ಅದ್ಧೂರಿಯಾಗಿ ಬಿಡುಗಡೆ ಆಯ್ತು ‘ಪರವಶ’ ಪೋಸ್ಟರ್, ರವಿಚಂದ್ರ ಪಾತ್ರವೇನು?
Paravasha Movie: ‘ಪರವಶ’ ಸಿನಿಮಾದ ಹೆಸರು ಹಾಗೂ ಪೋಸ್ಟರ್ ಇತ್ತೀಚೆಗಷ್ಟೆ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ನಟ ರವಿಚಂದ್ರನ್ ಅವರಿಗೆ ಈ ಸಿನಿಮಾದಲ್ಲಿ ಭಿನ್ನ ಪಾತ್ರ ನೀಡಲಾಗಿದೆ.
ನೂತನ ಪ್ರತಿಭೆ ರಘು ಭಟ್ ಪ್ರಮುಖಪಾತ್ರದಲ್ಲಿ ನಟಿಸಿರುವ ಹೊಸ ಸಿನಿಮಾ ‘ಪರವಶ’ ಚಿತ್ರೀಕರಣ (Shooting) ಮುಕ್ತಾಯ ಹಂತದಲ್ಲಿದ್ದು, ಇತ್ತೀಚೆಗಷ್ಟೆ ಈ ಚಿತ್ರದ ಹೆಸರು ಹಾಗೂ ಪೋಸ್ಟರ್ ಅನ್ನು ನೆಲಮಂಗಲದ ಬಳಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯ್ತು. ಸಿನಿಮಾಕ್ಕೆ ‘ಪರವಶ’ ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ನಟ ರವಿಚಂದ್ರನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವ್ಯಕ್ತ ಸಿನಿಮಾಸ್ ಲಾಂಛನದಲ್ಲಿ ಹರೀಶ್ ಗೌಡ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ್ದಾರೆ.
‘ಹೊಸತಂಡದ ಜೊತೆಗೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಾನು ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನನ್ನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಲವರು ಹಲವು ರೀತಿಯ ಪಾತ್ರಗಳನ್ನು ನನಗೆ ನೀಡಿದ್ದಾರೆ. ಈ ಸಿನಿಮಾದಲ್ಲಿ ನನಗೆ ‘ಘೋಸ್ಟ್ ಡಾಕ್ಟರ್’ ಪಾತ್ರ ಕೊಟ್ಟಿದ್ದಾರೆ. ನಿರ್ದೇಶಕ ಸುಧೀಂದ್ರ ನಾಡಿಗರ್ ಅವರ ನಿರ್ದೇಶನದ ಶೈಲಿ ಭಿನ್ನವಾಗಿದೆ. ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.
‘ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಈಗಾಗಲೇ ನಲವತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಮಂಗಳೂರು, ಉಡುಪಿ, ಮಣಿಪಾಲ ಹಾಗೂ ಕುಂದಾಪುರದಲ್ಲಿ ಚಿತ್ರೀಕರಣವಾಗಿದೆ. ರವಿಚಂದ್ರನ್, ರಘು ಭಟ್, ಸೋನಾಲ್ ಮೊಂಟೆರೊ, ಪವಿತ್ರ ಲೋಕೇಶ್, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾಯಕ ರಘು ಭಟ್ “ಪರವಶ” ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಹಾಗೂ ಪ್ರತೀಕ್ ಶೆಟ್ಟಿ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ನಿಡವಳ್ಳಿ ಬರೆದಿದ್ದಾರೆ’ ಎಂದು ನಿರ್ದೇಶಕ ಸುಧೀಂದ್ರ ನಾಡಿಗರ್ ತಿಳಿಸಿದರು.
ಇದನ್ನೂ ಓದಿ:ಹಾಲಿವುಡ್ಗೆ ರಿಮೇಕ್ ಆಗಲಿದೆ ರವಿಚಂದ್ರನ್ ನಟನೆಯ ಸಿನಿಮಾ; ಯಾವುದು ಗೊತ್ತಾ?
‘ನಾನು ನಿರ್ಮಾಣ ಮಾಡುತ್ತಿರುವ ‘ಪರವಶ’ ಸಿನಿಮಾದ ಶೀರ್ಷಿಕೆ ನಮ್ಮೂರಿನಲ್ಲಿ ಬಿಡುಗಡೆ ಆಗಿರುವುದು ಖುಷಿಯಾಗಿದೆ. ಹೊಸತಂಡಕ್ಕೆ ಪ್ರೋತ್ಸಾಹ ನೀಡುತ್ತಿರುವ ರವಿಚಂದ್ರನ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಹರೀಶ್ ಗೌಡ. ‘ಥ್ರಿಲ್ಲರ್, ಕೌಟುಂಬಿಕ ಹಾಗೂ ಪ್ರೇಮ ಕಥಾಹಂದರವುಳ್ಳ “ಪರವಶ” ಚಿತ್ರದಲ್ಲಿ ಜನರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಒಟ್ಟಿನಲ್ಲಿ ಪ್ರೇಕ್ಷಕ ಕೊಟ್ಟ ದುಡ್ಡಿಗೆ ದುಪ್ಪಟ್ಟು ಮನೋರಂಜನೆ ನೀಡುವ ಚಿತ್ರವಿದು. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಕೂಡ ಮುದ ನೀಡುತ್ತದೆ ಎಂದು ನಾಯಕ ಹಾಗೂ ಕಥೆಗಾರ ಸಹ ಆಗಿರುವ ರಘು ಭಟ್ ತಿಳಿಸಿದರು.
ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ. ಈ ತಂಡದ ಜೊತೆಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದರು ನಾಯಕಿ ಸೋನಾಲ್ ಮೊಂಟೆರೊ. ಕಲಾವಿದರಾದ ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಹಾಗೂ ಛಾಯಾಗ್ರಾಹಕ ಆನಂದ್ ಮೀನಾಕ್ಷಿ ಚಿತ್ರತಂಡದ ಅನೇಕ ಸದಸ್ಯರು ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Sun, 3 March 24