ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ಝಟಿಲವಾಗುತ್ತಾ ಸಾಗುತ್ತಿದೆ. ರೇಣುಕಾ ಸ್ವಾಮಿಯನ್ನು ಹಲವರು ಸೇರಿ ಹತ್ಯೆ ಮಾಡಿರುವುದು ತಿಳಿದಿದೆಯಾದರೂ, ಯಾರ ಪಾತ್ರ ಏನು? ನಿರ್ದಿಷ್ಟವಾಗಿ ರೇಣುಕಾ ಸ್ವಾಮಿಯ ಜೀವ ತೆಗೆದವರ್ಯಾರು? ಜೀವ ತೆಗೆಯಲು ಆದೇಶಿಸಿದವರ್ಯಾರು? ಹತ್ಯೆ ಆದಾಗ ಯಾರ್ಯಾರಿದ್ದರು, ಯಾರು ಯಾರಿಗೆಲ್ಲ ಕೊಲೆಯ ಮಾಹಿತಿ ಇತ್ತು, ಕೊಲೆಯ ಮುಚ್ಚಿ ಹಾಕುವ ಪ್ರಯತ್ನ ನಡೆದಿದ್ದು ಯಾರಿಂದ ಮತ್ತು ಹೇಗೆ? ಇನ್ನೂ ಹಲವು ವಿಷಯಗಳು ಸ್ಪಷ್ಟವಾಗಿ ಬಹಿರಂಗವಾಗಬೇಕಿದೆ. ಈ ಕುರಿತು ಪೊಲೀಸರು ಈಗಾಗಲೇ ಹಲವು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದಾರೆ. ಆದರೆ ಆರೋಪಿಗಳು ಸಹ ಬುದ್ಧಿ ಉಪಯೋಗಿಸಿ ಕೆಲ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಆದರೆ ಈಗ ಪೊಲೀಸರು ಕೆಲವು ಪ್ರಮುಖ ಸಾಕ್ಷ್ಯಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದಾರೆ.
ಇತ್ತೀಚೆಗಿನ ಯಾವುದೇ ಅಪರಾಧ ಪ್ರಕರಣದಲ್ಲಿ ಮೊಬೈಲ್ ಬಹಳ ಪ್ರಮುಖ ಪಾತ್ರವಹಿಸುತ್ತಿದೆ. ಮೊಬೈಲ್ನ ಡಿಜಿಟಲ್ ಸಾಕ್ಷ್ಯ ಅತ್ಯಂತ ಪ್ರಮುಖವಾಗಿದೆ. ಇದನ್ನು ಮೊದಲೇ ಅರಿತಿದ್ದ ಆರೋಪಿಗಳು ಕೆಲವರು ತಮ್ಮ ಮೊಬೈಲ್ಗಳಿಂದ ಡಾಟಾ ಅಳಿಸಿ ಹಾಕಿದ್ದಾರೆ. ಸಂತ್ರಸ್ತ ರೇಣುಕಾ ಸ್ವಾಮಿಯ ಮೊಬೈಲ್ ಸೇರಿದಂತೆ ಕೆಲವು ಮಹತ್ವದ ಸಾಕ್ಷ್ಯಗಳಿದ್ದ ರಘು ಮೊಬೈಲ್ ಅನ್ನು ಕಾಣದಂತೆ ಮಾಡಿದ್ದಾರೆ. ಇದು ಪೊಲೀಸರಿಗೆ ಸಮಸ್ಯೆ ಆಗಿತ್ತು. ಆದರೆ ಈಗ ಪೊಲೀಸರು ಹೊಸ ಹಾದಿಯನ್ನು ಹುಡುಕಿಕೊಂಡಿದ್ದಾರೆ.
ಎಲ್ಲ ಆರೋಪಿಗಳ ಮೊಬೈಲ್ ಅನ್ನು ಪರಿಶೀಲಿಸಲು ಪೊಲೀಸರು ನ್ಯಾಯಾಲಯದ ಅನುಮತಿ ಕೇಳಿದ್ದರು, ಅಂತೆಯೇ ನ್ಯಾಯಾಲಯ ಅನುಮತಿ ನೀಡಿದೆ. ಈಗ ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೊಬೈಲ್ಗಳ ಡಾಟಾ ರಿಟ್ರೀವ್ ಮಾಡಲು ಪೊಲೀಸರು ಮುಂದಾಗಿದ್ದು, ಅವರಿಗೆ ಕೆಲವು ಸಮಸ್ಯೆಗಳು ಎದುರಾಗಿವೆ. ಆರೋಪಿಗಳಲ್ಲಿ ಕೆಲವರು ವೆಬ್ ಅಪ್ಲಿಕೇಶನ್ ಬಳಸಿ ಡಾಟಾ ಅಳಿಸಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಡಿಲೀಟ್ ಆಗಿರುವ ಡಾಟಾ ಅನ್ನು ಮರಳಿ ಪಡೆಯುವ ಕುರಿತು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:ದರ್ಶನ್ ಬೆಂಬಲಿಸುವವರು, ರೇಣುಕಾ ಸ್ವಾಮಿ ತಂದೆಯ ಪ್ರಶ್ನೆಗೆ ಉತ್ತರಿಸುವರೇ?
ಪಂಚರ ಸಮ್ಮುಖದಲ್ಲಿಯೇ ಮೊಬೈಲ್ಗಳನ್ನು ತೆಗೆದು ಪರಿಶೀಲನೆ ನಡೆಸಲಾಗುತ್ತದೆ. ಇನ್ನು ರಾಘು, ರೇಣುಕಾ ಸ್ವಾಮಿ ಹಾಗೂ ಇನ್ನು ಕೆಲವರ ಮೊಬೈಲ್ಗಳನ್ನು ನಾಶ ಮಾಡಲಾಗಿದೆ. ಅವರ ಮೊಬೈಲ್ ಡಾಟಾ ಪಡೆಯಲು, ಪೊಲೀಸರು ಅವರ ಮೊಬೈಲ್ ನಂಬರ್ನಲ್ಲಿ ಹೊಸ ಸಿಮ್ಗಳನ್ನು ಖರೀದಿಸಿ ಆಕ್ಟಿವ್ ಮಾಡಲಿದ್ದಾರೆ. ಹಾಗೂ ಸರ್ವೀಸ್ ಪ್ರೊವೈಡರ್ಗಳ ನೆರವು ಪಡೆದು ಕರೆ ಮಾಹಿತಿಯನ್ನು ತರಿಸಿಕೊಳ್ಳಲಿದ್ದಾರೆ. ಆದರೆ ರಾಘು ಮೊಬೈಲ್ನಲ್ಲಿ ಘಟನೆಯ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು ಎನ್ನಲಾಗಿದೆ. ಇದನ್ನು ಪೊಲೀಸರು ಹೇಗೆ ಮರಳಿ ಪಡೆದುಕೊಳ್ಳುತ್ತಾರೆ ಎಂಬುದು ಕುತೂಹಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Sun, 23 June 24