ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಧೃತಿಗೆ ತಂದೆ ಪುನೀತ್ ರಾಜ್ಕುಮಾರ್ ಮೃತಪಟ್ಟಿರುವ ವಿಚಾರ ನಿಜಕ್ಕೂ ಶಾಕಿಂಗ್ ಆಗಿದೆ. ತಂದೆ ಮೃತಪಟ್ಟ ಸುದ್ದಿ ಕೇಳುತ್ತಲೇ ಅವರು ವಿಮಾನ ಏರಿ ಬೆಂಗಳೂರಿಗೆ ಬಂದಿದ್ದಾರೆ. 24 ಗಂಟೆಗೂ ಅಧಿಕ ಕಾಲ ಪ್ರಯಾಣ ಬೆಳೆಸಿ ಬೆಂಗಳೂರು ತಲುಪಿದ್ದಾರೆ. ವಿಮಾನ ನಿಲ್ದಾಣದಿಂದ ಅವರು ನೇರವಾಗಿ ಕಂಠೀರವ ಸ್ಟೇಡಿಯಂ ತಲುಪಿದರು. ಅಪ್ಪನ ತಲೆ ಸವರಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ದೊಡ್ಡಪ್ಪ ಶಿವರಾಜ್ಕುಮಾರ್ ಅವರು ಧೃತಿಯನ್ನು ಸಂತೈಸುವ ಪ್ರಯತ್ನ ಮಾಡಿದರು.
ಧೃತಿ ಅವರು ಇಂದು (ಅಕ್ಟೋಬರ್ 30) ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮಧ್ಯಾಹ್ನ 1.30ಕ್ಕೆ ಬೆಂಗಳೂರು ವಿಮಾನ ಏರಿದರು. ಸಂಜೆ 4 ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧೃತಿ ಆಗಮಿಸಿದರು. ಏರ್‌ಪೋರ್ಟ್‌ನಿಂದ ನೇರವಾಗಿ ಕಂಠೀರವ ಸ್ಟೇಡಿಯಂಗೆ ಅವರು ಆಗಮಿಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಅವರು ಅಮೆರಿಕಕ್ಕೆ ತೆರಳಿದ್ದರು.
ಅಂತ್ಯಕ್ರಿಯೆ ಯಾವಾಗ?
ನಟ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ಇಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿ ಆಗಿದ್ದವು. ಇಂದು (ಅಕ್ಟೋಬರ್ 30) ಸಂಜೆಯೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿತ್ತು. ಆದರೆ, ಈಗ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಿದ್ದು, ಭಾನುವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.
ಜಿಮ್ನಲ್ಲಿ ವರ್ಕೌಟ್ ಮಾಡಿದ ಬಳಿಕ ಹೃದಯಾಘಾತದಿಂದಾಗಿ ವಿಧಿವಶರಾಗಿರುವ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಪುನೀತ್ ಅವರ ಅಭಿಮಾನಿಗಳು ಈ ದುಃಖಕರ ಸನ್ನಿವೇಶದಲ್ಲಿ ಭಾವಾವೇಶಕ್ಕೆ ಒಳಗಾಗಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು. ಶಾಂತಿ, ಸಂಯಮದಿಂದ ವರ್ತಿಸಿ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಾಯುವ ಕೆಲವೇ ಗಂಟೆಗಳ ಮುನ್ನ ಪುನೀತ್ ರಾಜ್ಕುಮಾರ್ ಮಾತನಾಡಿದ್ದೇನು? ಆಡಿಯೋ ಕ್ಲಿಪ್ ವೈರಲ್
Published On - 6:14 pm, Sat, 30 October 21