ಪುನೀತ್ ರಾಜಕುಮಾರ್ ಅವರ 5ನೇ ದಿನದ ಕಾರ್ಯಗಳು ನೆರವೇರಿದೆ. ಡಾ.ರಾಜ್ ಕುಟುಂಬ ಹಾಗೂ ಆಪ್ತವರ್ಗದ ಸಮ್ಮುಖದಲ್ಲಿ ಇಂದು ಹಾಲು- ತುಪ್ಪ ಕಾರ್ಯವನ್ನು ನೆರವೇರಿಸಲಾಯಿತು. ನಂತರ ಮಾತನಾಡಿದ ರಾಘವೇಂದ್ರ ರಾಜಕುಮಾರ್, ‘‘ಪುನೀತ್ ಇಲ್ಲ ಎನ್ನುವುದು ಅತ್ಯಂತ ದುಃಖ ತರುತ್ತದೆ. ಆದರೆ ಆ ದುಃಖದಲ್ಲೇ ಜೀವನ ಸಾಗಿಸಬೇಕು. ಪುನೀತ್ ಇರುವ ಅವಧಿಯಲ್ಲೇ ಎಲ್ಲಾ ಕೆಲಸಗಳನ್ನೂ ಮಾಡಿ ಹೋಗಿದ್ದಾನೆ. ದೇವರು ಅಪ್ಪಾಜಿಗೆ ದೇವರು 76 ವರ್ಷ ಕೊಟ್ಟ. ಅಪ್ಪುಗೆ 46 ವರ್ಷ ಕೊಟ್ಟಿದಾನೆ. ಅಪ್ಪು ಕಣ್ಣುಗಳು ನಾಲ್ಕು ಜನರಿಗೆ ಬೆಳಕು ಕೊಟ್ಟಿದೆ. ತಂದೆಯವರ ಕಣ್ಣುಗಳು ಇಬ್ಬರಿಗೆ ಬೆಳಕು ಕೊಟ್ಟಿದ್ದವು’’ ಎಂದಿದ್ದಾರೆ. ಶಾಂತಿಯುತವಾಗಿ ಎಲ್ಲಾ ಕಾರ್ಯಗಳು ಸಾಗಿದ್ದಕ್ಕೆ ಸರ್ಕಾರ ಹಾಗೂ ಅಭಿಮಾನಿ ವೃಂದಕ್ಕೆ ರಾಘವೇಂದ್ರ ರಾಜಕುಮಾರ್ ಧನ್ಯವಾದ ಸಲ್ಲಿಸಿದರು.ಇದೇ ವೇಳೆ ಅವರು ಸಾರ್ವಜನಿಕ ದರ್ಶನಕ್ಕೆ ಇಂದೇ ಅವಕಾಶ ಕೊಡುತ್ತೇವೆ ಎಂದಿದ್ದಾರೆ.
ಇಂದಿನ ಕಾರ್ಯದಲ್ಲಿ ಪುನೀತ್ ಅವರಿಗೆ ಪ್ರಿಯವಾದ ತಿನಿಸುಗಳನ್ನು ಇಡಲಾಗಿತ್ತು ಎಂದು ರಾಘಣ್ಣ ತಿಳಿಸಿದ್ದಾರೆ. ಪುನೀತ್ ಹೆಸರನ್ನ ರಸ್ತೆಗಳಿಗೆ ಇಟ್ಟಿರೋದು ಖುಷಿ ಕೊಟ್ಟಿದೆ ಎಂದು ರಾಘವೇಂದ್ರ ರಾಜಕುಮಾರ್, ಅಭಿಮಾನಿಗಳು ಕುಟುಂಬದ ಮೇಲೆ ಇಟ್ಟಿರುವ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಭಿಮಾನಿಗಳಿಂದಲೇ ನಾವು. ಅವರಿಲ್ಲದೇ ನಾವ್ಯಾರೂ ಅಲ್ಲ. ಪುನೀತ್ ರಾಜಕುಮಾರ್ ಆಗಿದ್ದೇ ಅಭಿಮಾನಿಗಳಿಂದ. ಇಂದೇ ಅಪ್ಪು ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ಸಚಿವ ಗೋಪಾಲಯ್ಯ ಮಾತನಾಡಿ, ‘‘ಮುಖ್ಯಮಂತ್ರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ನನ್ಮ ಕ್ಷೇತ್ರ ಹಾಗಾಗಿ ನನ್ನ ಜವಾಬ್ದಾರಿ ಕೂಡ ಆಗಿದೆ. ಪುನೀತ್ ಜೊತೆ ಆತ್ಮೀಯತೆಯಿಂದ ಇದ್ದೆವು. ಐದು ದಿನದ ಹಾಲು ತುಪ್ಪ ಕಾರ್ಯ ಇವತ್ತು ನಡೆಸಲಾಗಿದೆ. ಬರುವ ಅಭಿಮಾಗಳಿಗೆ ದರ್ಶನ ಪಡೆಯಲು ಅವಕಾಶ ಇದೆ. ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ’’ ಎಂದಿದ್ಧಾರೆ.
ಇದನ್ನೂ ಓದಿ:
‘ದಾದಾಸಾಹೇಬ್ ಫಾಲ್ಕೆ’ ರೀತಿಯೇ ಡಾ. ರಾಜ್ ಹೆಸರಲ್ಲಿ ನೀಡುವ ಪ್ರಶಸ್ತಿ ಬಗ್ಗೆ ಹೊಸ ಕನಸು ಕಂಡಿದ್ದ ಪುನೀತ್
Puneeth Rajkumar: ಅಗಲಿದ ಪುನೀತ್ಗೆ ಕುಟುಂಬಸ್ಥರಿಂದ ಹಾಲು- ತುಪ್ಪ ಕಾರ್ಯ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ