
ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣ ಸಾಕಷ್ಟು ನೋವನ್ನು ಉಂಟು ಮಾಡಿದೆ. ಅಭಿಮಾನಿಗಳಿಗೆ ಈ ಸತ್ಯವನ್ನು ಈಗಲೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರ ಬಗ್ಗೆ ಯಾವುದೇ ವಿಷಯ ಬಂದರೂ ಫ್ಯಾನ್ಸ್ ಗಂಭೀರವಾಗಿ ಸ್ವೀಕರಿಸುತ್ತಾರೆ. ಸಣ್ಣ ತಪ್ಪುಗಳು ಸಾಕಷ್ಟು ಕೋಪ ಹಾಗೂ ಬೇಸರವನ್ನು ಮೂಡಿಸುತ್ತವೆ. ಇದಕ್ಕೆ ಈಗ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿ. ಮಾತಿನ ಭರದಲ್ಲಿ ರಚಿತಾ ರಾಮ್ (Rachita Ram) ಅವರು ಲಯ ತಪ್ಪಿದ್ದರೇ ಎನ್ನುವ ಪ್ರಶ್ನೆ ಮೂಡಿದೆ. ಇದು ಪುನೀತ್ ಅಭಿಮಾನಿಗಳಿಗೆ ಕೋಪ ತರಿಸಿದೆ.
ಅಕ್ಟೋಬರ್ 3 ರಚಿತಾ ರಾಮ್ ಜನ್ಮದಿನ. ಅಂದು ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಅಭಿಮಾನಿಗಳನ್ನು ನೋಡಿ ರಚಿತಾ ಭಾವುಕರಾದರು. ಇಷ್ಟೆಲ್ಲ ಪ್ರೀತಿ ತೋರಿಸುತ್ತಿರುವದಕ್ಕೆ ಅವರಿಗೆ ಖುಷಿ ಆಗಿದೆ. ಹೀಗಾಗಿ, ಮಾಧ್ಯಮಗಳ ಜೊತೆ ಮಾತನಾಡುವಾಗ ಖುಷಿಯಿಂದ ಒಂದು ವಿಚಾರ ಹಂಚಿಕೊಂಡರು.
‘ಇದನ್ನು ಹೇಳಬಾರದು, ಆದರೂ ಹೇಳಬೇಕು ಎನಿಸುತ್ತಿದೆ. ನಮ್ಮ ಜೀವ ಹೋದ್ಮೇಲೆ ಅವಾರ್ಡ್ಸ್ ಬರುತ್ತೆ, ನಮಗೆ ಒಂದು ಕಿರೀಟಿ ಇಡುತ್ತಾರೆ, ಹೆಸರು ಬರುತ್ತೆ. ನನಗೆ ಬದುಕಿರುವಾಗಲೇ ಹೆಸರು ಬರುತ್ತಿದೆ. ಈ ಬಗ್ಗೆ ಖುಷಿ ಇದೆ’ ಎಂದು ರಚಿತಾ ರಾಮ್ ಹೇಳಿದ್ದರು.
ಈ ವಿಚಾರವು ಪುನೀತ್ ಅಭಿಮಾನಿಗಳನ್ನು ಕೆರಳಿಸಿದೆ. ಇದು ಪುನೀತ್ ರಾಜ್‌ಕುಮಾರ್ ಅವರನ್ನು ಉದ್ದೇಶಿಸಿ ಹೇಳಿದ ಮಾತು ಎಂದು ಹೇಳಲಾಗುತ್ತಾ ಇದೆ. ‘ಅಪ್ಪು ಬಾಸ್ ಅವಾರ್ಡ್ ತೆಗೆದುಕೊಳ್ಳುವಾಗ ನೀವು ಹುಟ್ಟಿರಲೇ ಇಲ್ಲ. ಮಾತಿನ ಮೇಲೆ ಹಿಡಿತ ಇರಲಿ’ ಎಂದು ಫ್ಯಾನ್ಸ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಅನುಶ್ರೀ ಬಳಿಕ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಚಿತಾ ರಾಮ್
ದರ್ಶನ್ ಅವರು ಕೂಡ ಮೊದಲು ಇದೇ ರೀತಿಯ ಮಾತನ್ನು ಹೇಳಿದ್ದರು. ‘ಫ್ಯಾನ್ಸ್ ನನಗೆ ಬದುಕಿದ್ದಾಗಲೇ ಪ್ರೀತಿ ತೋರಿಸಿದ್ರು’ ಎಂಬ ಮಾತನ್ನು ದರ್ಶನ್ ಆಡಿದ್ದರು. ಆಗಲೂ ಪುನೀತ್ ಫ್ಯಾನ್ಸ್ ಸಾಕಷ್ಟು ವಿರೋಧ ಹೊರಹಾಕಿದ್ದರು.
ಪುನೀತ್ ರಾಜ್‌ಕುಮಾರ್ ಹಾಗೂ ರಚಿತಾ ರಾಮ್ ಅವರು ಒಟ್ಟಿಗೆ ನಟಿಸಿದ್ದಾರೆ. ರಚಿತಾ ರಾಮ್ ಅವರಿಗೆ ಪುನೀತ್ ಬಗ್ಗೆ ವಿಶೇಷ ಪ್ರೀತಿ ಇದೆ. ಹೀಗಾಗಿ, ಅವರು ಈ ರೀತಿಯಲ್ಲಿ ಹೇಳಿದ್ದು ಪುನೀತ್ ಉದ್ದೇಶಿಸಿ ಅಲ್ಲದೇ ಇರಬಹುದು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು ಎಂಬ ಮಾತು ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Mon, 6 October 25