ಜಾಮೀನಿಗಾಗಿ ಹೈಕೋರ್ಟ್​​ಗೆ ಪ್ರದೋಶ್ ಮೊರೆ, ದರ್ಶನ್ ಪರ ವಕೀಲರ ಆಕ್ಷೇಪ

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಗಲು ಕಾರಣ ಆಗಿರುವ ಪ್ರದೋಶ್, ಮಾಫಿ ಸಾಕ್ಷಿ ದಾಖಲಿಸಿ ಕೆಲ ವಾರಗಳಾಗಿದ್ದು, ಇದೀಗ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಅವರು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾ ಮಾಡಿದ್ದು, ಅದರ ಬೆನ್ನಲ್ಲೆ ಪ್ರದೋಶ್ ಅವರು ಹೈಕೋರ್ಟ್​​ಗೆ ಮನವಿ ಸಲ್ಲಿಸಿ ಮಧ್ಯಂತರ ಜಾಮೀನು ನಿಡುವಂತೆ ಮನವಿ ಮಾಡಿದ್ದರು.

ಜಾಮೀನಿಗಾಗಿ ಹೈಕೋರ್ಟ್​​ಗೆ ಪ್ರದೋಶ್ ಮೊರೆ, ದರ್ಶನ್ ಪರ ವಕೀಲರ ಆಕ್ಷೇಪ
Pradosh Darshan

Updated on: Nov 04, 2026 | 4:12 PM

ಮುಖ್ಯಾಂಶಗಳು

  • ಜಾಮೀನಿಗಾಗಿ ಮತ್ತೆ ಪ್ರದೋಶ್ ಅರ್ಜಿ
  • ಹೈಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ ಪ್ರದೋಶ್
  • ಜಾಮೀನಿಗೆ ದರ್ಶನ್ ಪರ ವಕೀಲರ ಆಕ್ಷೇಪ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತುರುಸಿನಿಂದ ನಡೆಯುತ್ತಿದೆ. ಪ್ರದೋಶ್ ನೀಡಿರುವ ಮಾಫಿ ಸಾಕ್ಷಿ ಪ್ರಕರಣದಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರದೋಶ್, ಮಾಫಿ ಸಾಕ್ಷಿ ದಾಖಲಿಸಿ ಕೆಲ ವಾರಗಳಾಗಿದ್ದು, ಇದೀಗ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಅವರು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾ ಮಾಡಿದ್ದು, ಅದರ ಬೆನ್ನಲ್ಲೆ ಪ್ರದೋಶ್ ಅವರು ಹೈಕೋರ್ಟ್​​ಗೆ ಮನವಿ ಸಲ್ಲಿಸಿ ಮಧ್ಯಂತರ ಜಾಮೀನು ನಿಡುವಂತೆ ಮನವಿ ಮಾಡಿದ್ದರು.

ಇಂದು (ನವೆಂಬರ್ 4) ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಪ್ರದೋಷ್ ರಾವ್ ಅರ್ಜಿ ವಿಚಾರಣೆ ನಡೆಯಿತು. ಪ್ರದೋಶ್ ಪರವಾಗಿ ಹಿರಿಯ ವಕೀಲ ಕೆ ದಿವಾಕರ್ ವಾದ ಮಂಡಿಸಿದರು. ಕೇವಲ ಸೀಮಿತ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿದ್ದೇವೆ, ಪ್ರದೋಶ್ ಅವರ ತಂದೆಯ ವಾರ್ಷಿಕ ತಿಥಿ ಕಾರ್ಯ ನಿರ್ವಹಿಸಲು 20 ದಿನಗಳ ಜಾಮೀನು ನೀಡಬೇಕು ಎಂದು ಅವರು ಮನವಿ ಮಾಡಿದರು. ಅಲ್ಲದೆ, ಹೈಕೋರ್ಟ್​ಗೆ ಮಧ್ಯಂತರ ಜಾಮೀನು ನೀಡುವ ಅಧಿಕಾರವಿದೆ ಹಾಗೂ ದರ್ಶನ್ ಪರ ವಕೀಲರಿಗೆ ಆಕ್ಷೇಪಿಸುವ ಹಕ್ಕಿಲ್ಲವೆಂದು ದಿವಾಕರ್ ವಾದ ಮಂಡನೆ ಮಾಡಿದರು.

Loading...

ಪ್ರದೋಶ್ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ‘ಪ್ರದೋಶ್​​ಗೆ ಜಾಮೀನು ನೀಡಿದರೆ ಪ್ರಕರಣದ ವಿಚಾರಣೆಗೆ ಅಡಚಣೆ ಆಗುತ್ತದೆ’ ಎಂದು ವಾದಿಸಿದರು. ಪ್ರದೋಶ್​​ ಈಗಾಗಲೇ ದಾಖಲಿಸಿರುವ ಮಾಫಿ ಸಾಕ್ಷಿಯ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರ ಕೈವಾಡವಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿಕೊಟ್ಟು ಹೇಳಿಕೆ ಸುಧಾರಿಸಲು ನೆರವಾಗಿದ್ದಾರೆ, ಮಧ್ಯಂತರ ಜಾಮೀನು ನೀಡಿದರೆ ಮತ್ತೆ ಹೇಳಿಕೊಡುತ್ತಾರೆ’ ಎಂದು ವಾದಿಸಿದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ವಿಚಾರಣೆಗೆ ಗೈರು, ಪ್ರತ್ಯಕ್ಷ ಸಾಕ್ಷಿ ಪುನೀತ್ ಬಂಧನಕ್ಕೆ ವಾರೆಂಟ್

ಕೆಲ ಸಂಪ್ರದಾಯಗಳಲ್ಲಿ ಮೊದಲ ಪುಣ್ಯಾರಾಧನೆಗೆ ಮಹತ್ವವಿದೆ, ವಾರ್ಷಿಕ ಪುಣ್ಯಾರಾಧನೆಗೆ ಅನುಮತಿ ನೀಡಲು ಆಕ್ಷೇಪವಿದೆಯೇ? ಎಂದು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಹಷ್ಮತ್ ಪಾಷಾ ಅವರನ್ನು ಪ್ರಶ್ನೆ ಮಾಡಿದರು. ಪ್ರದೋಶ್​​ ಕೇಳಿರುವ ಕಾರಣಕ್ಕೆ ಜಾಮೀನು ನೀಡಬಾರದು ಎಂದು ಹಷ್ಮತ್ ಪಾಷಾ ವಾದ ಮಂಡಿಸಿದರು. ಈ ಹಿಂದೆಯೂ ಸಹ ಕೆಳ ಹಂತದ ನ್ಯಾಯಾಲಯದಲ್ಲಿಯೂ ಸಹ ಪ್ರದೋಶ್​​ರ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಸಹ ಪ್ರದೋಶ್​ ಜಾಮೀನಿಗೆ ಆಕ್ಷೇಪ ಸಲ್ಲಿಸಿದ್ದಾರೆ. ಆದರೆ ಅವರು ಕಾಮಾಕ್ಷಿಪಾಳ್ಯ ಪೊಲೀಸರ ವಿರುದ್ಧ ಹಷ್ಮತ್ ಪಾಷಾ ಅವರು ಮಾಡಿದ ಆರೋಪಕ್ಕೆ ಉತ್ತರ ನೀಡಿ, ‘ಕಾನೂನಿನಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರೇ ಬೆಂಗಾವಲು ನೀಡಬೇಕೆಂದಿದೆ, ಕೋರ್ಟ್ ಸೂಚನೆ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಬೆಂಗಾವಲು ನೀಡಿದ್ದರು, ಪ್ರತ್ಯೇಕ ಜೀಪ್​ನಲ್ಲಿ ಪ್ರದೋಷ್ ಇದ್ದ ವಾಹನಕ್ಕೆ ಬೆಂಗಾವಲು ನೀಡಿದ್ದಾರೆ’ ಎಂದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್​​ ಸಹ ಆರೋಪಿ ಆಗಿದ್ದು, ಜೈಲಿನಲ್ಲಿದ್ದಾರೆ. ಆದರೆ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ತಮ್ಮ ಹೇಳಿಕೆ ದಾಖಲಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ‘ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿರುವ ವಿಷಯ ದರ್ಶನ್​​ಗೆ ಮೊದಲೇ ತಿಳಿದಿತ್ತು’ ಎಂಬ ಮಹತ್ವದ ಅಂಶವನ್ನು ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Wed, 4 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us