ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ. ಮಂಜು ಅವರಿಗೆ ‘ಸಾಹಸ ಸಿಂಹ’ ವಿಷ್ಣುವರ್ಧನ್ ಬಗ್ಗೆ ಅಪಾರವಾದ ಗೌರವ ಮತ್ತು ಅಭಿಮಾನ. ಆ ಗೌರವವನ್ನು ಅವರು ತಮ್ಮ ಸಿನಿಮಾಗಳ ಮೂಲಕ ತೋರಿಸಿದ್ದಾರೆ. ಅದರ ಮುಂದುವರಿದ ಭಾಗ ಎಂಬಂತೆ ತಮ್ಮ ಮಗ ಶ್ರೇಯಸ್ ನಟನೆಯ ಸಿನಿಮಾಗೆ ‘ವಿಷ್ಣು ಪ್ರಿಯಾ’ ಎಂದು ಶೀರ್ಷಿಕೆ ಇಟ್ಟಿದ್ದು ಸುದ್ದಿ ಆಗಿತ್ತು. ಬಹಳ ಹಿಂದೆಯೇ ನಿರ್ಮಾಣ ಆಗಿದ್ದ ಈ ಸಿನಿಮಾದ ಬಿಡುಗಡೆ ಕಾರಣಾಂತರಗಳಿಂದ ತಡವಾಗಿತ್ತು. ಈಗ ಈ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಫೆಬ್ರವರಿ 21ಕ್ಕೆ ‘ವಿಷ್ಣು ಪ್ರಿಯಾ’ ಬಿಡುಗಡೆ ಆಗಲಿದೆ.
ಅಷ್ಟಕ್ಕೂ ವಿಷ್ಣು ಪ್ರಿಯಾ ಎಂದು ಹೆಸರು ಇಟ್ಟಿದ್ದು ಏಕೆ? ಈ ಕಥೆಯನ್ನು ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಆ ಎರಡು ಹೆಸರುಗಳು ಸೇರಿ ‘ವಿಷ್ಣು ಪ್ರಿಯಾ’ ಆಗಿದೆ. 90 ದಶಕದ ಒಂದು ಪ್ರೇಮಕಥೆಯನ್ನು ಈ ಸಿನಿಮಾದ ಮೂಲಕ ಹೇಳಲಾಗುತ್ತಿದೆ. ಮಲಯಾಳಂ ಚಿತ್ರರಂಗದ ವಿ.ಕೆ. ಪ್ರಕಾಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮಲಯಾಳಂ, ತೆಲುಗು, ತಮಿಳಿನಲ್ಲಿ 40ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಿ.ಕೆ. ಪ್ರಕಾಶ್ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ.
‘ವಿಷ್ಣು ಪ್ರಿಯಾ’ ಸಿನಿಮಾ ಫೆ.21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಕಣ್ಸನ್ನೆ ಚೆಲುವೆ ಎಂದೇ ಫೇಮಸ್ ಆದ ಪ್ರಿಯಾ ವಾರಿಯರ್ ಅವರು ‘ವಿಷ್ಣು ಪ್ರಿಯಾ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಟಾಲಿವುಡ್ನ ಸಂಗೀತ ನಿರ್ದೇಶಕ ಗೋಪಿಸುಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಧಾರವಾಡ ಮೂಲದ ಸಿಂಧುಶ್ರೀ ಅವರು ಬರೆದ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾದ ಸ್ಕ್ರಿಪ್ಟ್ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: ವಿಷ್ಣುವರ್ಧನ್ ನೆನಪಿಗೆ ‘ಸಿಂಹದ ಹಾದಿʼ ಕಿರುಚಿತ್ರ; ಇದು ಅಭಿಮಾನಿಗಳ ಕಾಣಿಕೆ
ವಿ.ಕೆ. ಪ್ರಕಾಶ್, ಗೋಪಿಸುಂದರ್, ನಾಗೇಂದ್ರ ಪ್ರಸಾದ್ ಅವರಂತಹ ಅನುಭವಿ ತಂತ್ರಜ್ಞರು ಜೊತೆಯಾಗಿ ಈ ಸಿನಿಮಾದ ಹಿಂದೆ ಶ್ರಮಿಸಿದ್ದಾರೆ. ರವಿ ಶ್ರೀವತ್ಸ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್ ಅರಸ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಬದುಕಿನಲ್ಲಿ ಪ್ರೀತಿ ಎಷ್ಟು ಮುಖ್ಯ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕೌಟುಂಬಿಕ ಮೌಲ್ಯಕ್ಕೆ ಹೆಚ್ಚು ಮಹತ್ವವಿದೆ. ಪ್ರೀತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗುವ ಹುಡುಗನ ಬದುಕಿನಲ್ಲಿ ಏನೆಲ್ಲ ಆಯಿತು ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ ಎಂದು ಚಿತ್ರತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.