ನಟ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರು ಹೇಳಿದ್ದನ್ನು ಶಿರಸ ಪಾಲಿಸುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಈ ಕಾರಣಕ್ಕೆ ಸರ್ಕಾರದ ಜತೆ ಕೈ ಜೋಡಿಸಿರುವ ಪುನೀತ್, ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಜತೆಗೆ, ಕೊವಿಡ್ ಬಗ್ಗೆ ಭಯಬೇಡ ಎಂದು ಕೂಡ ಹೇಳಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದೆ. ಇದನ್ನು ನಿಯಂತ್ರಿಸೋಕೆ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಅಲ್ಲದೆ, ಕೊವಿಡ್ ಲಸಿಕೆ ಪಡೆಯುವಂತೆಯೂ ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಈ ಮಧ್ಯೆ, ಕೊವಿಡ್ ಬಂದರೆ ಭಯ ಪಡುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ಈ ಬಗ್ಗೆ ಭಯ ಬೇಡ ಎಂದು ಪುನೀತ್ ಜಾಗೃತಿ ಮೂಡಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಪುನೀತ್, ‘ಕೊವಿಡ್ ಎರಡನೇ ಅಲೆ ತುಂಬಾ ಗಂಭೀರ ವಿಚಾರ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊವಿಡ್ನಿಂದ ದೂರ ಇರಬಹುದು. ನಿಮ್ಮ ಸರದಿ ಬಂದಾಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ನಮಗೆ ಕೊವಿಡ್ ಬಂದರೆ ಭಯ ಬೇಡ. ಹತ್ತಿರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡಿ. ಸರ್ಕಾರ ಹೇಳಿದ ನಿಯಮ ಪಾಲಿಸುತ್ತಾ ಕೊವಿಡ್ ವಿರುದ್ಧ ಗೆಲ್ಲೋಣ’ ಎಂದು ಪುನೀತ್ ಕರೆ ನೀಡಿದ್ದಾರೆ.
ಪುನೀತ್ ಈ ಮೊದಲು ಕೂಡ ಸರ್ಕಾರದ ಸಾಕಷ್ಟು ಆಂದೋಲನದಲ್ಲಿ ಪಾಲ್ಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಈಗ ಕೊವಿಡ್ ಬಗ್ಗೆ ಅವರು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಕೊವಿಡ್ ಎರಡನೇ ಅಲೆ ಆರಂಭಕ್ಕೂ ಕೆಲವೇ ದಿನ ಮೊದಲು ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ ಸಿನಿಮಾ ತೆರೆಗೆ ಬಂದಿತ್ತು. ಅದಾಗಲೇ ಚಿತ್ರಮಂದಿರಗಳಲ್ಲಿ ಶೇ.50 ಭರ್ತಿಗೆ ಮಾತ್ರ ಸರ್ಕಾರ ಅವಕಾಶ ನೀಡಿತ್ತು. ಹೀಗಾಗಿ, ಸಿನಿಮಾ ಒಂದೇ ವಾರಕ್ಕೆ ಒಟಿಟಿಯಲ್ಲಿ ರಿಲೀಸ್ ಆಯಿತು. ಸದ್ಯ, ಪುನೀತ್ ರಾಜ್ಕುಮಾರ್ ‘ಜೇಮ್ಸ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೊವಿಡ್ ಲಾಕ್ಡೌನ್ ಇರುವ ಕಾರಣಕ್ಕೆ ಚಿತ್ರದ ಕೆಲಸಗಳು ನಿಂತಿವೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಬಾಲಿವುಡ್ ಎಂಟ್ರಿ ಯಾವಾಗ? ಅವರಿಂದಲೇ ಸಿಕ್ತು ಉತ್ತರ
Published On - 6:54 pm, Sat, 5 June 21