‘ನವಗ್ರಹ’ ರಿ-ರೀಲೀಸ್​: ದರ್ಶನ್ ಅಭಿಮಾನಿಗಳಿಗೆ ಚಿತ್ರಮಂದಿರ ಮಾಲೀಕರ ಎಚ್ಚರಿಕೆ

Navagraha Movie: ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆ ಮಾಡುತ್ತಿರುವ ಚಿತ್ರಮಂದಿರಗಳ ಮಾಲೀಕರು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

‘ನವಗ್ರಹ’ ರಿ-ರೀಲೀಸ್​: ದರ್ಶನ್ ಅಭಿಮಾನಿಗಳಿಗೆ ಚಿತ್ರಮಂದಿರ ಮಾಲೀಕರ ಎಚ್ಚರಿಕೆ

Updated on: Nov 07, 2024 | 3:56 PM

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್​ಗೆ ಮಧ್ಯಂತರ ಜಾಮೀನು ದೊರೆತಿದ್ದು, ಕೆಂಗೇರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಜೈಲಿಗೆ ಹೋದ ಸಮಯವನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ಕಾರ್ಯವನ್ನು ಕೆಲ ನಿರ್ಮಾಪಕರು, ವಿತರಕರು ಮಾಡಿದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ಅವರ ನಟನೆಯ ಕೆಲ ಸಿನಿಮಾಗಳು ಮರು ಬಿಡುಗಡೆ ಆದವು, ಕೆಲವು ತಕ್ಕ ಮಟ್ಟಿಗೆ ಹಣವನ್ನೂ ಮಾಡಿದವು. ಇದೀಗ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಆದರೆ ಸಿನಿಮಾ ಮರು ಬಿಡುಗಡೆಗೆ ಮುನ್ನ ಚಿತ್ರಮಂದಿರಗಳ ಮಾಲೀಕರು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

‘ನವಗ್ರಹ’ ಸಿನಿಮಾ ಮರುಬಿಡುಗಡೆ ಆಗುತ್ತಿರುವ ಪ್ರಸನ್ನ ಚಿತ್ರಮಂದಿರದ ಮುಂದೆ ಎಚ್ಚರಿಕೆ ಫಲಕವನ್ನು ಚಿತ್ರಮಂದಿರದ ಸಿಬ್ಬಂದಿ ಅಳವಡಿಸಿದ್ದು, ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ‘ದರ್ಶನ್ ಅಭಿಮಾನಿಗಳೇ, ಯಾರೂ ಕೂಡ ಸಿನಿಮಾ ನೋಡಲು ಬಂದಾಗ ಯಾರ ವಿರುದ್ದವೂ ಘೋಷಣೆ ಕೂಗುವುದು ದಿಕ್ಕಾರ ಕೂಗುವುದು ಮಾಡಬೇಡಿ. ಈ ನಿಯಮ ಪಾಲನೆ ಮಾಡದಿದ್ದರೆ ನಿರ್ಮಾಪಕನಿಗೆ ಹಾಗೆ ದರ್ಶನ್ ಸರ್ ಗೆ ತೊಂದರೆ ಆಗುವುದು, ‘ಕರಿಯ’ ಸಿನಿಮಾ ಮರು ಬಿಡುಗಡೆ ಸಮಯದಲ್ಲಾದ ಕೆಟ್ಟ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ’ ಎಂದಿದ್ದಾರೆ.

ಇದನ್ನೂ ಓದಿ:ಗೌಪ್ಯವಾಗಿದೆ ದರ್ಶನ್ ಚಿಕಿತ್ಸೆ ಮಾಹಿತಿ; ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ವರದಿ ಸಲ್ಲಿಕೆ

ಕೆಲ ತಿಂಗಳ ಹಿಂದೆ ದರ್ಶನ್ ನಟನೆಯ ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗಿತ್ತು. ಆ ಸಮಯದಲ್ಲಿ ದರ್ಶನ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದರು. ಚಿತ್ರಮಂದಿರದ ಮೇಲೆ ದರ್ಶನ್​ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ಸಿಗರೇಟು ಹಿಡಿದು ಕೂತಿದ್ದ ಚಿತ್ರವನ್ನು ಪೋಸ್ಟರ್ ರೀತಿ ಹಾಕಿದ್ದರು. ಮಾಧ್ಯಮದ ವಿರುದ್ಧ, ಪೊಲೀಸರ ವಿರುದ್ಧ, ಕೆಲ ನಟರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದರು. ದರ್ಶನ್​ ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಬೇಸತ್ತು ಪೊಲೀಸರು ‘ಕರಿಯ’ ಶೋ ಅನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರು. ಶೋ ಬಂದ್ ಮಾಡಿದ್ದಲ್ಲದೆ, ಮುಂದಿನ ಶೋಗಳನ್ನು ಸಹ ರದ್ದು ಮಾಡಿಸಿದ್ದರು. ಅತಿರೇಕದಿಂದ ವರ್ತಸಿದ ಕೆಲ ಅಭಿಮಾನಿಗಳನ್ನು ವಶಕ್ಕೆ ಸಹ ಪಡೆದಿದ್ದರು ಪೊಲೀಸರು.

ಅದೇ ಕಾರಣಕ್ಕೆ ಚಿತ್ರಮಂದಿರಗಳ ಮಾಲೀಕರು ಈ ಬಾರಿ ಎಚ್ಚರಿಕೆ ವಹಿಸಿದ್ದು, ದರ್ಶನ್ ಅಭಿಮಾನಿಗಳು ಶಿಸ್ತಿನಿಂದ ವರ್ತಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ. ‘ಕರಿಯ’ ಸಿನಿಮಾದ ಮರು ಬಿಡುಗಡೆ ಆದಾಗ ನಡೆದ ಘಟನೆಗಳು ಮರುಕಳಿಸಿದರೆ ಮತ್ತೆ ಪೊಲೀಸರು ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಈಗ ಚಿತ್ರಮಂದಿರಗಳ ಮಾಲೀಕರೆ ಮುಂಜಾಗೃತೆ ಕ್ರಮ ಕೈಗೊಳ್ಳುತ್ತಿದ್ದಾರೆ. ‘ನವಗ್ರಹ’ ಸಿನಿಮಾ ನವೆಂಬರ್ 8 ಕ್ಕೆ ನಗರದ ಕೆಲವು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ