ಕನ್ನಡಾಂಬೆ ಮಡಿಲಲ್ಲಿ, ಅಪ್ಪಾಜಿ ತೋಳಲ್ಲಿ ಪುನೀತ್​; ಮನ ಕಲಕುತ್ತಿವೆ ಅಪ್ಪು​ ರೇಖಾಚಿತ್ರಗಳು

Puneeth Rajkumar: ಹರ್ಷ ಕಾವೇರಿಪುರ ಅವರು ರಚಿಸಿರುವ ಒಂದು ಕಲಾಕೃತಿ ಹೆಚ್ಚು ಗಮನ ಸೆಳೆಯುತ್ತಿದೆ. ಕನ್ನಡ ತಾಯಿ ಭುವನೇಶ್ವರಿಯ ಮಡಿಲಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಮಗುವಾಗಿ ಆಟವಾಡುತ್ತಿರುವ ಕಲ್ಪನೆ ಇದರಲ್ಲಿದೆ.

ಕನ್ನಡಾಂಬೆ ಮಡಿಲಲ್ಲಿ, ಅಪ್ಪಾಜಿ ತೋಳಲ್ಲಿ ಪುನೀತ್​; ಮನ ಕಲಕುತ್ತಿವೆ ಅಪ್ಪು​ ರೇಖಾಚಿತ್ರಗಳು
ಮನ ಕಲಕುತ್ತಿವೆ ಅಪ್ಪು​ ರೇಖಾಚಿತ್ರಗಳು
Edited By:

Updated on: Nov 01, 2021 | 12:10 PM

ಪುನೀತ್​ ರಾಜ್​ಕುಮಾರ್​ ಅವರ ಮೇಲೆ ಅಭಿಮಾನಿಗಳು ಇಟ್ಟಿದ್ದ ಪ್ರೀತಿ ಅಪಾರ. ಇಂದು ಅಪ್ಪು ನಮ್ಮೊಂದಿಗೆ ಇಲ್ಲ ಎಂಬುದೊಂದು ಕಹಿ ಸತ್ಯ. ಅದನ್ನು ಅರಗಿಸಿಕೊಂಡು ಮುಂದೆ ಸಾಗಬೇಕಾದ ಪರಿಸ್ಥಿತಿ ಬಂದಿದೆ. ಪುನೀತ್​ ನಿಧನದಿಂದ ನೊಂದಿರುವ ಅಭಿಮಾನಿಗಳು ಪುನೀತ್​ಗೆ ನಾನಾ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಅವರ ರೇಖಾಚಿತ್ರಗಳನ್ನು ಬಿಡಿಸಲಾಗುತ್ತಿದೆ. ಹಲವು ಬಗೆಯಲ್ಲಿ ಅಪ್ಪು ನೆನಪು ಕಾಡುತ್ತಿದೆ. ಅದರಲ್ಲೂ ಕೆಲವು ಕಾರ್ಟೂನ್​ ಮತ್ತು ರೇಖಾಚಿತ್ರಗಳು ಅಭಿಮಾನಿಗಳ ಮನ ಕಲಕುವಂತಿವೆ. ಅವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಇಂದು (ನ.1) ಕನ್ನಡ ರಾಜ್ಯೋತ್ಸವ. ಪುನೀತ್​ ರಾಜ್​ಕುಮಾರ್​ ಇದ್ದಿದ್ದರೆ ಅವರು ಕೂಡ ಭಾಗಿಯಾಗಿ ಈ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೋ ಅಥವಾ ನೆಚ್ಚಿನ ನಟ ನಮ್ಮೊಂದಿಗಿಲ್ಲ ಎಂದು ಕೊರಗಬೇಕೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಹರ್ಷ ಕಾವೇರಿಪುರ ಅವರು ರಚಿಸಿರುವ ಒಂದು ಕಲಾಕೃತಿ ಹೆಚ್ಚು ಗಮನ ಸೆಳೆಯುತ್ತಿದೆ. ಕನ್ನಡ ತಾಯಿ ಭುವನೇಶ್ವರಿಯ ಮಡಿಲಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಮಗುವಾಗಿ ಆಟವಾಡುತ್ತಿರುವ ಕಲ್ಪನೆ ಇದರಲ್ಲಿದೆ. ಕೈಯಲ್ಲಿ ಕನ್ನಡದ ಭಾವುಟ ಹಿಡಿದು ಕಿಲಕಿಲ ನಗುತ್ತಿರುವ ಅವರನ್ನು ಕನ್ನಡಾಂಬೆ ಎತ್ತಿಕೊಂಡಿದ್ದಾಳೆ.

ಅದೇ ರೀತಿ, ಪುನೀತ್​ ನಿಧನರಾದಾಗ ಸತೀಶ್​ ಆಚಾರ್ಯ ಅವರು ಬರೆದ ಕಾರ್ಟೂನ್​ ಕೂಡ ಮನ ಕಲಕುವಂತಿತ್ತು. ಸ್ವರ್ಗದಲ್ಲಿ ಡಾ. ರಾಜ್​ಕುಮಾರ್​ ಅವರು ‘ಕಂದಾ ಯಾಕಿಷ್ಟು ಆತುರ’ ಎಂದು ಪುನೀತ್​ಗೆ ಪ್ರಶ್ನೆ ಮಾಡುತ್ತ ಅಪ್ಪಿಕೊಳ್ಳಲು ಮುಂದಾಗಿರುವ ಕಲ್ಪನೆ ಆ ಕಾರ್ಟೂನ್​ನಲ್ಲಿದೆ. ಇದು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಈ ಕಾರ್ಟೂನ್​ ನೋಡಿದ ತಮಿಳು ನಟ ಆರ್ಯ ಅವರು ಸತತ ಒಂದು ಗಂಟೆಗಳ ಕಾಲ ಕಣ್ಣೀರು ಹಾಕಿದ್ದಾರೆ.

ಹರಿಹರದ ಕಲಾವಿದ ಜಯಕುಮಾರ್ ಎಂಬುವವರು ಬಾಯಿಯಿಂದ ಪುನೀತ್ ಚಿತ್ರ ಬಿಡಿಸಿ ನಮನ ಸಲ್ಲಿಸಿದ್ದಾರೆ. ಬಾಯಿಯಲ್ಲಿ ಕುಂಚ ಹಿಡಿದು ಕಲಾವಿದ ಪುನೀತ್ ಚಿತ್ರ ಬಿಡಿಸಿದ್ದಾರೆ. ನೂರಾರು ಅಭಿಮಾನಿಗಳು ಪುನೀತ್​ ಚಿತ್ರದ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಮರಳು ಮತ್ತು ರಂಗೋಲಿಗಳಿಂದ ಅಪ್ಪು ರೇಖಾಚಿತ್ರವನ್ನು ಬಿಡಿಸಲಾಗುತ್ತಿದೆ. ಹೀಗೆ ನೂರಾರು ಬಗೆಯಲ್ಲಿ ಜನರು ಅಭಿಮಾನ ಮೆರೆಯುತ್ತಿದ್ದಾರೆ.

ಇದನ್ನೂ ಓದಿ:

Puneeth Rajkumar: ‘ಪುನೀತ್​ ಅತಿಯಾಗಿ ಜಿಮ್​ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ

Puneeth Rajkumar: ಅಶ್ಲೀಲ ಪದಗಳಿಂದ ಪುನೀತ್​ಗೆ ಅವಮಾನ; ಜನರಿಗೆ ಮನುಷ್ಯತ್ವ ಇಲ್ವಾ? ಸುದೀಪ್​ ಪುತ್ರಿ ಸಾನ್ವಿ ಗರಂ