‘ಹರಿ ಹರ ವೀರ ಮಲ್ಲು’ ಪೋಸ್ಟರ್ ಹರಿದ ರಕ್ಷಣಾ ವೇದಿಕೆ ಕಾರ್ಯಕರ್ತರು
Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸಹ ಭಾರಿ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಬಿಡುಗಡೆ ಆಗಿದೆ. ಆದರೆ ‘ಹರಿ ಹರ ವೀರ ಮಲ್ಲು’ ಸಿನಿಮಾ ಕನ್ನಡಪರ ಹೋರಾಟಗಾರರ ವಿರೋಧ ಎದುರಿಸಿದೆ. ಕನ್ನಡಪರ ಹೋರಾಟಗಾರರು ಸಿನಿಮಾದ ಪೋಸ್ಟರ್ ಹರಿದಿದ್ದಾರೆ.

ಪವನ್ ಕಲ್ಯಾಣ್ (Pawan Kalyan) ನಟನೆಯ ತೆಲುಗು ಸಿನಿಮಾ ‘ಹರಿ ಹರ ವೀರ ಮಲ್ಲು’ ಇಂದು (ಜುಲೈ 24) ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣ ಸೇರಿದಂತೆ ಕರ್ನಾಟಕ, ತಮಿಳುನಾಡು, ಕೇರಳ, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಸಹ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಗಿದೆ. ಕರ್ನಾಟಕದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳಿದ್ದು, ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಇಂದು ಬಿಡುಗಡೆ ಕಂಡಿದೆ.
ಆದರೆ ‘ಹರಿ ಹರ ವೀರ ಮಲ್ಲು’ ಸಿನಿಮಾ ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರರ ಆಕ್ರೋಶವನ್ನು ಎದುರುಗೊಂಡಿದೆ. ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಗಿದ್ದ ಬೆಂಗಳೂರಿನ ಚಿತ್ರಮಂದಿರದ ಒಂದರ ಮೇಲೆ ದಾಳಿ ಮಾಡಿದ್ದ ಕನ್ನಡ ಪರ ಹೋರಾಟಗಾರರು, ಸಿನಿಮಾದ ಪೋಸ್ಟರ್ ಹರಿದು ಹಾಕಿದ್ದಾರೆ. ಸಿನಿಮಾದ ಪೋಸ್ಟರ್ ತೆಲುಗಿನಲ್ಲಿದೆಯೆಂದು, ಸಿನಿಮಾದ ಯಾವುದೇ ಪೋಸ್ಟರ್ ಕನ್ನಡದಲ್ಲಿ ಇಲ್ಲವೆಂದು ಚಿತ್ರಮಂದಿರದವರ ಜೊತೆಗೆ ವಾಗ್ವಾದ ಮಾಡಿದ್ದು, ಪವನ್ ಕಲ್ಯಾಣ್ ಅವರ ದೊಡ್ಡ ಪೋಸ್ಟರ್ ಒಂದನ್ನು ಹರಿದು ಹಾಕಿದ್ದಾರೆ.
ಪವನ್ ಕಲ್ಯಾಣ್ ಪೋಸ್ಟರ್ ಹರಿಯುವ ವೇಳೆ ಅಲ್ಲಿಯೇ ಇದ್ದ ಕೆಲ ಪವನ್ ಕಲ್ಯಾಣ್ ಅಭಿಮಾನಿಗಳು ವಿರೋಧಿಸಿದ್ದು, ಅವರೊಟ್ಟಿಗೆ ಕನ್ನಡಪರ ಹೋರಾಟಗಾರರು ವಾಗ್ವಾದ ಮಾಡಿದ್ದಾರೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಯಾವ ಚಿತ್ರಮಂದಿರದ ಬಳಿಕ ಹೀಗೊಂದು ಘಟನೆ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಕನ್ನಡಪರ ಹೋರಾಟಗಾರರ ಪೋಸ್ಟರ್ ಹರಿದಿರುವ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’ ಫಸ್ಟ್ ಹಾಫ್ ವಿಮರ್ಶೆ
‘ಹರಿ ಹರ ವೀರ ಮಲ್ಲು’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲಿಯೂ ಸಿನಿಮಾ ಬಿಡುಗಡೆ ಆಗಿದೆ. ಆದರೆ ಬೆಂಗಳೂರಿನಲ್ಲಿ ಸಿನಿಮಾದ ಕನ್ನಡ ಆವೃತ್ತಿಗೆ ಸಿಕ್ಕಿರುವುದು ಎರಡು ಚಿತ್ರಮಂದಿರ ಮತ್ತು ಆರು ಶೋಗಳು ಮಾತ್ರವೇ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಬಹುತೇಕ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು ತೆಲುಗು ಭಾಷೆಯಲ್ಲಿಯೇ ಸಿನಿಮಾ ಬಿಡುಗಡೆ ಮಾಡಿವೆ. ಸಿನಿಮಾದ ಪ್ರಚಾರದ ಪೋಸ್ಟರ್ಗಳು ಸಹ ತೆಲುಗಿನಲ್ಲೆಯೇ ಇವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




