ಹೊಸ ನಿರ್ದೇಶಕರು ಚಿತ್ರರಂಗಕ್ಕೆ ಬಂದಾಗ ಹೊಸತನವನ್ನು ಪರಿಚಯಿಸುತ್ತಾರೆ. ಅನೇಕ ಬಾರಿ ಈ ಮಾತು ಸಾಬೀತಾಗಿದೆ. ಈಗ ‘ಮೇಡ್ ಇನ್ ಚೈನಾ’ (Made in China Movie) ಸಿನಿಮಾ ಮೂಲಕ ನಿರ್ದೇಶಕ ಪ್ರೀತಂ ತೆಗ್ಗಿನಮನೆ ಕೂಡ ಹೊಸತನದ ಭರವಸೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡಕ್ಕೆ ವರ್ಚುವಲ್ ಸಿನಿಮಾ ಪರಿಕಲ್ಪನೆಯನ್ನು ಅವರು ಪರಿಚಯಿಸುತ್ತಿದ್ದಾರೆ. ಏನಿದು ವರ್ಚುವಲ್ ಸಿನಿಮಾ? ಉತ್ತರ ಸಿಂಪಲ್; ಇಡೀ ಸಿನಿಮಾದ ದೃಶ್ಯಗಳು ವಿಡಿಯೋ ಕಾಲ್ ರೀತಿ ಮೂಡಿಬಂದಿರುತ್ತವೆ. ಈ ಹಿಂದೆ ಮಲಯಾಳಂನಲ್ಲಿ ‘ಸಿ ಯೂ ಸೂನ್’ ಹಾಗೂ ಹಾಲಿವುಡ್ನಲ್ಲಿ ‘ಸರ್ಚಿಂಗ್’ ಚಿತ್ರ ಇದೇ ಮಾದರಿಯಲ್ಲಿ ಸಿದ್ಧಗೊಂಡಿದ್ದವು. ಅವುಗಳಿಂದ ಸ್ಫೂರ್ತಿ ಪಡೆದು ಪ್ರೀತಂ ತೆಗ್ಗಿನಮನೆ ಅವರ ‘ಮೇಡ್ ಇನ್ ಚೈನಾ’ ಸಿನಿಮಾ ಮಾಡಿದ್ದಾರೆ. ಬೇರೆ ಚಿತ್ರಗಳಿಂದ ಸ್ಫೂರ್ತಿ ಪಡೆದುಕೊಂಡು ಮಾಡಿದ್ದರೂ ಕೂಡ ಇದರ ಕಥೆ ಸಂಪೂರ್ಣ ಹೊಸದಾಗಿದೆ ಎಂದು ಅವರು ಹೇಳಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ಹಾಗೂ ಖ್ಯಾತ ನಟ ನಾಗಭೂಷಣ್ (Nagabhushan) ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಶ್ವಿನ್ ರಾವ್ ಪಲ್ಲಕ್ಕಿ ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇತ್ತೀಚೆಗೆ ‘ಮೇಡ್ ಇನ್ ಚೈನಾ’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್ ಇದರಲ್ಲಿ ತೋರಿಸಲಾಗಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರು ಗರ್ಭಿಣಿ ಪಾತ್ರ ಮಾಡಿದ್ದಾರೆ. ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸೆನ್ಸಾರ್ ಪ್ರಮಾಣ ಪತ್ರ ಕೂಡ ಸಿಗಲಿದೆ. ಆ ಬಳಿಕ ರಿಲೀಸ್ ಡೇಟ್ ತಿಳಿಸಲಿದೆ ‘ಮೇಡ್ ಇನ್ ಚೈನಾ’ ಚಿತ್ರತಂಡ.
ಈ ಸಿನಿಮಾಗೆ ‘ಮೇಡ್ ಇನ್ ಚೈನಾ’ ಎಂದು ಶೀರ್ಷಿಕೆ ಇಡಲು ಕಾರಣ ಇದೆ. ಲಾಕ್ ಡೌನ್ ಸಂದರ್ಭದಲ್ಲಿ ಹೀರೋ ಚೀನಾದಲ್ಲಿ ಇರುತ್ತಾನೆ. ಅದೇ ವೇಳೆಗೆ ಕಥಾನಾಯಕಿ ತುಂಬು ಗರ್ಭಿಣಿ ಆಗಿರುತ್ತಾಳೆ. ಇಡೀ ಕಥೆಯನ್ನು ವಿಡಿಯೋ ಕಾಲ್ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ. ‘ಕೊರೊನಾ ವೈರಸ್ ಹುಟ್ಟಿಕೊಂಡಿದ್ದು ಚೀನಾದಲ್ಲಿ. ಲಾಕ್ಡೌನ್, ಕ್ವಾರಂಟೈನ್ ಮುಂತಾದ ಪರಿಸ್ಥಿತಿ ಉಂಟಾಗಿದ್ದು ಕೂಡ ಚೀನಾದಿಂದಾಗಿ. ಆ ಹಿನ್ನೆಲೆಯಲ್ಲೇ ನಮ್ಮ ಸಿನಿಮಾದ ಕಥೆ ಸಾಗುತ್ತದೆ. ಹಾಗಾಗಿ ಇಂಥ ಶೀರ್ಷಿಕೆ ಇಟ್ಟಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕರು.
ಈ ಮೊದಲು ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ ಅವರು ‘ಮೇಡ್ ಇನ್ ಚೈನಾ’ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಹಣ, ವಿಎಫ್ಎಕ್ಸ್, ಸಂಕಲನವನ್ನೂ ಅವರೇ ಮಾಡಿದ್ದಾರೆ. ‘ಈ ಸಿನಿಮಾದ ದೃಶ್ಯಗಳು ವಿಡಿಯೋ ಕಾಲ್ ಮಾದರಿಯಲ್ಲಿ ಇದ್ದರೂ ಕೂಡ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಎಂಜಾಯ್ ಮಾಡಬಹುದು. ಈ ಹೊಸ ಪ್ರಕಾರಕ್ಕೆ ಹೊಂದಿಕೊಳ್ಳಲು ಪ್ರೇಕ್ಷಕರಿಗೆ 10 ನಿಮಿಷ ಬೇಕಾಗಬಹುದು. ನಂತರ ಸಿನಿಮಾ ಇಷ್ಟ ಆಗುತ್ತದೆ. ಒಟಿಟಿಯಲ್ಲಿ ರಿಲೀಸ್ ಮಾಡಬೇಕೋ ಅಥವಾ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೋ ಎಂಬ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಪ್ರೀತಂ ಹೇಳಿದ್ದಾರೆ.
(‘ಮೇಡ್ ಇನ್ ಚೈನಾ’ ಟೀಸರ್)
‘ವರ್ಚುವಲ್ ಸಿನಿಮಾ ಆದ್ದರಿಂದ ಇದನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ನಾಗಭೂಷಣ್ ಅವರಿಗೆ ಆರಂಭದಲ್ಲಿ ಅನುಮಾನ ಇತ್ತು. ನಂತರ ಅವರ ಮನವೊಲಿಸಿ ಶೂಟಿಂಗ್ ಮಾಡಿದೆವು. ಈಗ ಔಟ್ಪುಟ್ ನೋಡಿ ಅವರು ಖುಷಿಪಟ್ಟಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಮತ್ತು ನಾಗಭೂಷಣ್ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ. ಫ್ಯಾಮಿಲಿ ಡ್ರಾಮಾ ಕಥೆ ಈ ಚಿತ್ರದಲ್ಲಿದೆ’ ಎಂದು ಪ್ರೀತಂ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
‘ಅವರಿಂದ ಪಡೆದ ಹಣ ನಾನಿನ್ನೂ ವಾಪಸ್ ಕೊಟ್ಟಿಲ್ಲ’; ಇನ್ಸೈಡ್ ಮಾಹಿತಿ ಬಹಿರಂಗ ಪಡಿಸಿದ ಧನಂಜಯ
ಅಂದು ಪುನೀತ್ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ