ನಟ ದರ್ಶನ್ (Darshan) ಅವರಿಗೆ ಇರೋ ಅಭಿಮಾನಿ ದೊಡ್ಡ ಬಳಗ ಇದೆ. ದರ್ಶನ್ ಅನ್ನೋದು ಈಗ ಬ್ರ್ಯಾಂಡ್ ಆಗಿದೆ. ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ದರ್ಶನ್ಗೆ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡ ಫ್ಯಾನ್ ಪೇಜ್ಗಳಿಗೆ ಲೆಕ್ಕ ಇಲ್ಲ. ಆಗಾಗ ಅವರ ಹಳೆಯ ಸಂದರ್ಶನಗಳ ವಿಡಿಯೋ ವೈರಲ್ ಆಗುತ್ತಿರುತ್ತದೆ. ಈಗ ನಟ ದರ್ಶನ್ ಅವರು ಚಂದನ ವಾಹಿನಿಗೆ ನೀಡಿದ ಸಂದರ್ಶನ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ದರ್ಶನ್ ಅವರು ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದರು. ಆಫರ್ ಕೊಟ್ಟ ನಿರ್ದೇಶಕರೊಬ್ಬರು ದರ್ಶನ್ ಬಳಿ ಹೆಸರು ಬದಲಿಸಿಕೊಳ್ಳುವಂತೆ ಹೇಳಿದ್ದರು. ಆದರೆ, ದರ್ಶನ್ ಇದಕ್ಕೆ ಒಪ್ಪಿಲ್ಲ. ತಂದೆ-ತಾಯಿ ಇಟ್ಟ ಹೆಸರಲ್ಲೇ ಮುಂದುವರೆಯುತ್ತೇನೆ ಎಂದು ಅವರು ಹೇಳಿ ಆಫರ್ ರಿಜೆಕ್ಟ್ ಮಾಡಿದ್ದರು.
ಚಿತ್ರರಂಗಕ್ಕೆ ಬಂದ ಬಳಿಕ ಹೆಸರು ಬದಲಿಸಿಕೊಂಡ ಅನೇಕರಿದ್ದಾರೆ. ಹೆಸರು ಹಳೆಯದಾಯ್ತು, ಚೆನ್ನಾಗಿ ಕೇಳಿಸಲ್ಲ ಹೀಗೆ ಹಲವು ಕಾರಣಕ್ಕೆ ಹೆಸರು ಬದಲಿಸಿಕೊಂಡ ಸ್ಟಾರ್ಗಳು ಇದ್ದಾರೆ. ಆದರೆ, ನಟ ದರ್ಶನ್ ಅವರು ಈ ವಿಚಾರದಲ್ಲಿ ಸಖತ್ ಭಿನ್ನ. ಅವರು ತಮ್ಮ ಹೆಸರನ್ನೇ ಬ್ರ್ಯಾಂಡ್ ಮಾಡಿದರು. ಈಗ ದರ್ಶನ್ ಪರಿಚಯ ರಾಜ್ಯದ ಎಲ್ಲರಿಗೂ ಇದೆ.
ದರ್ಶನ್ ಅವರು 1997ರ ‘ಮಹಾಭಾರತ’ ಸಿನಿಮಾದಲ್ಲಿ ಮೊದಲು ನಟಿಸಿದರು. 2000ರಲ್ಲಿ ‘ದೇವರ ಮಗ’ ಸಿನಿಮಾ ಮಾಡಿದರು. ಅದೇ ವರ್ಷ ತಮಿಳಿನ ‘ವಲ್ಲರಸು’ ಸಿನಿಮಾ ಕೂಡ ರಿಲೀಸ್ ಆಯಿತು. ನಂತರ ಕೆಲವು ಸಿನಿಮಾ ಮಾಡಿದರು. 2002ರಲ್ಲಿ ‘ಮೆಜೆಸ್ಟಿಕ್’ ಸಿನಿಮಾ ಮೂಲಕ ದರ್ಶನ್ ಹೀರೋ ಆಗಿ ಪರಿಚಯಗೊಂಡರು. ಹೀರೋ ಆಗಿ ನಟಿಸಿದ ಮೊದಲ ಸಿನಿಮಾದಲ್ಲೇ ಅವರಿಗೆ ಗೆಲುವು ಸಿಕ್ಕಿತು. ಈ ಅವಧಿಯಲ್ಲಿ ಅವರಿಗೆ ಬಂದ ಸಿನಿಮಾ ಆಫರ್ ಬಗ್ಗೆ ದರ್ಶನ್ ಮಾತನಾಡಿದ್ದರು.
‘ಯಾವುದೋ ಸಿನಿಮಾಗಾಗಿ ಓರ್ವ ದೊಡ್ಡ ಡೈರೆಕ್ಟರ್ನ ಭೇಟಿ ಮಾಡೋಕೆ ಹೋಗಿದ್ದೆ. ಆಗ ವಿಲನ್ ಪಾತ್ರ ಮಾಡುತ್ತಿದ್ದೆ. ಮಾತುಕತೆ ವೇಳೆ ನಿರ್ದೇಶಕರು ಸಿನಿಮಾ ಮಾಡೋಕೆ ಒಪ್ಪಿದ್ದರು. ಆದರೆ, ಹೆಸರು ಚೆನ್ನಾಗಿಲ್ಲ. ಹೆಸರು ಚೇಂಜ್ ಮಾಡೋಣ ಎಂದರು. ದೊಡ್ಡ ಡೈರೆಕ್ಟರ್ ಆದರೂ ನಾನು ಮಾತನಾಡಲೇಬೇಕು ಎಂದುಕೊಂಡೆ’ ಎಂದು ದರ್ಶನ್ ಹೇಳಿದ್ದರು.
‘ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಅವಕಾಶ ಕೊಡದೇ ಇದ್ದರೂ ಬೇಸರ ಇಲ್ಲ. ಕೊಟ್ರೆ ಬಂದು ಮಾಡ್ತೀನಿ. ಇದು ಅಪ್ಪ ಅಮ್ಮ ಇಟ್ಟ ಹೆಸರು. ಅದನ್ನೇ ಮುಂದುವರಿಸಿಕೊಂಡು ಹೋಗುತ್ತೇನೆ. ನೀವು ಕೊಟ್ಟ ಕ್ಯಾರೆಕ್ಟರ್ಗಾಗಿ ಹೆಸರು ಬದಲಿಸಿಕೊಳ್ಳುವುದಿಲ್ಲ. ಧನ್ಯವಾದ ಹೇಳಿ ಬಂದೆ. ಆ ಬಳಿಕ ಆ ಸಿನಿಮಾನ ಬಿಟ್ಟೆ’ ಎಂದು ದರ್ಶನ್ ಹೇಳಿದ್ದರು. ದರ್ಶನ್ ಅವರ ಹಳೆಯ ಹೇಳಿಕೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಹಾರರ್ ಸಿನಿಮಾನಲ್ಲಿ ರಚಿತಾ, ಸತೀಶ್ ನೀನಾಸಂ, ‘ಮ್ಯಾಟ್ನಿ’ಗೆ ದರ್ಶನ್ ಬೆಂಬಲ
ದರ್ಶನ್ ಅವರು ‘ಕಾಟೇರ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸದ್ಯ ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ