‘ಒನ್ ಆ್ಯಂಡ್ ಹಾಫ್’ ಚಿತ್ರೀಕರಣ ಪೂರ್ಣ; ಹಾಡಿನ ಗ್ಲಿಂಪ್ಸ್ ಬಿಡುಗಡೆ ಮಾಡಿದ ಚಿತ್ರತಂಡ
‘ಒನ್ ಆ್ಯಂಡ್ ಹಾಫ್’ ಸಿನಿಮಾಗೆ ಶ್ರೇಯಸ್ ಚಿಂಗಾ ಅವರು ನಿರ್ದೇಶನ ಮಾಡಿದ್ದಾರೆ. ಆರ್. ಚರಣ್ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಪಾತ್ರವರ್ಗದಲ್ಲಿ ಶ್ರೇಯಸ್ ಚಿಂಗಾ, ಮಾನ್ವಿತಾ ಕಾಮತ್ ಮುಂತಾದವರು ಇದ್ದಾರೆ. ಇತ್ತೀಚೆಗೆ ಆರ್. ಚರಣ್ ಜನ್ಮದಿನದ ಪ್ರಯುಕ್ತ ‘ಒನ್ ಆ್ಯಂಡ್ ಹಾಫ್’ ಚಿತ್ರದ ಹಾಡಿನ ಗ್ಲಿಂಪ್ಸ್ ಅನಾವರಣ ಆಯಿತು. ಚಿತ್ರತಂಡದ ಬಗ್ಗೆ ವಿವರ ಇಲ್ಲಿದೆ..
ಈ ಮೊದಲು ‘ಡೇವಿಡ್’, ‘ರಂಗ್‌ಬಿರಂಗಿ’, ‘ದಿ ವೇಕೆಂಟ್ ಹೌಸ್’ ಸಿನಿಮಾಗಳಲ್ಲಿ ಅಭಿನಯಿಸಿದ್ದ ಶ್ರೇಯಸ್ ಚಿಂಗಾ ಅವರು ಈಗ ‘ಒನ್ ಆ್ಯಂಡ್ ಹಾಫ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಬರುತ್ತಿರುವ ಮೊದಲ ಸಿನಿಮಾ ಇದು. ‘ಒನ್ ಆ್ಯಂಡ್ ಹಾಫ್’ ಸಿನಿಮಾಗೆ ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದು ಕಾಮಿಡಿ ಜಾನರ್ನ ಸಿನಿಮಾ. ಇದರಲ್ಲಿ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ ಎನ್ನುತ್ತಿದೆ ಚಿತ್ರತಂಡ. ಈ ಸಿನಿಮಾದಲ್ಲಿ ಹೀರೋ ಪಾತ್ರದ ಹೆಸರು ಕನ್ನಡ! ಇತ್ತೀಚೆಗೆ ಹೊಸ ಹಾಡಿನ ಗ್ಲಿಂಪ್ಸ್ ಬಿಡುಗಡೆ ಮಾಡಲಾಯಿತು.
‘ಒನ್ ಆ್ಯಂಡ್ ಹಾಫ್’ ಸಿನಿಮಾದಲ್ಲಿ ಶ್ರೇಯಸ್ ಚಿಂಗಾ ಜೊತೆ ಮಾನ್ವಿತಾ ಕಾಮತ್, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಅವಿನಾಶ್, ‘ಸ್ಪರ್ಶ’ ರೇಖಾ, ಸುಂದರಶ್ರೀ, ಅನಂತು, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್ ಕುಮಾರ್, ನಿಕಿತಾ ದೋರ್ತೊಡಿ, ಮಹಾಂತೇಶ್ ಹಿರೇಮಠ್, ಲಲಿತಾ ನಾಯಕ್, ಅಮಾನ್, ರೋಹಿತ್ ಅರುಣ್, ರಾಖಿ ಭೂತಪ್ಪ ಮುಂತಾದ ಕಲಾವಿದರು ನಟಿಸಿದ್ದಾರೆ.
ತಾಂತ್ರಿಕ ಬಳಗದ ಬಗ್ಗೆ ಹೇಳುವುದಾದರೆ, ‘ಒನ್ ಆ್ಯಂಡ್ ಹಾಫ್’ ಸಿನಿಮಾಗೆ ದೇವೇಂದ್ರ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಈ ಸಿನಿಮಾಗಿದೆ. ರೊಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಈ ಸಿನಿಮಾವನ್ನು ‘ಸುಲಕ್ಷ್ಮೀ ಫಿಲ್ಮ್ಸ್’ ಮೂಲಕ ಆರ್. ಚರಣ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇಂಪನಾ ಪ್ರಸಾದ್, ಸಂತೋಷ್ ನಾಗೇನಹಳ್ಳಿ ಹಾಗೂ ಅರ್ಪಿತ್ ನಾರಾಯಣ್ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ.
ಸಿನಿಮಾ ಕ್ಷೇತ್ರದ ಬಗ್ಗೆ ಅಪಾರ ಉತ್ಸಾಹ ಇರುವ ಆರ್. ಚರಣ್ ಅವರು ‘ಒನ್ ಆ್ಯಂಡ್ ಹಾಫ್’ ಸಿನಿಮಾದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರು ಜನ್ಮದಿನದ ಪ್ರಯುಕ್ತ ಸಾಂಗ್ ಗ್ಲಿಂಪ್ಸ್ ಬಿಡುಗಡೆ ಮಾಡಲಾಯಿತು. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರತಂಡದವರು ಭಾಗಿಯಾಗಿದ್ದರು. ನಟಿ ಮಾನ್ವಿತಾ ಮಾತನಾಡಿ, ‘ಇದು ನನಗೆ ವಿಶೇಷವಾದ ಸಿನಿಮಾ. ಈ ಸಿನಿಮಾ ಒಪ್ಪಿಕೊಂಡ ಮೇಲೆ ನನ್ನ ಬದುಕಿನಲ್ಲಿ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಶ್ರೇಯಸ್ ಅವರು ನಟನಾಗಿ ಹಾಗೂ ನಿರ್ದೇಶಕನಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ: ಕಳಸದಲ್ಲಿ ನಡೆಯಿತು ಮಾನ್ವಿತಾ-ಅರುಣ್ ವಿವಾಹ; ಇಲ್ಲಿದೆ ಮದುವೆಯ ಫೋಟೋಗಳು
‘ಇದು ತುಂಬ ಡಿಫರೆಂಟ್ ಸಿನಿಮಾ’ ಎಂದು ಹೀರೋ ಕಮ್ ನಿರ್ದೇಶಕ ಶ್ರೇಯಸ್ ಚಿಂಗಾ ಹೇಳಿದ್ದಾರೆ. ನಿರ್ಮಾಪಕ ಆರ್. ಚರಣ್ ಸುಬ್ಬಯ್ಯ ಮಾತನಾಡಿ ಶ್ರೇಯಸ್ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಶ್ರೇಯಸ್ ಈ ಮೊದಲು ಮಾಡಿದ್ದ ‘ಡೇವಿಡ್’ ಸಿನಿಮಾ ನೋಡಿ ಇಷ್ಟಪಟ್ಟಿದ್ದೆ. ನಾನು ಊಹೆ ಕೂಡ ಮಾಡಲು ಆಗದಂತಹ ರೀತಿಯಲ್ಲಿ ಸಿನಿಮಾ ಮಾಡಿದ್ದಾನೆ. ಯಾವುದಾದ್ರೂ ಕನ್ಸೆಪ್ಟ್ ಇದ್ದರೆ ಹೇಳು ಅಂತ ಕೇಳಿದೆ. ಅವನು ಹೇಳಿದ ಈ ಕಥೆ ನನಗೆ ತುಂಬ ಇಷ್ಟವಾಯಿತು’ ಎಂದು ನಿರ್ಮಾಪಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.