ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನರಿಗೆ ಪರಿಚಿತರಾದರು. ಬಳಿಕ ಚುನಾವಣೆಯಲ್ಲೂ ಸ್ಪರ್ಧಿಸಿದರು. ಆದರೆ, ರಾಜಕೀಯದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಈಗ ಅವರು ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. ‘ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆ ಸ್ಪರ್ಧಿಸುವುದಿಲ್ಲ’ ಎಂದಿದ್ದಾರೆ. ಈ ಮೂಲಕ ನಿಖಿಲ್ ಅವರು ಮುಂದಿನ ಐದು ವರ್ಷ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಚಿತ್ರರಂಗಕ್ಕೆ ಬಂದಿದ್ದು 2016ರಲ್ಲಿ. ‘ಜಾಗ್ವಾರ್’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಅವರು ಒಂದು ದೊಡ್ಡ ಗ್ಯಾಪ್ ತೆಗೆದುಕೊಂಡು ‘ಸೀತಾರಾಮ ಕಲ್ಯಾಣ’ ಸಿನಿಮಾ ಮಾಡಿದರು. ಈ ಚಿತ್ರ 2019ರಲ್ಲಿ ರಿಲೀಸ್ ಆಯಿತು. ಅದೇ ವರ್ಷ ರಿಲೀಸ್ ಆದ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಅಭಿಮನ್ಯುನ ಪಾತ್ರದಲ್ಲಿ ಗಮನ ಸೆಳೆದರು. ಆ ಬಳಿಕ ‘ರೈಡರ್’ ಸಿನಿಮಾ ಮಾಡಿದರು. ಈ ಮಧ್ಯೆ ಅವರು ರಾಜಕೀಯದಲ್ಲೂ ತೊಡಗಿಕೊಂಡರು.
2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ, ಸುಮಲತಾ ಅಬ್ಬರದ ಮಧ್ಯೆ ನಿಖಿಲ್ ಪ್ರಭಾವ ಕೆಲಸ ಮಾಡಲಿಲ್ಲ. ಈ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋತರು. ರಾಜಕೀಯದಲ್ಲಿ ಅವರಿಗೆ ಗೆಲುವು ಸಿಗುತ್ತಿಲ್ಲ. ಹೀಗಾಗಿ, ಮಗನ ಭವಿಷ್ಯದ ಬಗ್ಗೆ ಕುಮಾರಸ್ವಾಮಿ ಅವರು ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದಿನ ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಮಗನ ರಾಜಕೀಯ ಭವಿಷ್ಯ ನುಡಿದ ಅಪ್ಪ ಹೆಚ್ಡಿ ಕುಮಾರಸ್ವಾಮಿ: ಮುಂದಿನ 5 ವರ್ಷ ನೋ ಪಾಲಿಟಿಕ್ಸ್
ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಮುಂದಿನ 5 ವರ್ಷ ನಿಖಿಲ್ನನ್ನು ಚುನಾವಣೆಗೆ ಕರೆತರುವ ಪ್ರಶ್ನೆಯೇ ಇಲ್ಲ. ಕಲಾವಿದನಾಗಿ ಜೀವನ ರೂಪಿಸಿಕೊಳ್ಳುವಂತೆ ನಿಖಿಲ್ಗೆ ಹೇಳಿದ್ದೇನೆ. ರಾಜಕೀಯದ ಸಹವಾಸಕ್ಕೆ ಹೋಗದೆ, ಭಗವಂತ ಕೊಟ್ಟ ಕಲೆ ಮುಂದುವರಿಸಿಕೊಂಡು ಹೋಗು ಎಂದಿದ್ದೇನೆ. ಈಗಾಗಲೇ 3 ಚಿತ್ರ ನಿರ್ಮಿಸಲು ಹಲವು ಸಂಸ್ಥೆಗಳು ಮುಂದೆ ಬಂದಿವೆ’ ಎಂದಿದ್ದಾರೆ.
ಇದನ್ನೂ ಓದಿ: ‘ಲೈಕಾ ಪ್ರೊಡಕ್ಷನ್ಸ್’ ನಿರ್ಮಾಣದ ಸಿನಿಮಾ ಮೂಲಕ ನಿಖಿಲ್ ಕುಮಾರ್ ಕಮ್ಬ್ಯಾಕ್; ಆ.23ಕ್ಕೆ ಸಿಹಿ ಸುದ್ದಿ
‘ಈಗಾಗಲೇ ನಿಖಿಲ್ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ತಯಾರಿರಲಿಲ್ಲ. ಕಾರ್ಯಕರ್ತರು ಹಾಗೂ ಶಾಸಕರ ಒತ್ತಡಕ್ಕೆ ನಿಖಿಲ್ ತಲೆ ಕೊಟ್ಟ. ಸೋಲು, ಗೆಲುವು ಸಾಮಾನ್ಯ. ಆ ಬಗ್ಗೆ ಚಿಂತಿಸುವುದಿಲ್ಲ’ ಎಂದಿದ್ದಾರೆ ಕುಮಾರಸ್ವಾಮಿ.
ಇತ್ತೀಚೆಗೆ ನಿಖಿಲ್ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಈ ಚಿತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Mon, 28 August 23