ಕೊವಿಡ್ ಸಮಯದಲ್ಲಿ ಪ್ರಥಮ್ ಕೆಲಸ ನೋಡಿ ಮಂಡ್ಯದಿಂದ ಫುಡ್ ಕಿಟ್ ಕಳುಹಿಸಿಕೊಟ್ಟ ಶಾಸಕ ಪುಟ್ಟರಾಜು
ನಟ ಭಯಂಕರ ಸಿನಿಮಾಗಾಗಿ ಶ್ರಮಿಸಿದ ಎಲ್ಲಾ ಕಾರ್ಮಿಕರನ್ನು ಮನೆಗೆ ಕರೆಸಿ ಅತ್ಯುತ್ತಮ ಗುಣಮಟ್ಟದ ಆಹಾರದ ಕಿಟ್, ಐಸೋಲೇಷನ್ ಕಿಟ್ ನೀಡುವ ಕೆಲಸವನ್ನು ಪ್ರಥಮ್ ಮಾಡಿದ್ದರು. ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಕೊವಿಡ್ ಸಂಕಷ್ಟ ಕಾಲದಲ್ಲಿ ನಟ ಹಾಗೂ ‘ಕನ್ನಡ ಬಿಗ್ ಬಾಸ್ 4’ ವಿನ್ನರ್ ಪ್ರಥಮ್ ಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದಾರೆ. ತಾವು ನಿರ್ದೇಶಿಸಿ ನಟಿಸಿರುವ ‘ನಟ ಭಯಂಕರ’ ಸಿನಿಮಾ ತಂಡದವರಿಗೆ ಫುಡ್ ಕಿಟ್ ನೀಡುವ ಮೂಲಕ ಇತ್ತೀಚೆಗೆ ಅವರು ಸುದ್ದಿಯಾಗಿದ್ದರು. ಈಗ ಅವರಿಗೆ ಸಹಾಯ ಮಾಡೋಕೆ ಮತ್ತಷ್ಟು ಬೆಂಬಲ ಸಿಕ್ಕಿದೆ. ಮಂಡ್ಯ ಶಾಸಕ ಸಿ.ಎಸ್. ಪುಟ್ಟರಾಜು ಅವರು ಪ್ರಥಮ್ಗೆ ಫುಡ್ ಕಿಟ್ ಕಳುಹಿಸಿ ಕೊಟ್ಟಿದ್ದಾರೆ. ಇದನ್ನು ಪ್ರಥಮ್ ಅಗತ್ಯವಿರುವರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ.
ನಟ ಭಯಂಕರ ಸಿನಿಮಾಗಾಗಿ ಶ್ರಮಿಸಿದ ಎಲ್ಲಾ ಕಾರ್ಮಿಕರನ್ನು ಮನೆಗೆ ಕರೆಸಿ ಅತ್ಯುತ್ತಮ ಗುಣಮಟ್ಟದ ಆಹಾರದ ಕಿಟ್, ಐಸೋಲೇಷನ್ ಕಿಟ್ ನೀಡುವ ಕೆಲಸವನ್ನು ಪ್ರಥಮ್ ಮಾಡಿದ್ದರು. ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ, ನಾನು ಮಾಡುವ ಕೆಲಸಕ್ಕೆ ಉಪೇಂದ್ರ ಸ್ಫೂರ್ತಿ ಎಂದು ಅವರು ಹೇಳಿಕೊಂಡಿದ್ದರು. ಪ್ರಥಮ್ ಕೆಲಸ ನೋಡಿ ಮಂಡ್ಯದಿಂದ 110 ಫುಡ್ ಕಿಟ್ಗಳನ್ನು ಶಾಸಕ ಪುಟ್ಟರಾಜು ಕಳುಹಿಸಿಕೊಟ್ಟಿದ್ದಾರೆ. ಇದನ್ನು ಕಷ್ಟದಲ್ಲಿರುವವರಿಗೆ ಹಂಚುವ ಕೆಲಸ ಮಾಡಿದ್ದಾರೆ ಪ್ರಥಮ್.
ಈ ಬಗ್ಗೆ ಮಾತನಾಡಿರುವ ಪ್ರಥಮ್, ‘ಯಾವುದೇ ನಿರೀಕ್ಷೆ ಇಲ್ಲದೆ ಪುಟ್ಟರಾಜು ಅವರು ನನಗೆ ಫುಡ್ಕಿಟ್ ಕಳುಹಿಸಿಕೊಟ್ಟಿದ್ದಾರೆ. ಇದನ್ನು ನಾನು ಕಷ್ಟದಲ್ಲಿರುವವರಿಗೆ ತಲುಪಿಸುತ್ತಿದ್ದೇನೆ. ಸುಮಾರು ರಾಜಕಾರಣಿಗಳು ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಆದರೆ, ಇವರು ಆ ರೀತಿ ಮಾಡಿಲ್ಲ. ಸಿನಿಮಾಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದಾಗ್ಯೂ ಅವರು ಫುಡ್ ಕಿಟ್ ಕಳುಹಿಸಿಕೊಟ್ಟಿದ್ದು, ಸಂಕಷ್ಟದಲ್ಲಿರುವವರಿಗೆ ತಲುಪಿಸಲಾಗುತ್ತಿದೆ ಎನ್ನುತ್ತಾರೆ ಪ್ರಥಮ್.
ಪ್ರಥಮ್ ನಟ ಭಯಂಕರ ಸಿನಿಮಾ ನಿರ್ದೇಶಿಸಿ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ನಲ್ಲಿ ತೆರೆಗೆ ತರುವ ನಿರೀಕ್ಷೆ ಪ್ರಥಮ್ ಅವರದ್ದು. ಸಿನಿಮಾ ಮೇಲೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಯಶಸ್ಸು ಗಳಿಸಲಿದೆ ಎನ್ನುವ ಆತ್ಮವಿಶ್ವಾಸದಲ್ಲಿ ಇದ್ದಾರೆ.