Parul Yadav: “ಒಂದು ವೇಳೆ ನಾನು ಸತ್ತರೆ…” ಪಾರುಲ್ ಯಾದವ್ ಹೀಗೆ ಬರೆಯಲು ಕಾರಣವಾಗಿದ್ದ ಕರುಣಾಜನಕ ಕತೆ ತಿಳಿದಿದೆಯೇ?

| Updated By: shivaprasad.hs

Updated on: Jul 27, 2021 | 6:45 PM

ಪಾರುಲ್ ಯಾದವ್: ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರಿ ವೈರಸ್​ ದಾಳಿಗೆ ತುತ್ತಾದ ಪಾರುಲ್ ಯಾದವ್ ತಮ್ಮ ಅನುಭವಗಳನ್ನು ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸೋಂಕಿನಿಂದ ಹೊರಬರಲು ಬಹಳ ಕಷ್ಟವಾಯಿತು ಎಂದು ತಮ್ಮ ಅನುಭವಗಳನ್ನು ಅವರು ತೆರೆದಿಟ್ಟಿದ್ದಾರೆ.

Parul Yadav: ಒಂದು ವೇಳೆ ನಾನು ಸತ್ತರೆ... ಪಾರುಲ್ ಯಾದವ್ ಹೀಗೆ ಬರೆಯಲು ಕಾರಣವಾಗಿದ್ದ ಕರುಣಾಜನಕ ಕತೆ ತಿಳಿದಿದೆಯೇ?
ಪಾರುಲ್ ಯಾದವ್(ಸಂಗ್ರಹ ಚಿತ್ರ)
Follow us on

ಕೊವಿಡ್-19 ಸಾಂಕ್ರಾಮಿಕವು ಯಾರನ್ನೂ ಬಿಟ್ಟಿಲ್ಲ. ಅನೇಕ ತಾರೆಗಳು ಸೋಂಕಿಗೆ ತುತ್ತಾಗಿ ಕಷ್ಟವನ್ನು ಅನುಭವಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಪಾರುಲ್ ಯಾದವ್ ಮತ್ತು ಅವರ ಕುಟುಂದವರೂ ಸಹ ಸೋಂಕಿಗೆ ತುತ್ತಾಗಿದ್ದರು. ಈಗ ಸೋಂಕನ್ನು ಗೆದ್ದಿರುವ ಅವರು ಆಗಿನ ತಮ್ಮ ಮಾನಸಿಕ ಸಮಸ್ಯೆಗಳನ್ನು, ಅದನ್ನು ಎದುರಿಸಿದ ಬಗೆಯನ್ನು ಮಾಧ್ಯಮವೊಂದರಲ್ಲಿ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಅವರಿಗೆ ಮೊದಲ ಲಾಕ್​ಡೌನ್ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗಿದ್ದರೂ ಸಹ ಅದರಿಂದ ಹೊರಬರುವ ವಿಶ್ವಾಸವಿತ್ತಂತೆ. ಆದರೆ ಎರಡನೇ ಅಲೆಯಲ್ಲಿ ತೀರಾ ಹತ್ತಿರದವರೇ ಸೋಂಕಿಗೆ ತುತ್ತಾಗಿ, ಅವರಿಗೂ ಕೊವಿಡ್ ಬಂದಾಗ ಬಹಳ ಕಷ್ಟವನ್ನು ಅನುಭವಿಸಿದರಂತೆ. ಸೋಂಕಿಗೆ ತುತ್ತಾದವರು ಯಾರೋ ಮನೆಗೆ ಬಂದಿದ್ದರಿಂದ ಏಪ್ರಿಲ್ 22ರಂದು ತನಗೂ ಮತ್ತು ಕುಟುಂಬದ ಏಳು ಮಂದಿಗೆ ಸೋಂಕು ಹರಡಲು ಕಾರಣವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಆ ಸಂದರ್ಭದಲ್ಲಿ ಅವರ ಕುಟುಂಬದ ಪರಿಸ್ಥಿತಿ ಮತ್ತು ಪಾರುಲ್ ಅನುಭವಿಸಿದ ಮಾನಸಿಕ ವೇದನೆಯನ್ನು ಅವರ ಮಾತುಗಳಲ್ಲೇ ಕೇಳಿ. “ನನಗೆ ಕೊವಿಡ್ ದೃಢಪಟ್ಟಾಗ ಎರಡು ಬಾರಿ ಕ್ಯಾನ್ಸರ್​ನಿಂದ ಪಾರಾದ ನನ್ನ ಅಮ್ಮ ಮನೆಯಲ್ಲೇ ಇದ್ದರು. ಅದೃಷ್ಟವಶಾತ್ ನಾನು ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದೆ. ಆಗ ಬೇರೆ ಯಾರೂ ಸಹಾಯಕ್ಕೆ ಇರಲಿಲ್ಲ. ಅಮ್ಮನೇ ಅಡುಗೆ ಮಾಡಿ ತಂದು ಬಾಗಿಲಿನ ಹೊರಗಿಟ್ಟು ಹೋಗುತ್ತಿದ್ದರು. ನನಗೆ ತಗುಲಿದ್ದು ಕೊವಿಡ್​ನ ಹೊಸ ರೂಪಾಂತರಿ ವೈರಸ್. ಅದರ ಎಲ್ಲಾ ಲಕ್ಷಣಗಳೂ ಇದ್ದವು. ಸ್ಪರ್ಶ, ವಾಸನೆ ಯಾವುದೂ ಇರಲಿಲ್ಲ. ಜೊತೆಗೆ 103 ಡಿಗ್ರಿಯ ಜ್ವರ ಇತ್ತು. ಅದೂ ಸುಮಾರು 12 ದಿನಗಳ ಕಾಲ ಸತತವಾಗಿ!”

“ಸುಮಾರು ಮೂರು ದಿನ ಕಳೆದ ಮೇಲೆ ನಾನು ಡಾಕ್ಟರ್​ಗೆ ಕರೆ ಮಾಡಿ ‘ನಾನು ಇದರಿಂದ ಹೊರಬರುತ್ತೇನೆ ಎಂದು ತೋರುತ್ತಿಲ್ಲ’ ಎಂದಿದ್ದೆ. ಜೊತೆಗೆ ನಾನು ಪ್ರೀತಿಪಾತ್ರರಿಗೆ ಇಮೈಲ್ ಸಹ ಬರೆದು, ‘ನಾನೊಂದು ವೇಳೆ ತೀರಿಕೊಂಡರೆ ನನ್ನೆಲ್ಲಾ ಆಸ್ತಿಗಳೂ ನನ್ನ ಸಹೋದರಿಯರಿಗೆ ಸೇರಬೇಕು’ ಎಂದು ತಿಳಿಸಿದ್ದೆ. ಈಗ ಯೋಚಿಸಿದರೆ ಎಲ್ಲವೂ ಹಾಸ್ಯಾಸ್ಪದ ಎನಿಸುತ್ತದೆ ಆದರೆ ಆಗ ನಾನಿದ್ದ ಮನಸ್ಥಿತಿ ಅಂಥದ್ದಾಗಿತ್ತು. ದಿನವೂ ಜಿಮ್​ಗೆ ಹೋಗಿ, ವರ್ಕೌಟ್ ಮಾಡಿ, ಆರೋಗ್ಯವಾದದ್ದನ್ನು ತಿಂದು, ನನ್ನ ಶ್ವಾಸಕೋಶಗಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ಧಾಗ ಇದ್ದಕ್ಕಿದ್ದಂತೆ ನನಗೆ ದೊಡ್ಡ ಹೊಡೆತವೊಂದು ಬಿದ್ದಂತಾಗಿತ್ತು. ನನ್ನ ಸಹೋದರಿಯರೆಲ್ಲಾ ಅಂಥದ್ದೇನೂ ಆಗುವುದಿಲ್ಲ ಎಂದು ಸಮಾಧಾನ ಮಾಡುತ್ತಿದ್ದರು” ಎಂದು ಪಾರುಲ್ ನೆನಪಿಸಿಕೊಂಡಿದ್ಧಾರೆ.

ಒಂದು ದಿನ ಬದುಕಿರುವ ಆಸೆಯನ್ನೇ ಬಿಟ್ಟ ಕ್ಷಣದ ಕುರಿತು ವಿವರಿಸಿರುವ ಪಾರುಲ್, “ಒಂದು ರಾತ್ರಿ ಸುಮಾರು ಎರಡೂವರೆಯ ಸುಮಾರಿಗೆ ಜ್ವರ 103ಡಿಗ್ರಿಗಿಂತಲೂ ಏರಿ, ಕೈಕಾಲುಗಳು ನಡುಗಲು ಪ್ರಾರಂಭಿಸಿದ್ದವು. ಆಗ ಡಾಕ್ಟರ್​ಗೆ ಕರೆ ಮಾಡಿ ನನಗಿನ್ನು ಸಾಧ್ಯವಿಲ್ಲ ಎಂದಿದ್ದೆ. ಆಗ ಧೈರ್ಯ ತುಂಬಿದ್ದ ವೈದ್ಯರು, ಆತ್ಮವಿಶ್ವಾಸದಿಂದಿರಿ; ಅದೊಂದೇ ನಿಮ್ಮನ್ನು ಕಾಪಾಡುವುದು ಎಂದಿದ್ದರು. ತಕ್ಷಣ ನಾನು ಹೋಗಿ ಥಂಡಿ ಬಟ್ಟೆಯನ್ನು ತಲೆಗೆ ಹಾಕಿಕೊಂಡು ವಿಶ್ರಮಿಸಿದೆ. ಆ ರಾತ್ರಿ ಕಳೆದ ಮೇಲೆ ನನಗೊಂದು ಖಾತ್ರಿಯಾಯಿತು. ಇಷ್ಟು ಭೀಕರ ಜ್ವರವೂ ನನ್ನ ಪ್ರಾಣಕ್ಕೆ ಹಾನಿ ಮಾಡದ ಮೇಲೆ ಬದುಕುಳಿಯುತ್ತೇನೆ ಎನಿಸಿತು.” ಆ ಸಮಯದಲ್ಲೇ ವೈದ್ಯರು ಪಾರುಲ್ ಅವರಿಗೆ ತಗುಲಿದ್ದು ಕರೊನಾ ರೂಪಾಂತರಿ ವೈರಸ್ ಎಂದು ತಿಳಿಸಿದ್ದಂತೆ.

ಕರೊನಾದಿಂದ ಏನೇನು ಪಾಠ ಕಲಿತಿರಿ ಎಂಬ ಪ್ರಶ್ನೆಗೆ ಪಾರುಲ್ ಬಹಳ ಸುಂದರವಾಗಿ ವಿವರಿಸಿದ್ದಾರೆ. “ಈ ಮೊದಲು ನಾನು ಸಿಗ್ನಲ್​ನಲ್ಲಿ ಕಾಯುವಾಗ ಅಯ್ಯೋ ಎನಿಸುತ್ತಿತ್ತು. ಈಗ ನಮ್ಮ ಸುತ್ತಲಿನ ಜಗತ್ತನ್ನು ಗಮನಿಸುತ್ತೇನೆ. ಜನರ ವರ್ತನೆ, ನಡವಳಿಕೆ ಎಲ್ಲಾ ಹೇಗಿರುತ್ತದೆ ಎಂಬುದನ್ನು ನೋಡುತ್ತೇನೆ. ನಾನು ಈ ಮೊದಲು ಹಾಗಿರಲೇ ಇಲ್ಲ. ಈಗಂತೂ ಮನೆಯಲ್ಲಿ ಕುಟುಂಬದವರೊಂದಿಗೆ ಕುಳಿತು ಟಿವಿ ನೋಡುವುದೂ ಸಹ ಜಗತ್ತಿನ ಅತ್ಯಂತ ಶ್ರೇಷ್ಠ ಸೌಲಭ್ಯ ಎಂಬ ಭಾವ ಮೂಡುತ್ತದೆ” ಎಂದು ಹೇಳಿದ್ದಾರೆ ಪಾರುಲ್ ಯಾದವ್.

ಕರೊನಾ ನಂತರದ ದೈಹಿಕ ಸ್ಥಿತಿಯ ಕುರಿತೂ ನಟಿ ಮುಕ್ತವಾಗಿ ಮಾತನಾಡಿದ್ದಾರೆ. ಹತ್ತು ನಿಮಿಷಗಳ ಕಾಲ ನಡೆದರೂ ವಿಪರೀತ ಸುಸ್ತಾಗುತ್ತಿತ್ತಂತೆ. ಒಂದು ಬಾರಿಯಂತೂ ಇಪ್ಪತ್ತು ನಿಮಿಷ ನಡೆದಾಗ ಎದೆ ನೋವು ಬಂದು ಆಸ್ಪತ್ರೆಗೆ ದಾಖಲಾಗಬೇಕಾಯಿತಂತೆ. ಆಗ ವೈದ್ಯರು ಸುಮಾರು ಎರಡು ತಿಂಗಳ ಕಾಲ ವಿಶ್ರಾಂತಿಗೆ ಸೂಚಿಸಿ, ತೂಕದ ಕುರಿತು ತಲೆ ಕೆಡಿಸಿಕೊಳ್ಳದೇ ಚೆನ್ನಾಗಿ ತಿನ್ನಲು ಹೇಳಿದರಂತೆ. ಹೀಗೆ ತಾನು ನಿಧಾನವಾಗಿ ಚೇತರಿಸಿಕೊಂಡೆ ಎಂದಿದ್ದಾರೆ. ತನಗೆ ಈಗಲೂ ಕರೊನಾದ ಗುಣಲಕ್ಷಣಗಳಿವೆ ಎಂದ ಪಾರುಲ್, ಸುಮಾರು 30-40ಪ್ರತಿಶತ ರುಚಿ, ವಾಸನೆ ತನಗಿನ್ನೂ ಮರಳಿ ಬಂದಿಲ್ಲ ಎಂದಿದ್ದಾರೆ. ಹಾಗೆಯೇ ಕೆಲವೊಮ್ಮೆ ಉಸಿರಾಟಕ್ಕೂ ತೊಂದರೆಯಾಗುತ್ತದೆ. ಇವುಗಳನ್ನು ಒಪ್ಪಿಕೊಳ್ಳಬೇಕು, ಕಾಲ ಕ್ರಮೇಣ ಸರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜನರು ಸುತ್ತಮುತ್ತ ಮರಣ ಹೊಂದುತ್ತಿದ್ದಾಗ ಜಾಲತಾಣ ಬಳಸಲು ಮನಸ್ಸಾಗಲಿಲ್ಲ: ಪಾರುಲ್

ಪಾರುಲ್ ಯಾದವ್ ಪ್ರಕಾರ ಪ್ರತಿಯೊಂದನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕಿಲ್ಲ. ಆದ್ದರಿಂದಲೇ ತಮಗೆ ಕೊವಿಡ್ ಬಂದದ್ದು, ಅದರಿಂದ ಗುಣಮುಖರಾದದ್ದನ್ನು ಜಾಲತಾಣದಲ್ಲಿ ಹಂಚಿಕೊಂಡಿಲ್ಲ ಎಂದ ಅವರು ಅದಕ್ಕೆ ಕಾರಣವನ್ನೂ ನೀಡಿದ್ದಾರೆ. “ಕೊವಿಡ್ ಅನ್ನೋದು ಒಂದು ಫ್ಯಾನ್ಸಿ ವಿಷಯವಲ್ಲ. ಬಹಳ ಗಂಭೀರವಾದದ್ದು. ನನಗೆ ಇದನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕು ಅನಿಸಲಿಲ್ಲ. ನಮ್ಮ ಸುತ್ತಲೂ ಜನರು ಮರಣ ಹೊಂದುತ್ತಿದ್ದಾಗ ನನಗೆ ಇನ್ಸ್ಟಾಗ್ರಾಂ ಬಳಸಲೂ ಮನಸ್ಸಾಗಲಿಲ್ಲ. ನಾನು ಲಸಿಕೆ ಪಡೆದುಕೊಂಡಾಗಲೂ ಪೋಸ್ಟ್ ಮಾಡಲಿಲ್ಲ. ಕೆಲವು ತಾರೆಗಳಿಗೆ ಲಸಿಕೆ ಅನ್ನೋದು ಒಂದು ರಂಜನೀಯ ವಿಷಯವಾಗಿರಬಹುದು. ಆದರೆ ಕೊರೊನಾ ಅನ್ನೋದು ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾದ ಫ್ಯಾನ್ಸಿ ವಿಷಯವಲ್ಲ. ಹಾಗಾಗಿ ನಾನು ಹಂಚಿಕೊಂಡಿಲ್ಲ. ಜೊತೆಗೆ ನನಗೆ ಗುಣಮುಖಳಾಗಲು ಬಹಳ ಸಮಯ ಬೇಕಾಯಿತು” ಎಂದಿದ್ದಾರೆ ಪಾರುಲ್.

ಕನ್ನಡದ ಗೋವಿಂದಾಯ ನಮಃ, ವಾಸ್ತು ಪ್ರಕಾರ, ಬಚ್ಚನ್ ಮೊದಲಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಪಾರುಲ್ ಯಾದವ್ ತಮ್ಮ ‘ಬಟರ್​ಫ್ಲೈ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಅದನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ. ಈ ಚಿತ್ರ ಹಿಂದಿಯ ಯಶಸ್ವಿ ಚಿತ್ರ ಕ್ವೀನ್​ನ ರಿಮೇಕ್.

ಕೃಪೆ: ಪಿಂಕ್​ವಿಲ್ಲಾ

ಇದನ್ನೂ ಓದಿ:

ನಾನಿ, ಸಾಯಿ ಪಲ್ಲವಿ ಮತ್ತು ಕೃತಿ ಶೆಟ್ಟಿ ಅಭಿನಯದ ‘ಶ್ಯಾಮ್ ಸಿಂಘಾ ರಾಯ್’ ಚಿತ್ರ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ

ನೆಟ್​ಫ್ಲಿಕ್ಸ್​ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್​ ಸಿರೀಸ್​ ಟ್ರೇಲರ್​ನಲ್ಲಿ ಘಟಾನುಘಟಿಗಳ ಸಂಗಮ

(Parul Yadav opens up about her Covid suffering time and how she overcome it)

Published On - 6:33 pm, Tue, 27 July 21