ಪ್ರತಿ ಶುಕ್ರವಾರ ಬಂದರೆ ಗಾಂಧಿನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಎಷ್ಟೋ ಮಂದಿ ಹೊಸಬರ ಕನಸು ನನಸಾಗುವ ದಿನವಿದು. ಅದೇ ರೀತಿ ಇಂದು (ನ.26) ‘ಗೋರಿ’ ಚಿತ್ರದ (Goori Kannada Movie) ಹೊಸ ಪ್ರತಿಭೆಗಳ ತಂಡ ತಮ್ಮ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದೆ. ‘ಸಖತ್’ ಸಿನಿಮಾ (Sakath Movie) ಜೊತೆಯಲ್ಲೇ ತೆರೆಕಂಡಿರುವ ‘ಗೋರಿ’ ಚಿತ್ರಕ್ಕೆ ಉತ್ತರ ಕರ್ನಾಟಕ ಮೂಲದ ಕಿರಣ್ ಹಾವೇರಿ (Kiran Haveri) ಹೀರೋ. ಹಲವು ವರ್ಷಗಳ ಕಾಲ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಅವರಿಗೆ ಜೋಡಿಯಾಗಿ ಸ್ಮಿತಾ ಹಾವೇರಿ ನಟಿಸಿದ್ದಾರೆ. ಸ್ನೇಹಿತರೆಲ್ಲ ಜೊತೆಗೂಡಿ ‘ಗೋರಿ’ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ವೀರೇಶ್, ಶಾರದಾ ಚಿತ್ರಮಂದಿರಗಳು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಹಲವೆಡೆ ಈ ಸಿನಿಮಾ ರಿಲೀಸ್ ಆಗಿದೆ. ಹಾಡುಗಳ ಮೂಲಕ ಈಗಾಗಲೇ ‘ಗೋರಿ’ ಚಿತ್ರ ಗಮನ ಸೆಳೆದಿದೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದವರು ಗೋಪಾಲಕೃಷ್ಣ. ವಿನು ಮನಸು ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿವೆ. ಶಿವು ಬೇರ್ಗಿ, ಕೆ. ಕಲ್ಯಾಣ್, ಎಂ.ಎಚ್. ಜಗ್ಗಿನ್ ಸಾಹಿತ್ಯ ಬರೆದಿದ್ದಾರೆ. ‘ಅದು ಬ್ಯಾರೇನೆ ಐತಿ..’ ಹಾಡು ಉತ್ತರ ಕರ್ನಾಟದ ಫ್ಲೇವರ್ನಲ್ಲಿ ಮೂಡಿಬಂದಿದ್ದು, ಜನಮನ ಗೆದ್ದಿದೆ. ಅದೇ ರೀತಿ, ‘ಹೃದಯದ ಪರಿಚಯಕೆ..’ ಗೀತೆ ಕೂಡ ಪ್ರೇಮಿಗಳಿಗೆ ಇಷ್ಟ ಆಗಿದೆ. ಇನ್ನೇನಿದ್ದರೂ ಇಡೀ ಚಿತ್ರಕ್ಕೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಸಮಯ.
‘ಗೋರಿ’ ಸಿನಿಮಾದ ನಾಯಕ ಕಿರಣ್ ಅವರಿಗೆ ‘ಗೋಲ್ಡನ್ ಸ್ಟಾರ್’ ಗಣೇಶ್ ಅವರೇ ಸ್ಫೂರ್ತಿ. ಈಗ ತಮ್ಮ ನೆಚ್ಚಿನ ಹೀರೋ ಸಿನಿಮಾದ ಜೊತೆಯಲ್ಲೇ ತಮ್ಮ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದು ಅವರಿಗೆ ಇನ್ನಷ್ಟು ಖುಷಿ ನೀಡಿರುವ ಸಂಗತಿ. ಚಿತ್ರರಂಗದ ಹಲವರು ಕಿರಣ್ ಹಾವೇರಿ ಮತ್ತು ತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿ, ಶುಭಾಶಯ ಕೋರಿದ್ದಾರೆ.
ಮಂಜುನಾಥ ಹೆಗಡೆ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಿರುವ ‘ಗೋರಿ’ ಚಿತ್ರಕ್ಕೆ ‘ಪ್ರೀತಿಯ ಸಮಾಧಿ’ ಎಂಬ ಟ್ಯಾಗ್ಲೈನ್ ಇದೆ. ಆ ಮೂಲಕ ಸಿನಿಮಾ ಕಥೆ ಬಗ್ಗೆ ಕುತೂಹಲ ಮೂಡಿಸಲಾಗಿದೆ. ಮನರಂಜನೆ ಜೊತೆಗೆ ಭಾವೈಕ್ಯತೆಯ ಕುರಿತಂತೆ ಒಂದೊಳ್ಳೆ ಮೆಸೇಜ್ ಕೂಡ ಪ್ರೇಕ್ಷಕರಿಗೆ ಸಿಗಲಿದೆ ಎಂಬ ಭರವಸೆಯನ್ನು ‘ಗೋರಿ’ ತಂಡ ನೀಡಿದೆ.
ಇದನ್ನೂ ಓದಿ:
ಪುನೀತ್ ಹೊಸ ಚಿತ್ರ ‘ಲಕ್ಕಿ ಮ್ಯಾನ್’ ಶೀಘ್ರವೇ ರಿಲೀಸ್; ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್
ದೇವರಿಗೆ ಮುಡಿ ಕೊಟ್ಟು, ಪುನೀತ್ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ