
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಜೈಲು ಸೇರಿರುವ ನಟಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (42) ನಿಧನರಾಗಿದ್ದಾರೆ. ಕಳೆದ 7-8 ತಿಂಗಳ ಹಿಂದೆಯೇ ಅವರು ರಾಜಸ್ಥಾನದಲ್ಲಿ ಕೊನೆಯುಸಿರೆಳೆದಿದ್ದು, ಈ ಸುದ್ದಿ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಪವಿತ್ರಾ ಗೌಡ ಅವರಿಂದ (Pavitra Gowda) ದೂರವಾಗಿಯೇ ಉಳಿದಿದ್ದ ಸಂಜಯ್ ಸಿಂಗ್ ಸಾವು ಇಷ್ಟು ತಡವಾಗಿ ಬೆಳಕಿಗೆ ಬಂದಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬಂಧನಕ್ಕೊಳಗಾದ ಸಮಯದಲ್ಲಿ ಸಂಜಯ್ ಸಿಂಗ್ ರಾಜಸ್ಥಾನದಿಂದ ಬೆಂಗಳೂರಿಗೆ ಆಗಮಿಸಿದ್ದರು. ಮಾಧ್ಯಮಗಳ ಮುಂದೆ ನಿಂತು ಮಾಜಿ ಪತ್ನಿ ಪವಿತ್ರಾ ಪರ ವಹಿಸಿ ಬೆಂಬಲವಾಗಿ ಮಾತನಾಡಿದ್ದರು.
ಬೆಂಗಳೂರಿನಿಂದ ರಾಜಸ್ಥಾನಕ್ಕೆ ತೆರಳಿದ್ದ ಸಂಜಯ್ ಸಿಂಗ್, ಅಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಪವಿತ್ರಾ ಗೌಡ ಅವರಿಂದ ವಿಚ್ಛೇದನ ಪಡೆದ ಬಳಿಕ ತೀವ್ರ ಮಾನಸಿಕ ಅಭದ್ರತೆ ಹಾಗೂ ಖಿನ್ನತೆಗೆ ಒಳಗಾಗಿದ್ದ ಸಂಜಯ್, ಅತಿಯಾದ ಮದ್ಯಪಾನಕ್ಕೆ ದಾಸರಾಗಿದ್ದರು. ಈ ಕುಡಿತದ ಚಟವೇ ಅವರ ಆರೋಗ್ಯ ಕ್ಷೀಣಿಸಿ ಸಾವನ್ನಪ್ಪಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪವಿತ್ರಾ ಗೌಡ ಕುಗ್ಗಿದ್ದಾರೆ, ಆಕೆ ನನ್ನ ಮಗಳಿದ್ದಂತೆ: ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ
ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಸಂಜಯ್ ಸಿಂಗ್, ಸ್ವಂತ ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ನಡೆಸುತ್ತಿದ್ದರು. 2007-08ರ ಅವಧಿಯಲ್ಲಿ ಪವಿತ್ರಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. 2011ರಲ್ಲಿ ದಂಪತಿಗೆ ಖುಷಿ ಎಂಬ ಹೆಣ್ಣು ಮಗು ಜನಿಸಿದ ನಂತರ ಇಬ್ಬರ ನಡುವೆ ಮನಸ್ತಾಪಗಳು ಶುರುವಾಗಿದ್ದವು. ಕೊನೆಗೆ ಪರಸ್ಪರ ಸಮ್ಮತಿಯಿಂದ ವಿಚ್ಛೇದನ ಪಡೆದು ದೂರಾಗಿದ್ದರು. ಡಿವೋರ್ಸ್ ಪಡೆದ ನಂತರ ಬೆಂಗಳೂರು ತೊರೆದು ರಾಜಸ್ಥಾನದಲ್ಲೇ ಕೆಲಸ ಮಾಡಿಕೊಂಡಿದ್ದ ಸಂಜಯ್, ವೈಯಕ್ತಿಕ ಜೀವನದ ಹಿನ್ನಡೆಯಿಂದಾಗಿ ಕುಡಿತದ ದಾಸರಾಗಿ ಕೊನೆಗೆ ಅನಾರೋಗ್ಯದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಶ್ನೆ: ಪವಿತ್ರಾ ಗೌಡ ಮಾಜಿ ಪತಿ ಯಾರು?
ಉತ್ತರ: ಸಂಜಯ್ ಸಿಂಗ್
ಪ್ರಶ್ನೆ: ಪವಿತ್ರಾ-ಸಂಜಯ್ ಸಿಂಗ್ ವಿವಾಹ ಯಾವಾಗ ನಡೆದಿತ್ತು?
ಉತ್ತರ: 2007-2008ರ ಅವಧಿಯಲ್ಲಿ
ಪ್ರಶ್ನೆ: ಸಂಜಯ್ ಸಿಂಗ್ ಸಾವಿಗೆ ಕಾರಣ ಏನು?
ಉತ್ತರ: ಅತಿಯಾದ ಕುಡಿತದ ಚಟ