ಪುನೀತ್ ಮನೆಗೆ ಪೊಲೀಸ್ ಬಂದೋಬಸ್ತ್; 12 ಗಂಟೆವರೆಗೆ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ನೋ ಎಂಟ್ರಿ
ಪುನೀತ್ ರಾಜ್ಕುಮಾರ್ ಕುಟುಂಬದವರು 11ನೇ ದಿನದ ಕಾರ್ಯ ನೆರವೇರಿಸುತ್ತಿರುವ ಕಾರಣದಿಂದ ಬೆಳಗ್ಗೆ ಸಮಾಧಿ ಬಳಿ ಅಭಿಮಾನಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮಧ್ಯಾಹ್ನ 12 ಗಂಟೆ ನಂತರ ಅಭಿಮಾನಿಗಳಿಗೆ ಎಂಟ್ರಿ ನೀಡಲಾಗುವುದು.

ಪುನೀತ್ ರಾಜ್ಕುಮಾರ್ ಅವರ ಮೇಲೆ ಜನರು ಇಟ್ಟಂತಹ ಅಭಿಮಾನಕ್ಕೆ ಬೆಲೆ ಕಟ್ಟಲಾಗದು. ಅಪ್ಪು ನಿಧನರಾಗಿ 11 ದಿನ ಆಗಿದ್ದರೂ ಕೂಡ ಫ್ಯಾನ್ಸ್ ಮನದಲ್ಲಿನ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಪ್ರತಿದಿನ ಸಮಾಧಿ ದರ್ಶನಕ್ಕೆ ಸಾವಿರಾರು ಅಭಿಮಾನಿಗಳು ಬರುತ್ತಲೇ ಇದ್ದಾರೆ. ಇಂದು (ನ.8) ಪುನೀತ್ ಅವರ 11ನೇ ದಿನದ ಕಾರ್ಯವನ್ನು ನೆರವೇರಿಸಲಾಗುತ್ತಿದೆ. ಡಾ. ರಾಜ್ ಕುಟುಂಬದವರು ಪುನೀತ್ ನಿವಾಸ ಮತ್ತು ಸಮಾಧಿ ಬಳಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆ ಮತ್ತು ಸಮಾಧಿ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅಪ್ಪು ನಿಧನದ ಬಳಿಕ ಕೆಲವು ಅಭಿಮಾನಿಗಳಿಗೆ ದಿಕ್ಕು ತೋಚದಂತಾಗಿದೆ. ಇಂದು 11ನೇ ದಿನದ ಪುಣ್ಯಸ್ಮರಣೆ ಇರುವುದರಿಂದ ಫ್ಯಾನ್ಸ್ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರಿಂದ ಕುಟುಂಬದವರ ಕಾರ್ಯಕ್ಕೆ ತೊಂದರೆ ಆಗಬಾರದು. ಹಾಗಾಗಿ ಪುನೀತ್ ರಾಜ್ಕುಮಾರ್ ಮನೆ ಎದುರು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಸಮಾಧಿ ಬಳಿಯೂ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮಧ್ಯಾಹ್ನ 12ರವರೆಗೂ ಅಭಿಮಾನಿಗಳ ಪ್ರವೇಶ ನಿರ್ಬಂಧ:
ಪುನೀತ್ ರಾಜ್ಕುಮಾರ್ ಕುಟುಂಬದವರು ಹಾಲು-ತುಪ್ಪ ಕಾರ್ಯ ನೆರವೇರಿಸಿದ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಡಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ದಿನ 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಸಮಾಧಿ ಬಳಿ ಬಂದು ನಮನ ಸಲ್ಲಿಸುತ್ತಿದ್ದಾರೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಅಪ್ಪುಗೆ ನಮಿಸುತ್ತಿದ್ದಾರೆ. ಆದರೆ ಇಂದು ಪುನೀತ್ ರಾಜ್ಕುಮಾರ್ ಕುಟುಂಬದವರು 11ನೇ ದಿನದ ಕಾರ್ಯ ನೆರವೇರಿಸುತ್ತಿರುವ ಕಾರಣದಿಂದ ಬೆಳಗ್ಗೆ ಸಮಾಧಿ ಬಳಿ ಅಭಿಮಾನಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕುಟುಂಬದವರು ಕಾರ್ಯ ಮುಗಿಸಿದ ಬಳಿಕ, ಅಂದರೆ 12 ಗಂಟೆ ನಂತರ ಅಭಿಮಾನಿಗಳಿಗೆ ಎಂಟ್ರಿ ನೀಡಲಾಗುವುದು.
ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿದ ಕ್ಷಣದಿಂದಲೂ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಎಲ್ಲಿಯೂ ಗೊಂದಲಕ್ಕೆ ಎಡೆಮಾಡಿಕೊಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದೇ ರೀತಿ ಇಂದು ಕೂಡ 11ನೇ ದಿನದ ಕಾರ್ಯವನ್ನು ಕುಟುಂಬದವರು ನೆರವೇರಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಪುನೀತ್ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಕಾರ್ಯ ಆರಂಭ ಆಗಿದೆ. ಮನೆಯನ್ನು ಹೂವಿನಿಂದ ಸಿಂಗರಿಸಲಾಗಿದೆ. ಮನೆ ಎದುರು ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿದೆ. 10 ಗಂಟೆ ಸುಮಾರಿಗೆ ಅಪ್ಪು ಸಮಾಧಿ ಬಳಿ ಕುಟುಂಬಸ್ಥರು ಬರಲಿದ್ದಾರೆ. ಪುನೀತ್ ಅವರಿಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ಸಮಾಧಿ ಮುಂದೆ ಇಟ್ಟು ಪೂಜೆ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಕುಟುಂಬದವರ ಜೊತೆ ಕೆಲವೇ ಕೆಲವು ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಇದನ್ನೂ ಓದಿ:
ಅಪ್ಪು ಮೇಲೆ ಜನರಿಟ್ಟ ಅಭಿಮಾನಕ್ಕೆ ಸಾಟಿ ಇಲ್ಲ; ಪುನೀತ್ ಸಮಾಧಿ ಬಳಿ ಜನಸಾಗರ ಇನ್ನೂ ಕಮ್ಮಿ ಆಗಿಲ್ಲ




