ಅಗಲಿದ ತಾರೆ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಹುಟ್ಟಿದ ದಿನವಾದ ಇಂದು (ಮಾರ್ಚ್ 17) ಮುಂಜಾನೆಯಿಂದಲೇ ಅವರ ಸ್ಮಾರಕದ ಬಳಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದಾರೆ. ಅಸಲಿಗೆ ಕಳೆದ ಎರಡು ದಿನಗಳಿಂದಲೂ ಸ್ಮಾರಕಕ್ಕೆ ಭೇಟಿ ನೀಡುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇಂದು ಹುಟ್ಟುಹಬ್ಬವಾದ್ದರಿಂದ ಮಧ್ಯರಾತ್ರಿಯಿಂದಲೇ ಹಲವು ರೀತಿಯ ಕಾರ್ಯಕ್ರಮಗಳು ಕಂಠೀರವ ಸ್ಟುಡಿಯೋನಲ್ಲಿನ ಅಪ್ಪು ಸ್ಮಾರಕ ಬಳಿ ಪ್ರಾರಂಭವಾಗಿವೆ. ರಾತ್ರಿಯೇ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಂದಹಾಗೆ ಅಪ್ಪುವಿನ ಈ ಹುಟ್ಟುಹಬ್ಬವನ್ನು ‘ಸ್ಪೂರ್ತಿಯ ಹಬ್ಬ’ವನ್ನಾಗಿ ಆಚರಿಸುತ್ತಿರುವುದು ವಿಶೇಷ.
ಹುಟ್ಟುಹಬ್ಬದ ಅಂಗವಾಗಿ ಅಪ್ಪುವಿನ ಸಮಾಧಿಯನ್ನು ಕೆಂಪು ಗುಲಾಬಿ ಹೂವುಗಳಿಂದ ಸಿಂಗರಿಸಲಾಗಿದೆ. ಅಭಿಮಾನಿಗಳ ಸುಗಮ ದರ್ಶನಕ್ಕೆ ಸಕಲ ರೀತಿಯ ವ್ಯವಸ್ಥೆ ಮಾಡಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಇಂದು ಒಂದೇ ದಿನ ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಅನ್ನದಾನ ವ್ಯವಸ್ಥೆಯನ್ನು ದೊಡ್ಮನೆ ಕುಟುಂಬ ಮಾಡಿದೆ. ಬಂದವರಿಗೆಲ್ಲ ಚಿಕನ್ ಬಿರಿಯಾನಿ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರ ಜವಾಬ್ದಾರಿಯನ್ನು ಯುವ ರಾಜ್ಕುಮಾರ್ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ತಯಾರಿ ಹೀಗಿದೆ ನೋಡಿ
ಕೆಲವು ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಮಾಡಲಾಗಿವೆ. ಅಪ್ಪು ಸಿನಿಮಾದ ಹಾಡುಗಳು ಇಂದು ಸ್ಮಾರಕದ ಬಳಿ ಕೇಳಿ ಬರಲಿವೆ. ಇವುಗಳ ಜೊತೆಗೆ ಅಭಿಮಾನಿಗಳು ಸ್ಮಾರಕದ ಬಳಿಯೇ ರಕ್ತದಾನ, ನೇತ್ರದಾನ ಶಿಬಿರಗಳನ್ನು ಸಹ ಏರ್ಪಡಿಸಿದ್ದಾರೆ. ಪ್ರತಿ ಹುಟ್ಟುಹಬ್ಬದಂತೆ ಇಂದು ಸಹ ಲಕ್ಷಾಂತರ ಜನ ರಕ್ತದಾನ ಹಾಗೂ ನೇತ್ರದಾನಗಳನ್ನು ಮಾಡಲಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ದೊಡ್ಮನೆ ಕುಟುಂಬದ ಸದಸ್ಯರೆಲ್ಲ ಸ್ಮಾರಕಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಲಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್, ಅಪ್ಪು ಪುತ್ರಿ ಆಗಮಿಸಿ ಸ್ಮಾರಕಕ್ಕೆ ಪೂಜೆ ಮಾಡಲಿದ್ದಾರೆ. ಶಿವಣ್ಣ-ಗೀತಕ್ಕ, ರಾಘವೇಂದ್ರ ರಾಜ್ಕುಮಾರ್ ಹಾಗೂ ಕುಟುಂಬದವರು ಆಗಮಿಸಿ ಸ್ಮಾರಕಕ್ಕೆ ಪೂಜೆ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಮಾತ್ರವೇ ಅಲ್ಲದೆ ಇಡೀ ರಾಜ್ಯದೆಲ್ಲೆಡೆ ಇಂದು ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯದ ಹಲವು ನಗರಗಳಲ್ಲಿ ಅಭಿಮಾನಿಗಳು ಇಂದು ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ರಕ್ತದಾನ ಶಿಬಿರಗಳು ಆಯೋಜನೆಗೊಂಡಿವೆ. ಅನ್ನದಾನಗಳು ಏರ್ಪಟ್ಟಿವೆ, ಅಪ್ಪು ಅಭಿಮಾನಿಗಳು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ತೆರಳಿ ಸೇವೆಗಳನ್ನು ಸಹ ಮಾಡುತ್ತಿದ್ದಾರೆ. ಒಟ್ಟಾರೆ ಅಪ್ಪು ಬದುಕಿದ್ದಾಗ ಮಾಡಿದ್ದ ಕೆಲಸವನ್ನು ಅವರ ಅಭಿಮಾನಿಗಳು ಮುಂದುವರೆಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ