ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ ಏನಾಗಲಿದೆ?
2017ರ ಜುಲೈ 20ರಂದು ಪಿಆರ್ಕೆ ಪ್ರೊಡಕ್ಷನ್ ಸ್ಥಾಪನೆ ಆಯಿತು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ನಿರ್ಮಾಣ ಸಂಸ್ಥೆ ಆರಂಭಗೊಂಡಿದೆ.
ಪುನೀತ್ ರಾಜ್ಕುಮಾರ್ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಭೇಷ್ ಎನಿಸಿಕೊಂಡಿದ್ದಾರೆ. ಅವರು ಪಿಆರ್ಕೆ ಪ್ರೊಡಕ್ಷನ್ ಆರಂಭಿಸುವ ಮೂಲಕ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಅವರು ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದರು. ಆದರೆ, ಅವರಿಲ್ಲದೆ ಪಿಆರ್ಕೆ ಪ್ರೊಡಕ್ಷನ್ ಬಡವಾಗಿದೆ. ಹಾಗಾದರೆ, ಇದನ್ನು ಈಗ ಮುನ್ನಡೆಸಿಕೊಂಡು ಹೋಗುವವರು ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
2017ರ ಜುಲೈ 20ರಂದು ಪಿಆರ್ಕೆ ಪ್ರೊಡಕ್ಷನ್ ಸ್ಥಾಪನೆ ಆಯಿತು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ನಿರ್ಮಾಣ ಸಂಸ್ಥೆ ಆರಂಭಗೊಂಡಿದೆ. ‘ಕವಲುದಾರಿ’ ಈ ಪ್ರೊಡಕ್ಷನ್ ಹೌಸ್ನಿಂದ ಹೊರ ಬಂದ ಮೊದಲ ಸಿನಿಮಾ. 2019ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ನಂತರ ‘ಮಾಯಾಭಜಾರ್ 2016’, ಲಾ, ಫ್ರೆಂಚ್ ಬಿರಿಯಾನಿ ಸಿನಿಮಾಗಳು ಈ ಪ್ರೊಡಕ್ಷನ್ ಹೌಸ್ನಿಂದ ಮೂಡಿ ಬಂದಿವೆ. ಇದಲ್ಲದೆ, ಫ್ಯಾಮಿಲಿ ಪ್ಯಾಕ್, ಮ್ಯಾನ್ ಆಫ್ ದಿ ಮ್ಯಾಚ್, ಓ2 ಸಿನಿಮಾಗಳನ್ನು ಈ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದೆ.
ಪಿಆರ್ಕೆ ಪ್ರೊಡಕ್ಷನ್ ಆರಂಭಿಸಿದ್ದು ಪುನೀತ್ ರಾಜ್ಕುಮಾರ್ ಅವರೇ ಆದರೂ ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ವಹಿಸಿಕೊಂಡಿದ್ದರು. ಹೀಗಾಗಿ, ಅಶ್ವನಿ ಅವರೇ ಪಿಆರ್ಕೆ ಪ್ರೊಡಕ್ಷನ್ ಹೌಸ್ಅನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಪಿಆರ್ಕೆ ಪ್ರೊಡಕ್ಷನ್ ಹೌಸ್ ಜತೆ ಪಿಆರ್ಕೆ ಆಡಿಯೋ ಕೂಡ ಇದೆ. ಇವೆರಡ ಸಂಪೂರ್ಣ ಜವಾಬ್ದಾರಿ ಅಶ್ವಿನಿ ಅವರ ಹೆಗಲು ಏರಿದೆ.
ಪುನೀತ್ ಮೃತಪಟ್ಟು ಮೂರು ದಿನ ಕಳೆದಿದೆ. ಅವರನ್ನು ಕಂಠೀರವ ಸ್ಟುಡಿಯೋ ಆವರಣದಲ್ಲಿ ಮಣ್ಣು ಮಾಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆದಿದೆ. ಅವರು ಇಲ್ಲ ಎನ್ನುವ ವಿಚಾರವನ್ನು ಇನ್ನೂ ಅನೇಕರ ಕೈಯಲ್ಲಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಸಾಕಷ್ಟು ಜನರು ಪುನೀತ್ ನಿಧನ ವಾರ್ತೆ ಕೇಳಿ ಮೃತಪಟ್ಟಿದ್ದಾರೆ. ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಆಗಿದ್ದ ಪುನೀತ್ ಕನ್ನಡ ನಾಡಲ್ಲೇ ಮತ್ತೆ ಹುಟ್ಟಿ ಬರಲಿ ಎಂಬುದು ಅನೇಕರ ಆಶಯ.
ಇದನ್ನೂ ಓದಿ: ‘ಪುನೀತ್ ಜಿಮ್ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ
Puneeth Rajkumar: ಪುನೀತ್ ಬಗ್ಗೆ ಅಲ್ಲು ಅರ್ಜುನ್ ಭಾವುಕ ಮಾತು; ತೆಲುಗು ಸಿನಿಮಾ ವೇದಿಕೆಯಲ್ಲಿ ಮೌನಾಚರಣೆ