವಾಗಿರುತ್ತದೆ. ಹಾಗಾಗಿ ಗೋವಿಂದೇಗೌಡ ಅವರನ್ನು ಆಯ್ಕೆ ಮಾಡಿಕೊಂಡೆ. ಅವರು ಆ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ. ಅದೇ ರೀತಿ ಇಳಾ ವಿಟ್ಲಾ ಅವರು ತುಂಬ ಚೆನ್ನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪ್ರಶಸ್ತಿ ಎಲ್ಲರಿಗೂ ಸೇರುವಂಥದ್ದು’ ಎಂಬುದು ನಿರ್ದೇಶಕರ ಮಾತು.
‘ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಹೆಚ್ಚು ಜನರು ನೋಡಬೇಕು. ನೋಡಿದ ಬಳಿಕ ಕೇವಲ 10 ಜನರು ನೇತ್ರದಾನಕ್ಕೆ ಮುಂದಾದರೂ ನಮ್ಮ ಆಶಯ ಈಡೇರಿದಂತೆ ಆಗುತ್ತದೆ. ಹೆಚ್ಚು ಜನರಿಗೆ ಸಿನಿಮಾ ತಲುಪಿದರೆ ಅದು ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದಕಿಂತಲೂ ಜಾಸ್ತಿ ಖುಷಿ ನೀಡುತ್ತದೆ’ ಎಂದಿದ್ದಾರೆ ನಿರ್ದೇಶಕ ಮನೋಜ್ ಕುಮಾರ್.
ಇದನ್ನೂ ಓದಿ: National Film Awards 2019: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ‘ಅಕ್ಷಿ’ ಚಿತ್ರಕ್ಕೂ ಡಾ. ರಾಜ್ಕುಮಾರ್ಗೂ ಇದೆ ಸಂಬಂಧ!
National Film Awards 2019: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಒಲಿದ ರಾಷ್ಟ್ರ ಪ್ರಶಸ್ತಿ