ಪುನೀತ್ ಕಣ್ಣು ನಾಲ್ವರಿಗೆ ಅಳವಡಿಕೆ; ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಭುಜಂಗಶೆಟ್ಟಿ
ಪುನೀತ್ ರವರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ. ಡಾ.ರಾಜ್‌ಕುಮಾರ್ ಅವರೂ ನೇತ್ರದಾನ ಮಾಡಿದ್ದರು.
ಬೆಂಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನೇತ್ರದಾನ ಮಾಡಿದ್ದರು. ಅಪ್ಪು ಕಣ್ಣನ್ನು ನಾಲ್ವರಿಗೆ ಅಳವಡಿಕೆ ಮಾಡಲಾಗಿದೆ ಅಂತ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪುನೀತ್ ರವರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ. 1994 ರಲ್ಲಿ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ನಮ್ಮ ಆಸ್ಪತ್ರೆಯಲ್ಲಿ ನೇತ್ರದಾನ ವಿಂಗ್ ಉದ್ಘಾಟನೆ ಮಾಡಿದ್ದರು. ಡಾ.ರಾಜ್‌ಕುಮಾರ್ ಅವರೂ ನೇತ್ರದಾನ ಮಾಡಿದ್ದರು. ಈಗ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ ಅಂತ ಮಾತನಾಡಿದ ಭುಜಂಗಶೆಟ್ಟಿ ರಾಜ್ ಕುಟುಂಬಕ್ಕೆ ಧನ್ಯವಾದ ತಿಳಿಸಿದರು.
ಪುನೀತ್ ರಾಜ್‌ಕುಮಾರ್ ಕಣ್ಣುಗಳನ್ನು ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶನಿವಾರ ನಾಲ್ವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಾಮಾನ್ಯವಾಗಿ 2 ಕಣ್ಣು ಇಬ್ಬರಿಗೆ ಅಳವಡಿಸುವುದು ಸಾಮಾನ್ಯ. ಆದರೆ ಪುನೀತ್‌ರ 2 ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ. ಹೊಸ ತಂತ್ರಜ್ಞಾನದ ಮೂಲಕ ನಾಲ್ವರಿಗೆ ದೃಷ್ಟಿ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಡಾ.ಭುಜಂಗಶೆಟ್ಟಿ ಮಾಹಿತಿ ನೀಡಿದ್ದಾರೆ.
ನಾಲ್ವರು ಕನ್ನಡಿಗರಿಗೆ ಕಣ್ಣು ನೀಡಿದ ಅಪ್ಪು ಕಾರ್ನಿಯಾಗಳನ್ನ ಎರಡು ಭಾಗ ಮಾಡಲಾಗಿದೆ. ಮುಂಭಾಗದ ಕಣ್ಣು ಹಾಗೂ ಹಿಂಭಾಗದ ಆಳದ ಪದರಗಳನ್ನ ಭಾಗ ಮಾಡಲಾಗಿತ್ತು. ಯಾರಿಗೆ ಮುಂಭಾಗದ ಕಾರ್ನಿಯಾ ಹಾನಿಯಾಗಿತ್ತೋ ಅವರಿಗೆ ಮುಂಭಾಗದ ಕಾರ್ನಿಯಾ ನೀಡಲಾಗಿದೆ. ಹಿಂಭಾಗದ ಆಳದ ಪದರವನ್ನ ಬೇರೆಯವರಿಗೆ ನೀಡಲಾಗಿದೆ. ಒಟ್ಟು ನಾಲ್ಕು ಜನರಿಗೆ ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎಲ್ಲರೂ ಕರ್ನಾಟಕದವರಾಗಿದ್ದು, ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಓರ್ವ ಯುವತಿ ಹಾಗೂ ಮೂವರು ಪುರುಷರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಭುಜಂಗಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ
‘ನನ್ನ ಮಗ ಸತ್ತರೂ ಇಷ್ಟು ಬೇಜಾರು ಆಗುತ್ತಿರಲಿಲ್ಲ’; ‘ರಾಜಕುಮಾರ’ ಚಿತ್ರ ನೋಡಿ ಮಹಿಳಾ ಅಭಿಮಾನಿ ಕಣ್ಣೀರು
ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆ ಬೆಳಗಾವಿಯಲ್ಲಿ ಈ ಬಾರಿ ಸರಳವಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ
Published On - 12:31 pm, Mon, 1 November 21