ತಟ್ಟೆ ಹಿಡಿದು ನಿಂತಿದ್ದ ಉಪೇಂದ್ರ ಅವರ ಪಕ್ಕಕ್ಕೆ ಸರಿಸಿದ್ದ, ಆದರೆ ಉಪ್ಪಿ ಮಾಡಿದ್ದೇನು?

Upendra: ಆರಂಭದಲ್ಲಿ ಹಲವು ಕಷ್ಟಗಳನ್ನು ಎದುರಿಸಿದ ಉಪೇಂದ್ರ ತಮಗೆ ಸೆಟ್ ನಲ್ಲಿ ಆದ ಅವಮಾನ, ಹಾಗೂ ಅವಮಾನ ಮಾಡಿದ ವ್ಯಕ್ತಿಯೊಟ್ಟಿಗೆ ತಾವು ನಡೆದುಕೊಂಡ ರೀತಿಯ ಬಗ್ಗೆ ಮಾತನಾಡಿದ್ದಾರೆ.

ತಟ್ಟೆ ಹಿಡಿದು ನಿಂತಿದ್ದ ಉಪೇಂದ್ರ ಅವರ ಪಕ್ಕಕ್ಕೆ ಸರಿಸಿದ್ದ, ಆದರೆ ಉಪ್ಪಿ ಮಾಡಿದ್ದೇನು?
Follow us
ಮಂಜುನಾಥ ಸಿ.
|

Updated on: Mar 16, 2024 | 9:37 PM

ಕನ್ನಡ ಚಿತ್ರರಂಗದಲ್ಲಿ (Sandalwood) ಇಂದು ದೊಡ್ಡ ಹೆಸರು ಮಾಡಿರುವ ಹಲವು ನಿರ್ದೇಶಕರ, ನಟರ ಮೆಚ್ಚಿನ ನಿರ್ದೇಶಕ ಉಪೇಂದ್ರ. ಅವರ ರೀತಿ ಭಿನ್ನವಾಗಿ ಯೋಚಿಸುವ ನಿರ್ದೇಶಕರು ಭಾರತದಲ್ಲಿ ಇಲ್ಲ. ನಟನೆ ಹಾಗೂ ನಿರ್ದೇಶನ ಎರಡರಲ್ಲೂ ಸ್ಟಾರ್ ಆದ ಅತ್ಯಂತ ವಿರಳ ವ್ಯಕ್ತಿಗಳಲ್ಲಿ ಉಪೇಂದ್ರ ಒಬ್ಬರು. ಆದರೆ ಉಪೇಂದ್ರ ಅವರ ಈ ಜರ್ನಿ ಹೂವಿನ ಹಾದಿ ಆಗಿರಲಿಲ್ಲ. ಚಿತ್ರರಂಗದ ಹಿನ್ನೆಲೆ ಇಲ್ಲದೆ ಕೇವಲ ಪ್ರತಿಭೆ ನೆಚ್ಚಿಕೊಂಡು ಚಿತ್ರರಂಗಕ್ಕೆ ಬಂದ ಉಪೇಂದ್ರ ಆರಂಭದಲ್ಲಿ ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದಾರೆ. ಅಂಥಹಾ ಒಂದು ಘಟನೆ ಬಗ್ಗೆ ತೆಲುಗು ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಉಪೇಂದ್ರ ನೆನಪು ಮಾಡಿಕೊಂಡಿದ್ದರು.

‘ನಾನು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಒಮ್ಮೆ ಬ್ರೇಕ್ ನಲ್ಲಿ ಊಟಕ್ಕಾಗಿ ತಟ್ಟೆ ಹಿಡಿದು ನಿಂತಿದ್ದಾಗ, ಊಟ ಬಡಿಸುತ್ತಿದ್ದ ಪ್ರೊಡಕ್ಷನ್​ನ ವ್ಯಕ್ತಿಯೊಬ್ಬ ಊಟ ಇಲ್ಲ ಪಕ್ಕಕ್ಕೆ ಸರಿ ಎಂದು ತಳ್ಳಿಬಿಟ್ಟಿದ್ದ. ಇಂಥಹಾ ಹಲವು ದಿನಗಳನ್ನು ನಾನು ನೋಡಿದ್ದೇನೆ. ಆದರೆ ನಾನು ಹೀರೋ ಆಗಿ ನಟಿಸಲು ಆರಂಭಿಸಿದ ಮೇಲೆಯೂ ಆ ವ್ಯಕ್ತಿ ನನ್ನ ಸೆಟ್ ಗೆ ಬಂದಿದ್ದ ಅಲ್ಲಿಯೂ ಊಟ ಬಡಿಸುತ್ತಿದ್ದ. ನಾನು ಆತನನ್ನು ಗೌರವದಿಂದಲೇ ಮಾತನಾಡಿಸಿದೆ. ಅದಕ್ಕೆ ಕಾರಣವೂ ಇದೆ’ ಎಂದಿದ್ದಾರೆ ಉಪ್ಪಿ.

‘ಆತ ನನಗೆ ಅವಮಾನ ಮಾಡಿದಾಗ ನಾನು ಏನೂ ಆಗಿರಲಿಲ್ಲ. ನಾನು ಹೀರೋ ಆದ ಬಳಿಕ, ಹಳೆಯದನ್ನು ನೆನಪಿಟ್ಟಕೊಂಡು ಅವನ ಮೇಲೆ ದ್ವೇಷ ತೀರಿಸಿಕೊಳ್ಳುವುದು ಸರಿಯಲ್ಲ. ಅದಕ್ಕೆ ಅರ್ಥವೂ ಇಲ್ಲ. ಒಬ್ಬ ವ್ಯಕ್ತಿ ಜೀವನದಲ್ಲಿ ಅನುಭವಿಸುವ ಕಹಿ ಆತನನ್ನು ಒಳ್ಳೆಯ ವ್ಯಕ್ತಿ ಆಗಿಸಬೇಕೆ ಹೊರತು, ಕೆಟ್ಟ ವ್ಯಕ್ತಿಯಲ್ಲ ಎಂದು ಪತ್ರಕರ್ತರೊಬ್ಬರು ನನಗೆ ಹೇಳಿದ್ದರು ನಾನು ಅದನ್ನು ಪಾಲಿಸಿಕೊಂಡು ಬರುತ್ತಿದ್ದೇನೆ’ ಎಂದಿದ್ದರು ಉಪೇಂದ್ರ.

ಇದನ್ನೂ ಓದಿ:‘ಟ್ರೋಲ್​ ಸಾಂಗ್​’ ಮಾತ್ರವಲ್ಲ, ಉಪೇಂದ್ರ ಮಾಡಿದ ಸಾಹಿತ್ಯದ ಪ್ರಯೋಗಗಳು ಹತ್ತು ಹಲವು..

ಅದೇ ಸಂದರ್ಶನದಲ್ಲಿ ಮುಂದುವರೆದು ಮಾತನಾಡಿರುವ ಉಪ್ಪಿ, ‘ ನಾನು ಸೊನ್ನೆಯಿಂದ ಶುರು ಮಾಡಿದವನು. ನನ್ನ ಬಳಿ ಏನೂ ಇರಲಿಲ್ಲ. ಹಾಗಾಗಿ ನನಗೆ ಸಿಕ್ಕಿದ್ದೆಲ್ಲವೂ ಪ್ಲಸ್ಸೆ, ಸಿಗದೇ ಇದ್ದರೆ ನಷ್ಟವಾಗುವಂಥಹದ್ದು ಏನೂ ಇಲ್ಲ. ಏಕೆಂದರೆ ಆ ಮೊದಲೂ ಸಹ ನನ್ನ ಬಳಿ ಏನೂ ಇರಲಿಲ್ಲ ಎಂದಿದ್ದಾರೆ ಉಪೇಂದ್ರ.

ಉಪೇಂದ್ರ ಕಾಲೇಜಿನಲ್ಲಿದ್ದಾಗ ಕವನಗಳನ್ನು ಬರೆಯುತ್ತಿದ್ದರು. ಅವರನ್ನು ಅವರದ್ದೇ ಸಂಬಂಧಿಯೊಬ್ಬರು ಕಾಶೀನಾಥ್ ಬಳಿ ತಂದು ಬಿಟ್ಟರು. ಅಲ್ಲಿಯೂ ಸಹ ತಮ್ಮ ಪ್ರತಿಭೆಯಿಂದ ಬಹು ಬೇಗ ಕಾಶೀನಾಥ್ ಅವರ ಪ್ರಥಮ ಶಿಷ್ಯನಾದ ಉಪ್ಪಿ, ‘ತರ್ಲೆ ನನ್ ಮಗ’ ಸಿನಿಮಾ ಮೂಲಕ ನಿರ್ದೇಶಕನಾದರು. ಆ ನಂತರ ಕನ್ನಡ ಚಿತ್ರರಂಗಕ್ಕೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದು ಈಗ ಇತಿಹಾಸ. ಉಪ್ಪಿ ಬಹು ವರ್ಷಗಳ ಬಳಿಕ ಮತ್ತೆ ಸಿನಿಮಾ ನಿರ್ದಶನಕ್ಕೆ ಇಳಿದಿದ್ದು, ‘ಯುಐ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ