‘ಬೇರೆಯವರ ದುಡ್ಡಲ್ಲಿ ನಾನೇಕೆ ಬಿಲ್ಡಪ್ ತೆಗೆದುಕೊಳ್ಳಲಿ?’; ಸ್ವಂತ ಖರ್ಚಲ್ಲಿ ‘ನಟ ಭಯಂಕರ’ ಸಿನಿಮಾ ಕಾರ್ಮಿಕರಿಗೆ ಪ್ರಥಮ್ ಸಹಾಯ
ಉಪೇಂದ್ರ ಅವರ ಕೆಲಸವನ್ನು ನೋಡಿ ಪ್ರಥಮ್ ಕೂಡ ಸ್ಫೂರ್ತಿ ಪಡೆದಿದ್ದು, ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೇರಿದ ಲಾಕ್ಡೌನ್ನಿಂದಾಗಿ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಚಿತ್ರರಂಗದ ಕಾರ್ಮಿಕರು ಹಾಗೂ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ನಟ-ನಟಿಯರು ಇವರ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಈಗ ನಟ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 4’ರ ವಿನ್ನರ್ ಒಳ್ಳೇ ಹುಡುಗ ಪ್ರಥಮ್ ಕೂಡ ಸಹಾಯ ಹಸ್ತ ಚಾಚಿದ್ದಾರೆ. ಅವರು ನಿರ್ದೇಶಿಸಿ ನಟಿಸುತ್ತಿರುವ ನಟ ಭಯಂಕರ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ಪ್ರಥಮ್ ಸಹಾಯ ಮಾಡಿದ್ದಾರೆ.
‘ನಟ ಭಯಂಕರ ಸಿನಿಮಾಗಾಗಿ ಶ್ರಮಿಸಿದ ಎಲ್ಲಾ ಕಾರ್ಮಿಕರನ್ನು ಮನೆಗೆ ಕರೆಸಿ ಅವರಿಗೆ ಅತ್ಯುತ್ತಮ ಗುಣಮಟ್ಟದ ಆಹಾರದ ಕಿಟ್, ಐಸೋಲೇಷನ್ ಕಿಟ್ ನೀಡಿದ್ದೇವೆ. ನಮ್ಮ ಕಾರ್ಮಿಕರಿಗೆ ಒಂದು ತಿಂಗಳು ಯಾವುದೇ ಸಮಸ್ಯೆ ಬರಬಾರದು. ಎಲ್ಲರ ಮನೆಯಲ್ಲೂ ಯಾವಾಗ ತೊಂದರೆ ಬರುತ್ತದೆ ಎಂದ ಹೇಳೋಕೆ ಸಾಧ್ಯವಿಲ್ಲ. ಅವರಿಗೆ ತೊಂದರೆ ಆದಾಗ ಹೊರಗೆ ಹೋಗಿ ತರೋದು ಕಷ್ಟ. ಈ ಕಾರಣಕ್ಕೆ ನಾವು ವೈದ್ಯಕೀಯ ಕಿಟ್ ಕೂಡ ನೀಡಿದ್ದೇವೆ’ ಎನ್ನುತ್ತಾರೆ ಪ್ರಥಮ್.
‘ನಟ ಭಯಂಕರ ಸಿನಿಮಾ ಶೂಟಿಂಗ್ ವೇಳೆ 6 ಗಂಟೆಗೆ ಪ್ಯಾಕ್ಅಪ್ ಆಗುತ್ತಿತ್ತು. ಆದರೆ, ನನ್ನ ಸಿನಿಮಾದಲ್ಲಿ ಕೆಲಸ ಮಾಡಿದವರು 7:30ವರೆಗೂ ಕೆಲಸ ಮಾಡುತ್ತಿದ್ದರು. ಅವರು ಎಂದಿಗೂ ಹೆಚ್ಚಿನ ಹಣ ಕೇಳಿಲ್ಲ. ನನ್ನ ಕಷ್ಟಕ್ಕೆ ಅವರು ಓಗೊಟ್ಟಾಗ ನಾನು ಕೂಡ ಅವರ ಕಷ್ಟವನ್ನು ಆಲಿಸಲೇಬೇಕು. ಅದು ನನ್ನ ಕರ್ತವ್ಯ. ಈ ಕಾರಣಕ್ಕೆ ನಾನು ಫುಡ್ಕಿಟ್ ಕೊಟ್ಟಿದ್ದೇನೆ’ ಎನ್ನುತ್ತಾರೆ ಪ್ರಥಮ್.
‘ಜನಗಳ ಹತ್ತಿರ ನಾನು ಒಂದು ರೂಪಾಯಿ ತೆಗೆದುಕೊಂಡಿಲ್ಲ. ಜನರಿಂದ ಹಣ ತೆಗೆದುಕೊಂಡು ಅದನ್ನು ಜನರಿಗೇ ನೀಡಿ ಬಿಲ್ಡಪ್ ತೆಗೆದುಕೊಳ್ಳೋ ಅವಶ್ಯಕತೆ ಇಲ್ಲ. ಜನರೇ ಕಷ್ಟದಲ್ಲಿದ್ದಾರೆ. ಮತ್ತೆ ಅವರಿಂದ ಹಣ ತೆಗೆದುಕೊಳ್ಳಲು ಮನಸ್ಸು ಬಂದಿಲ್ಲ. ಹೀಗಾಗಿ, ನಾನು ಸೋಶಿಯಲ್ ಮೀಡಿಯಾ ಪೋಸ್ಟ್ಗಳಲ್ಲೂ ಇದನ್ನು ಉಲ್ಲೇಖ ಮಾಡಿದ್ದೇನೆ’ ಎಂದಿದ್ದಾರೆ ಅವರು.
ಈ ಕೆಲಸಕ್ಕೆ ಸ್ಫೂರ್ತಿ ಯಾರು ಎನ್ನುವ ಪ್ರಶ್ನೆಗೆ ಉಪೇಂದ್ರ ಹೆಸರನ್ನು ಹೇಳುತ್ತಾರೆ ಪ್ರಥಮ್. ಕಷ್ಟದಲ್ಲಿರುವ ಸಾಕಷ್ಟು ಜನರಿಗೆ ಉಪೇಂದ್ರ ಸಹಾಯ ಮಾಡಿದ್ದಾರೆ. ಈ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಉಪೇಂದ್ರ ಅವರ ಕೆಲಸವನ್ನು ನೋಡಿ ಪ್ರಥಮ್ ಕೂಡ ಸ್ಫೂರ್ತಿ ಪಡೆದಿದ್ದು, ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ಶೋನಲ್ಲಿ ಪ್ರಥಮ್, ಸಿಹಿಕಹಿ ಚಂದ್ರು, ಅಕುಲ್ ಬಾಲಾಜಿ! ಕಿರುತೆರೆ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ