ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಇದರಿಂದ ಕನ್ನಡ ಚಿತ್ರರಂಗ, ಕನ್ನಡ ನಾಡು ಅಪಾರ ನಷ್ಟಕ್ಕೊಳಗಾಗಿದ್ದು, ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ತಂದೆಯ ಹಾದಿಯಲ್ಲೇ ಸಾಗಿರುವ ಪುನೀತ್, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ನಿಧನಕ್ಕೆ ನಾಡು ಅಪಾರ ಶೋಕದಲ್ಲಿ ಮುಳುಗಿದ್ದು, ಸಂತಾಪ ಸೂಚಿಸುತ್ತಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಭಿಮಾನಿಗಳು ಶಾಂತರೀತಿಯಿಂದ ಪುನೀತ್ ಅವರನ್ನು ಕಳುಹಿಸಿಕೊಡಬೇಕು ಎಂದು ರಾಘವೇಂದ್ರ ರಾಜಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ವಿನಂತಿ ಮಾಡಿದ್ದಾರೆ.
ನಟ ಪುನೀತ್ ನಿಧನದ ಹಿನ್ನಲೆಯಲ್ಲಿ ಕೆಲವು ಖಾಸಗಿ ಶಾಲೆಗಳಿಂದ ನಾಳೆ ಒಂದು ದಿನದ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ಕರ್ನಾಟಕದಿಂದ ಘೋಷಿಸಲಾಗಿದೆ. ಬೆಂಗಳೂರು ನಗರ ವಿವಿಯ MBA ಅಂತಿಮ ವರ್ಷದ ವಿದ್ಯಾರ್ಥಿಗಳ ಕೊನೆ ಪರೀಕ್ಷೆ ಮುಂದೂಡಲಾಗಿದೆ. 30 ಕೇಂದ್ರಗಳಿಗೆ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ನಟ ಪುನೀತ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ MBA ಪರೀಕ್ಷೆ ಮುಂದೂಡಲಾಗಿದ್ದು, ಆ ಪರೀಕ್ಷೆ ಮಂಗಳವಾರ ನಡೆಯಲಿದೆ. ವಿವಿ, ಕಾಲೇಜುಗಳಿಗೆ ರಜೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಇನ್ನು ಯಾವುದೇ ಮಾಹಿತಿ ಬಂದಿಲ್ಲ, ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಟಿವಿ9ಗೆ ಬೆಂಗಳೂರು ಸಿಟಿ ವಿವಿ ಕುಲಪತಿ ಲಿಂಗರಾಜ ಗಾಂಧಿ ಹೇಳಿಕೆ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ಅಂತ್ಯಸಂಸ್ಕಾರ ಕಂಠೀರವ ಸ್ಟುಡಿಯೊದಲ್ಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದ ನಂತರ ಅಭಿಮಾನಿಗಳು ತಂಡೋಪತಂಡವಾಗಿ ಕಂಠೀರವ ಸ್ಟುಡಿಯೊಗೆ ಬರುತ್ತಿದ್ದಾರೆ. ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇಲ್ಲ ಎಂದು ವಿವರಿಸುತ್ತಿರುವ ಪೊಲೀಸರು ಕಂಠೀರವ ಕ್ರೀಡಾಂಗಣಕ್ಕೆ ತೆರಳುವಂತೆ ಸೂಚಿಸುತ್ತಿದ್ದಾರೆ. ಗುಂಪಾಗಿ ನಿಂತವರನ್ನು ಚೆದುರಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಪಾರ್ಥಿವ ಶರೀರ ದರ್ಶನಕ್ಕೆ ಇಡೀ ರಾತ್ರಿ ಅವಕಾಶ ನೀಡಲಾಗಿದೆ. ಅಭಿಮಾನಿಗಳು ಶಾಂತಿ ಕಾಪಾಡಿ, ಸಹಕರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿನಂತಿಸಿದ್ದಾರೆ.
ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಅಣ್ಣ ಶಿವರಾಜ್ ಕುಮಾರ್ ಕಂಠೀರವ ಕ್ರೀಡಾಂಗಣಕ್ಕೆ ಬಂದು ಕುಟುಂಬದ ಹಿರಿಯರು ಮತ್ತು ಆಪ್ತರೊಂದಿಗೆ ಚರ್ಚಿಸಿದರು. ಕಂಠೀರವ ಸ್ಟುಡಿಯೊದಲ್ಲಿ ಅಂತ್ಯಕ್ರಿಯೆ ಸ್ಥಳ ಪರಿಶೀಲಿಸಿದ ಶಿವರಾಜ್ ಕುಮಾರ್ ಹಿಂದಿರುಗಿದರು.
ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಬೆಂಗಳೂರಿನ ನೃಪತುಂಗ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅ.30ರಂದು ನಡೆಯಬೇಕಿದ್ದ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪರೀಕ್ಷೆಯ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ವಿವಿ ಮೌಲ್ಯಮಾಪನ ಕುಲಸಚಿವ ರಾಮಕೃಷ್ಣ ರೆಡ್ಡಿ ಮಾಹಿತಿ ನೀಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಅವರ ಮಗಳು ಬೆಂಗಳೂರಿನ ಕಡೆಗೆ ಹೊರಟಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪವರ್ ಸ್ಟಾರ್ ಪುತ್ರಿ ಆಗಮಿಸುತ್ತಿದ್ದಾರೆ. ನಾಳೆ ಸಾಯಂಕಾಲ 4 ಗಂಟೆ ವೇಳೆಗೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಒಂದು ವೇಳೆ ಪುನೀತ್ ಅವರ ಪುತ್ರಿ 4 ಗಂಟೆಗೆ ಬಂದ್ರೆ ನಾಳೆಯೇ ಅಂತ್ಯಕ್ರಿಯೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ತಡೆಯುವ ಪ್ರಯತ್ನದಲ್ಲಿದ್ದ ಪೊಲೀಸ್ ಪೇದೆ ಕಾಲುಮುರಿದಿದೆ. ಅಭಿಮಾನಿಗಳನ್ನು ನಿರ್ವಹಿಸುವ ಸಮಯದಲ್ಲಿ ಮಡಿವಾಳ ಠಾಣಾ ಗಣೇಶ್ ನಾಯಕ್ ಅವರ ಕಾಲು ಮುರಿದಿದೆ. ಮಲ್ಯ ಸಿಗ್ನಲ್ ಗೇಟ್ ಬಳಿ ಬಂದೋಬಸ್ತ್ಗೆ ಅವರನ್ನು ನಿಯೋಜಿಸಲಾಗಿತ್ತು. ಏಕಾಏಕಿ ಅಭಿಮಾನಿಗಳು ಸ್ಟೇಡಿಯಂ ಒಳಗೆ ನುಗ್ಗಿದಾಗ ಈ ವೇಳೆ ಅಭಿಮಾನಿಗಳನ್ನು ತಡೆಯಲು ಹೋದಾಗ ಬಿದ್ದು ಕಾಲು ಮುರಿದಿದೆ. ತಕ್ಷಣವೇ ಅವರನ್ನು ಮಲ್ಯ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.
ಮುಂಬೈ: ಮಹಾರಾಷ್ಟ್ರದ ರಾಯಗಡ್ ಜಿಲ್ಲೆ ಅಲಿಭಾಗ್‌ನಲ್ಲಿ ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಭಾವಚಿತ್ರದ ಎದುರು ಅಂತಿಮ ನಮನ ಸಲ್ಲಿಸಿದರು. ಪುನೀತ್ ಅವರ ಬೃಹತ್ ಫ್ಲೆಕ್ಸ್ ಮಾಡಿಸಿ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿ, ಅಗಲಿದ ನಟನ ಆತ್ಮಕ್ಕೆ ಶಾಂತಿ ಕೋರಿದರು.
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ಭಾನುವಾರ ಕಂಠೀರವ ಸ್ಟುಡಿಯೊದಲ್ಲಿ ನಡೆಯಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಪುನೀತ್ ಪುತ್ರಿ ಅಮೆರಿಕದಿಂದ ಆಗಮಿಸಬೇಕಿರುವ ಹಿನ್ನೆಲೆಯಲ್ಲಿ ಭಾನುವಾರವೇ ಅಂತ್ಯಕ್ರಿಯೆ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.
ಅಪ್ಪ ಡಾ.ರಾಜ್ಕುಮಾರ್, ಅಮ್ಮ ಪಾರ್ವತಮ್ಮ ರಾಜ್ಕುಮಾರ್ ಸಮಾಧಿ ಪಕ್ಕದಲ್ಲಿಯೇ ನಟ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಟಿವಿ9ಗೆ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕಂಠೀರವ ಸ್ಟೇಡಿಯಂಗೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಟ ಪುನೀತ್ ಪಾರ್ಥಿವ ಶರೀರಕ್ಕೆ ಸರ್ಕಾರದ ವತಿಯಿಂದ ಪುಷ್ಪ ನಮನ ಸಲ್ಲಿಸಿದರು. ಸಚಿವರಾದ ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಡಾ.ಅಶ್ವತ್ಥ ನಾರಾಯಣ, ಎಸ್.ಟಿ.ಸೋಮಶೇಖರ್, ಆರ್.ಅಶೋಕ್, ಬಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್, ವಿ.ಸುನಿಲ್ ಕುಮಾರ್, ನಾರಾಯಣಗೌಡ ಸೇರಿದಂತೆ ಹಲವರು ಸಹ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮೈಸೂರು: ನಟ ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ಕಲಾವಿದರು ಗೋಡೆಯ ಮೇಲೆ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಚಿತ್ರ ಬರೆದು ಸಂತಾಪ ಸೂಚಿಸಿದರು. ಚಿತ್ರದ ಜೊತೆಗೆ ನೇತ್ರದಾನ ಮಹಾದಾನ ಎಂದು ಬರಹವನ್ನೂ ಮೂಡಿಸಲಾಗಿದೆ. ಪುನೀತ್ ನಿಧನಕ್ಕೆ ಕರ್ನಾಟಕ ಕಣ್ಣೀರಿಡುತ್ತಿದೆ ಎಂದು ಸೂಚಿಸುವ ಚಿತ್ರವನ್ನು ಕಲಾವಿದ ರಾಹುಲ್ ಬಿಡಿಸಿದ್ದಾರೆ. ಚಿತ್ರದ ಎದುರು ಮೆಣದ ಬತ್ತಿ ಹೊತ್ತಿಸಿ ಅಭಿಮಾನಿಗಳು ಸಂತಾಪ ಸೂಚಿಸಿದರು.
ಪುನೀತ್ ರಾಜ್ಕುಮಾರ್ ಪಾರ್ಥಿವ ಶರೀರ ಕಂಠೀರವ ಕ್ರೀಡಾಂಗಣ ತಲುಪಿದೆ. ಌಂಬುಲೆನ್ಸ್ ಮೂಲಕ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸದಿಂದ ಸ್ಟೇಡಿಯಂಗೆ ಸ್ಥಳಾಂತರಿಸಲಾಯಿತು. ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಸರ್ಕಾರ ಹೇಳಿದೆ.
ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣ ಬಳಿ ಸಾವಿರಾರು ಜನರು ಪುನೀತ್ ರಾಜ್ಕುಮಾರ್ ಅಂತಿಮ ದರ್ಶನಕ್ಕಾಗಿ ಬಂದಿದ್ದಾರೆ. ಸೂಚಿಸಿರುವ ಮಾರ್ಗ ಹೊರತುಪಡಿಸಿಯೂ ಕ್ರೀಡಾಂಗಣಕ್ಕೆ ಅಭಿಮಾನಿಗಳು ಬರುತ್ತಿರುವುದರಿಂದ ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಚಾಮರಾಜನಗರ: ಪುನೀತ್ ರಾಜ್ಕುಮಾರ್ ಸಾವಿನ ಸುದ್ದಿ ಕೇಳಿ ಮರೂರು ಗ್ರಾಮದ ಅಭಿಮಾನಿ ಮುನಿಯಪ್ಪ (30) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುನೀತ್ ನಿಧನದ ಸುದ್ದಿ ಕೇಳಿದ ತಕ್ಷಣ ಕುಸಿದು ಬಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಸಾವಿಗೆ ವಿನೋದ್ ರಾಜ್ ಕಣ್ಣೀರು ಮಿಡಿದಿದ್ದಾರೆ. ಪುನೀತ್ ಸಾವು ನಮಗೆಲ್ಲಾ ಅಪಾರ ದುಃಖ ತಂದೊಡ್ಡಿದೆ. ಹೆಜ್ಜೆ ಇಡಲು ಆಗದ ನನ್ನ ತಾಯಿ ಪುನೀತ್ ಸಾವಿನ ಸುದ್ದಿ ಕೇಳಿ ಎದ್ದು ನಿಂತುಬಿಟ್ಟರು. ಅಯ್ಯೋ ಕಂದ ಹೋಗಿ ಆಗೋಯ್ತಾ ಎಂದು ಹೇಳಿದರು. ನಾವು ಯಾರಿಗೆ ಏನು ಮಾಡಿದ್ವಿ, ಯಾಕೆ ಹೀಗಾಗುತ್ತಿದೆ? ದೇವರು ನಮ್ಮನ್ನು ಕೂಡ ಕರೆದುಕೊಂಡು ಬಿಡಬೇಕು. ನನಗೆ ಹೃದಯ ಒಡೆದುಹೋಯ್ತು ಎಂದ ವಿನೋದ್ ರಾಜ್ ಕಣ್ಣೀರು ಮಿಡಿದರು.
ಪುನೀತ್ ಪಾರ್ಥಿವ ಶರೀರ ಇರಿಸುವ ವೇದಿಕೆಗೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಜನಸಂದಣಿ ವೇಳೆ ನೂಕುನುಗ್ಗಲು ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ. ಪಾರ್ಥಿವ ಶರೀರ ಇರಿಸುವ ವೇದಿಕೆಗೆ ಹೂವಿನ ಅಲಂಕಾರ ಮಾಡಲಾಗಿದೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದು, ಮಲ್ಯ ಆಸ್ಪತ್ರೆ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ಸ್ಟೇಡಿಯಂ ಒಳಗೆ ಬಿಡುವಂತೆ ಅಭಿಮಾನಿಗಳ ಒತ್ತಾಯಿಸಿದ್ದಾರೆ.
ಪುನೀತ್ ನಿಧನಕ್ಕೆ ಆಮೆಜಾನ್ ಪ್ರೈಮ್ ಒಟಿಟಿ ಸಂತಾಪ ಸೂಚಿಸಿದೆ. ಅಪ್ಪು ಅಭಿನಯದ ‘ಯುವರತ್ನ’ ಆಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಒಂದು ವಾರದ ನಂತರ ತೆರೆಕಂಡಿತ್ತು.
we will miss you, puneeth rajkumar ??
we will always be immensely grateful of your contribution to Indian Cinema.
deepest condolences to the family and fans.
always in our heart, power star PRK ? pic.twitter.com/kQYhg64e8x— amazon prime video IN (@PrimeVideoIN) October 29, 2021
ಪುನೀತ್ ತಮ್ಮ ಈ ಬಾರಿಯ 46ನೇ ಹುಟ್ಟುಹಬ್ಬವನ್ನು ಮೂಡಿಗೆರೆಯ ನಿಡುವಾಳೆಯ ರಾಮೇಶ್ವರ ದೇವಸ್ಥಾನದಲ್ಲಿ ಪತ್ನಿ ಅಶ್ವಿನಿಯವರೊಂದಿಗೆ ಆಚರಿಸಿದ್ದರು. ಈ ಕುರಿತು ಊರಿನ ಅಭಿಮಾನಿ ಸಂತೋಷ್ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘‘ಈ ಬಾರಿ ಹುಟ್ಟುಹಬ್ಬವನ್ನು ನಮ್ಮ ಊರಿನ ರಾಮೇಶ್ವರ ದೇವಸ್ಥಾನದಲ್ಲಿ ಆಚರಿಸಿದರು. ಈ ವೇಳೆ ನನ್ನ ಮಗನನ್ನ ಎತ್ತಿ ಮುದ್ದಾಡಿದ್ರು. ಸಿನಿಮಾದವರು ಅಂದ್ರೆ ಜನಸಾಮಾನ್ಯರ ಜೊತೆ ಬೇರೆಯಲ್ಲ ಅಂದುಕೊಂಡಿದ್ದೆ. ಅದೇ ಅಪ್ಪು ಸರ್ ನಮ್ಮೆಲ್ಲರ ಜೊತೆ ಚೆನ್ನಾಗಿ ಬೆರೆತರು’’ ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯಶ್ರೀ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು ನಗರ ವಿವಿಯ MBA ಅಂತಿಮ ವರ್ಷದ ವಿದ್ಯಾರ್ಥಿಗಳ ಕೊನೆ ಪರೀಕ್ಷೆ ಮುಂದೂಡಲಾಗಿದೆ. 30 ಕೇಂದ್ರಗಳಿಗೆ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ನಟ ಪುನೀತ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ MBA ಪರೀಕ್ಷೆ ಮುಂದೂಡಲಾಗಿದ್ದು, ಆ ಪರೀಕ್ಷೆ ಮಂಗಳವಾರ ನಡೆಯಲಿದೆ.
ವಿವಿ, ಕಾಲೇಜುಗಳಿಗೆ ರಜೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಇನ್ನು ಯಾವುದೇ ಮಾಹಿತಿ ಬಂದಿಲ್ಲ, ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಟಿವಿ9ಗೆ ಬೆಂಗಳೂರು ಸಿಟಿ ವಿವಿ ಕುಲಪತಿ ಲಿಂಗರಾಜ ಗಾಂಧಿ ಹೇಳಿಕೆ ನೀಡಿದ್ದಾರೆ.
ನಟ ಪುನೀತ್ ನಿಧನಕ್ಕೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸಂತಾಪ ಸೂಚಿಸಿದ್ದು, ಪುನೀತ್ ಇಲ್ಲ ಅನ್ನುವುದಕ್ಕೆ ನಂಬಲು ಸಾಧ್ಯವಾಗುತ್ತಿಲ್ಲ. ಪುನಿತ್ ಅಗಲಿಕೆಯಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಪುನೀತ್ ಸ್ಥಾನವನ್ನ ತುಂಬಲು ಯಾರಿಂದಲು ಸಾಧ್ಯವಿಲ್ಲ ಎಂದು ಶೋಕ ವ್ಯಕ್ತಪಡಿಸಿದ್ಧಾರೆ.
ನಟ ಪುನೀತ್ ನಿಧನಕ್ಕೆ ಸಂಸದ ಡಿ.ಕೆ.ಸುರೇಶ್, ದೇಶದ ಕನ್ನಡಾಭಿಮಾನಿಗಳಿಗೆ ಆತಂಕವುಂಟು ಮಾಡಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ನಟ ಪುನೀತ್ ನಿಧನಕ್ಕೆ ಯದುವೀರ್ ಒಡೆಯರ್ ಸಂತಾಪ ಸೂಚಿಸಿದ್ದು, ಪುನೀತ್ ನಮ್ಮನ್ನೆಲ್ಲ ಅಗಲಿದ್ದು ಅತೀವ ದುಃಖವನ್ನ ತಂದಿದೆ. ಚಾಮುಂಡೇಶ್ವರಿ ದೇವಿ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಕುಟುಂಬಕ್ಕೆ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಅವರು ಹೇಳಿದ್ದಾರೆ.
ಅಪ್ಪು ನಿಧನದ ಸುದ್ದಿ ಕೇಳಿ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಬಳಿಯ ಭಾಗಮನೆ ಗ್ರಾಮದಲ್ಲಿ ನೀರವಮೌನ ಆವರಿಸಿದೆ. ಭಾಗಮನೆ ನಟ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿಯವರ ಹುಟ್ಟೂರು. ಭಾಗಮನೆ ಗ್ರಾಮಕ್ಕೆ ಆಗಾಗ ಪುನೀತ್ ಭೇಟಿ ನೀಡುತ್ತಿದ್ದರು. ಪುನೀತ್ ನಮ್ಮಿಂದ ದೂರವಾಗಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಹೋದಾಗ ಭೇಟಿಯಾಗಿದ್ದೆ. ಸದ್ಯದಲ್ಲೇ ಭಾಗಮನೆ ಗ್ರಾಮಕ್ಕೆ ಬರುವುದಾಗಿ ಹೇಳಿದ್ದರು ಎಂದು ಟಿವಿ9ಗೆ ಅಶ್ವಿನಿಯವರ ಚಿಕ್ಕಪ್ಪನ ಮಗ ಭರತ್ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಪುನೀತ್ ನಿಧನಕ್ಕೆ ಪೇಜಾವರ ಮಠದ ಶ್ರೀ ಸಂತಾಪ ಸೂಚಿಸಿದ್ದು, ಅವರ ಹಠಾತ್ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಪುನೀತ್ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದಿಂದ ದೊಡ್ಡಗಾಜನೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ತಮಿಳುನಾಡಿನ ತಾಳವಾಡಿ ತಾಲೂಕಿನ ದೊಡ್ಡಗಾಜನೂರು, ಡಾ.ರಾಜ್ಕುಮಾರ್ರವರ ಹುಟ್ಟೂರು. ಇತ್ತೀಚೆಗೆ ದೊಡ್ಡಆಲದ ಮರದ ಬಳಿ ಜಾಹೀರಾತಿನ ಶೂಟಿಂಗ್ನಲ್ಲಿ ಪುನೀತ್ ಭಾಗವಹಿಸಿದ್ದರು. ದೊಡ್ಡಗಾಜನೂರಿನಲ್ಲಿ ಚಿತ್ರಮಂದಿರ ಕಟ್ಟಬೇಕೆಂಬ ಕನಸಿತ್ತು. ಕಳೆದ ಹದಿನೈದು ವರ್ಷಗಳಿಂದ ಚಿತ್ರ ಮಂದಿರ ನಿರ್ಮಾಣ ಅರ್ಧದಲ್ಲಿಯೇ ನಿಂತಿದೆ.
ನಟ ಪುನೀತ್ ನಿಧನದ ಹಿನ್ನಲೆಯಲ್ಲಿ ಬೀದಿ ಬದಿ ವ್ಯಾಪರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ತೆರಳುತ್ತಿದ್ದಾರೆ.
ಕಂಠೀರವ ಕ್ರೀಡಾಂಗಣದ ಸುತ್ತ ಪುನೀತ್ ಅಭಿಮಾನಿಗಳು ಅಂತಿಮ ದರ್ಶನಕ್ಕೆ ಕಾದು ಕುಳಿತಿದ್ದಾರೆ.
ನಟ ಪುನೀತ್ ನಿಧನಕ್ಕೆ ಮೋಹನ್ ಲಾಲ್ ಕಂಬನಿಗರೆದಿದ್ದಾರೆ. ಟ್ವೀಟ್ ಮೂಲಕ ಅವರು ಸಂತಾಪ ಸೂಚಿಸಿದ್ದಾರೆ. ಮೈತ್ರಿ ಸಿನಿಮಾದಲ್ಲಿ ಪುನೀತ್ ಜತೆ ಮೋಹನ್ ಲಾಲ್ ನಟಿಸಿದ್ದರು.
ಸಹೋದರನ ಸಾವು ತುಂಬಾ ನೋವುಂಟು ಮಾಡಿದೆ: ಕಮಲ್ ಹಾಸನ್
ನಟ ಪುನೀತ್ ನಿಧನಕ್ಕೆ ಕಮಲ್ ಹಾಸನ್ ಸಂತಾಪ ಸೂಚಿಸಿದ್ದು, ಸಹೋದರನ ಸಾವು ತುಂಬಾ ನೋವುಂಟು ಮಾಡಿದೆ ಎಂದು ಟ್ವೀಟ್ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ.
ಪುನೀತ್ ನಿವಾಸಕ್ಕೆ ನಟ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಆಗಮಿಸಿ, ಅಂತಿಮ ದರ್ಶನ ಪಡೆದಿದ್ದಾರೆ.
ಪುನೀತ್ ನಿಧನಕ್ಕೆ ಶಾಸಕಿ, ನಟಿ ರೋಜಾ ಸಂತಾಪ:
ಮೌರ್ಯ ಚಿತ್ರದಲ್ಲಿ ಪುನೀತ್ ಜೊತೆ ನಟಿಸಿದ್ದ ನಟಿ, ಶಾಸಕಿ ರೋಜಾ ಟ್ವೀಟ್ ಮೂಲಕ ಸಂಥಾಪ ಸೂಚಿಸಿದ್ದಾರೆ.
ಶಾಲೆಗೆ ರಜೆ ನೀಡುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಸಿಎಂ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.
ಖಾಸಗಿ ಶಾಲೆಗಳ ಒಕ್ಕೂಟವು ಶಾಲೆಗಳಿಗೆ ರಜೆಯನ್ನು ಘೋಷಿಸಿದೆ.
ನಟ ಪುನೀತ್ ನಿಧನದಿಂದ ನಮಗೆ ತುಂಬಾ ದುಃಖ ಆಗಿದೆ. ಜಿಮ್ ಮುಗಿದ ಬಳಿಕ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ನಟ ಪುನೀತ್ ನಮ್ಮ ಹಾಸ್ಪಿಟಲ್ಗೆ ಬಂದಿದ್ದಾರೆ. ತಕ್ಷಣ ಎಮರ್ಜೆನ್ಸಿ ಟೀಂ ಪರಿಶೀಲನೆ ಮಾಡಲಾಯಿತು. ಆದರೆ ಎಮರ್ಜೆನ್ಸಿ ಟೀಮ್ನ ಚಿಕಿತ್ಸೆ ವೇಳೆ ಸ್ಪಂದಿಸಲಿಲ್ಲ. ಪುನೀತ್ ಹಾರ್ಟ್ಲೈನ್ಸ್ ಕಂಪ್ಲೀಟ್ ಫ್ಲಾಟ್ ಆಗಿತ್ತು. 3 ಗಂಟೆಗಳ ಕಾಲ ನಟ ಪುನೀತ್‌ಗೆ ಚಿಕಿತ್ಸೆ ನೀಡಲಾಯಿತು. ಆದರೂ ನಾವು ಅವರನ್ನ ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ ಎಂದು ವಿಕ್ರಂ ಆಸ್ಪತ್ರೆ ವೈದ್ಯ ಡಾ.ರಂಗನಾಥನ್ ನಾಯಕ್ ಹೇಳಿಕೆ ನೀಡಿದ್ದಾರೆ.
ಡಾ.ರಾಜ್ ಕುಟುಂಬಕ್ಕೆ ಬಹಳ ಹತ್ತಿರವಾಗಿರುವ ನವಯುಗ ಹೋಟೆಲ್ ಮುಂಭಾಗ ಪುನೀತ್ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಗಿದೆ. ಈ ಹೋಟೆಲ್ನ ಬಿರಿಯಾನಿ, ಕಬಾಬ್ ಅಂದ್ರೆ ಅಪ್ಪುಗೆ ಪ್ರಿಯವಾಗಿತ್ತು. ನಿನ್ನೆಯೂ ಪುನೀತ್ ಮನೆಗೆ ಊಟ ಕಳುಹಿಸಲಾಗಿತ್ತು. ದಶಕಗಳಿಂದ ಡಾ.ರಾಜ್ ಫ್ಯಾಮಿಲಿಗೆ ಫೇವರಿಟ್ ಹೋಟೆಲ್ ಆಗಿತ್ತು. ಅಪ್ಪು ಆರೋಗ್ಯ ಸ್ಥಿತಿ ಗಂಭೀರವೆಂದು ಗೊತ್ತಾದ ತಕ್ಷಣ ಹೋಟೆಲ್ ಬಂದ್ ಮಾಡಲಾಗಿದೆ. ಇನ್ನು ಮೂರು ದಿನಗಳ ಕಾಲ ಹೋಟೆಲ್ ಬಂದ್ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಪುನೀತ್ ರಾಜಕುಮಾರ್ ಅಂತ್ಯಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲೇ ಮಾಡಬೇಕು ಎಂದು ಕೆಲ ನಟರು ಚರ್ಚೆ ನಡೆಸಲಾಗಿದೆ.
ನಟ ಪುನೀತ್ ಹೋದ ಮೇಲೆ ಇನ್ನೇನೂ ಉಳಿದಿಲ್ಲ. ಪ್ರತಿ ಕನ್ನಡಿಗ ರಾಜಕುಮಾರನನ್ನು ಕಳೆದುಕೊಂಡಿದ್ದಾರೆ. ಜೀವನದಲ್ಲಿ ಎಲ್ಲಾ ಮುಗಿದಿದೆ ಎಂದು ಅನಿಸುತ್ತಿದೆ. ರಾಜ್‌ಕುಮಾರ್‌ರನ್ನು ಮನಸ್ಸಲ್ಲಿಟ್ಟುಕೊಂಡು ಬೊಂಬೆ ಹೇಳುತೈತೆ ಹಾಡನ್ನು ಹಾಡುತ್ತಿದ್ದೆ. ಇನ್ಮುಂದೆ ಪುನೀತ್‌ರನ್ನು ನೆನಸಿಕೊಂಡು ಹಾಡಬೇಕಾಗಿದೆ. ಇದನ್ನು ಅರಗಿಸಿಕೊಳ್ಳುವುದಕ್ಕೆ ನನ್ನಿಂದ ಆಗುತ್ತಿಲ್ಲ. ಅಣ್ಣಾವ್ರು, ಅಪ್ಪು ಸರ್ ವ್ಯಕ್ತಿಯ ರೂಪದಲ್ಲಿ ಹೋಗಿರಬಹುದು. ಆದರೆ ಶಕ್ತಿಯ ರೂಪದಲ್ಲಿ ನಮ್ಮ ಜೊತೆಯೇ ಇರುತ್ತಾರೆ ಎಂದು ಟಿವಿ9ಗೆ ಗಾಯಕ ವಿಜಯ್ ಪ್ರಕಾಶ್ ಹೇಳಿಕೆ ನೀಡಿದ್ಧಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ. ನಟ ಪುನೀತ್ ಅಭಿಮಾನಿಗಳು ಶಾಂತ ರೀತಿಯಲ್ಲಿ ಸಹಕರಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.
ನಿನ್ನೆ ರಾತ್ರಿ ಬರ್ತ್‌ಡೇ ಪಾರ್ಟಿಗೆ ಪುನೀತ್ ಬಂದಿದ್ದರು. ಪುನೀತ್ ರಾಜ್‌ಕುಮಾರ್‌ಗೆ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ಜತೆ ಪುನೀತ್ ರಾಜ್‌ಕುಮಾರ್ ಆರಾಮಾಗಿದ್ದರು ಎಂದು ಟಿವಿ9ಗೆ ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿಕೆ ನೀಡಿದ್ದಾರೆ.
ಪುನೀತ್ ಪ್ರತಿಭಾನ್ವಿತ ನಟ, ಅದ್ಭುತ ವ್ಯಕ್ತಿತ್ವ ಹೊಂದಿದ್ದರು. ವಿಧಿಯ ಕ್ರೂರತೆ ಪುನೀತ್‌ರನ್ನು ನಮ್ಮಿಂದ ದೂರ ಮಾಡಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ನಟ ಪುನೀತ್ ನಿಧನಕ್ಕೆ ಟ್ವೀಟ್ ಮೂಲಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ಧಾರೆ.
ಪುನೀತ್ ನಿಧನಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರಶ್ರೀ ಸಂತಾಪ ಸೂಚಿಸಿದ್ದಾರೆ. ಗಾಯಕ ಅರ್ಜುನ್ ಇಟಗಿ ಕಂಬನಿ ಮಿಡಿದಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದಿನಿಂದ 3 ದಿನ ಮದ್ಯಮಾರಾಟ ನಿಷೇಧ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಬೆಂ.ನಗರ ಡಿಸಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ.
2 ತಿಂಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ಪುನೀತ್ ಮಗಳು ದ್ರಿತಿ ಅಮೇರಿಕಾದಿಂದ ಆಗಮಿಸುತ್ತಿದ್ದಾರೆ. ನಾಳೆ ಇಡೀ ದಿನ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಅಂತಿಮ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯ ಸಂಸ್ಕಾರ ನಡೆಯಲಿದೆ.
ಪೋತೀಸ್ ಮಳಿಗೆಯನ್ನು ಕ್ಲೋಸ್ ಮಾಡಿ ಪುನೀತ್ ರಾಜಕುಮಾರ್ ಅವರಿಗೆ ಸಂತಾಪ ಸೂಚಿಸಲಾಗಿದೆ. ಕಳೆದ 3 ವರ್ಷಗಳಿಂದ ಪುನೀತ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಒಂದು ದಿನದ ಮಟ್ಟಿಗೆ ಅಂಗಡಿ ಕ್ಲೋಸ್ ಮಾಡಿ ಮ್ಯಾನೇಜ್ಮೆಂಟ್ ಸಂತಾಪ ಸೂಚಿಸಿದೆ.
ನಟ ಪುನೀತ್ ನಿಧನಕ್ಕೆ ನಿರ್ದೇಶಕ ರಾಜಮೌಳಿ ಸಂತಾಪ ಸೂಚಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಬೀದರ್ನಲ್ಲಿ ಅಪ್ಪು ಅಭಿಮಾನಿಗಳು ಶ್ರದ್ಧಾಂಜಲಿ ಕೋರಿದ್ದಾರೆ. ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಕಟೌಟ್ ಹಾಕಿ, ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು ಶ್ರದ್ಧಾಂಜಲಿ ಕೋರಲಾಗಿದೆ. ಈ ವೇಳೆ ಅಪ್ಪು ಅಮರ ರಹೆ ಎಂದು ಘೋಷಣೆ ಕೂಗುವ ಮೂಲಕ ನಟನಿಗೆ ಅಂತಿಮ ನಮನ ಸಲ್ಲಿಸಲಾಗಿದೆ.
ಕೊಪ್ಪಳ ತಾಲೂಕಿನ ಬೆಟಗೇರಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಗಲಿದ ನೆಚ್ಚಿನ ನಟನಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹೃದಯಾಘಾತದಿಂದ ನಿಧನರಾಗಿರುವ ನಟ ಪುನೀತ್ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.
ಪುನೀತ್ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಎಂದು ಸಂಸದೆ, ನಟಿ ರಮ್ಯಾ ಕಂಬನಿಗರೆದಿದ್ದಾರೆ. ಟಿವಿ9ನೊಂದಿಗೆ ಮಾತನಾಡಿದ ಅವರು, ನಟ ಪುನೀತ್ ಸಾವಿನ ಸುದ್ದಿ ನಂಬಲು ಆಗುತ್ತಿಲ್ಲ. ನಾನು ಶಾಕ್‌ನಲ್ಲಿ ಇದ್ದೇನೆ. ಜೀವನ, ಮರಣ ನಮ್ಮ ಕೈಯಲ್ಲಿ ಇರುವುದಿಲ್ಲ ಎಂದು ಭಾವುಕತರಾಗಿದ್ದಾರೆ. ಅಪ್ಪು ಫಿಟ್‌ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸ್ತಿದ್ರು. ಪುನೀತ್ ಎಂದೂ ವರ್ಕೌಟ್ ಮಿಸ್ ಮಾಡ್ತಿರಲಿಲ್ಲ. ನನಗೆ ವರ್ಕೌಟ್ ಮಾಡುವಂತೆ ಹೇಳುತ್ತಿದ್ದರು ಎಂದು ಪುನೀತ್ ಅವರೊಂದಿಗಿನ ನೆನಪನ್ನು ರಮ್ಯಾ ಸ್ಮರಿಸಿಕೊಂಡಿದ್ದಾರೆ.
ಪುನೀತ್‌ರಾಜ್‌ಕುಮಾರ್ ತುಂಬಾ ಸರಳ ನಟರಾಗಿದ್ದರು. ಅಭಿಮಾನಿಗಳ ಜೊತೆ ಸ್ನೇಹಿತರಂತೆ ಇರುತ್ತಿದ್ದರು. ಹೆಗಲ ಮೇಲೆ ಕೈ ಹಾಕಿ ಮಾತನಾಡಿಸುತ್ತಿದ್ದರು. ಶೂಟಿಂಗ್ ವೇಳೆ ನಾನು ರೀಟೇಕ್ ತೆಗೆದುಕೊಳ್ಳುತ್ತಿದ್ದೆ. ಆಗ ಪುನೀತ್ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ನಮಗೆ ಪುನೀತ್ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಪುನೀತ್ ರಾಜ್‌ಕುಮಾರ್ ಮಗುವಿನಂತೆ ಇರುತ್ತಿದ್ದರು ಎಂದು ರಮ್ಯಾ ಪುನೀತ್ ಅವರನ್ನು ನೆನಪಿಸಿಕೊಂಡಿದ್ಧಾರೆ.
ನಟ ಪುನೀತ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಪುನೀತ್ ಪಾರ್ಥಿವ ಶರೀರಕ್ಕೆ ಮಲ್ಲಿಕಾರ್ಜುನ ಖರ್ಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ನಟ ಮಂಡ್ಯ ರಮೇಶ್ ಸಂತಾಪ:
ಸರಳ ಸಜ್ಜನಿಕೆಯ ಪುನೀತ್ ಅಗಲಿಕೆ ನುಂಗಲಾರದ ತುತ್ತು. ಇಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ ನೂರ್ಕಾಲ ಬದುಕಬೇಕಾಗಿತ್ತು. ಪುನೀತ್ ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದು ಮೈಸೂರಿನಲ್ಲಿ ನಟ ಮಂಡ್ಯ ರಮೇಶ್ ಸಂತಾಪ ಸೂಚಿಸಿದ್ಧಾರೆ.
ಪುನೀತ್ ಅಗಲುವಿಕೆಗೆ ಡಾ.ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ:
ಬಹುಮುಖ ವ್ಯಕ್ತಿತ್ವದ ಪುನೀತ್ ಅಗಲಿಕೆ ದುರದೃಷ್ಟಕರ ಎಂದು ಸುತ್ತೂರು ಡಾ.ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನದ ಕಾರಣ, ತವರೂರು ದೊಡ್ಡ ಗಾಜನೂರಿನಲ್ಲಿ ನೀರವ ಮೌನ ಆವರಿಸಿದೆ. ಪುನೀತ್ ರಾಜ್ ಕುಮಾರ್ ಅಗಲಿಕೆ ಸಹಿಸಿಕೊಳ್ಳಲಾಗದೆ ಅಭಿಮಾನಿಗಳು, ಸ್ನೇಹಿತರು ದುಃಖಿಸುತ್ತಿದ್ದಾರೆ.
ನಟ ಪುನೀತ್ ನಿಧನಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸಂತಾಪ ಸೂಚಿಸಿದ್ಧಾರೆ. ತಮಿಳು ನಟ ಧನುಷ್ ಕೂಡ ಕಂಬನಿ ಮಿಡಿದಿದ್ದಾರೆ.
ನಟ ಪುನೀತ್ ನಿಧನಕ್ಕೆ ಮಾಜಿ ಸಿಎಂ ಶೆಟ್ಟರ್ ಸಂತಾಪ ಸೂಚಿಸಿದ್ದು, ಪುನೀತ್ ನಿಧನದಿಂದ ನಾಡಿಗೆ ತುಂಬಲಾರದ ನಷ್ಟ ಆಗಿದೆ ಎಂದು ದುಃಖಿಸಿದ್ದಾರೆ.
ನಟ ಪುನೀತ್ರನ್ನ ನಾವು ಚೆನ್ನಾಗಿ ಕಳುಹಿಸಿಕೊಡಬೇಕು. ಎಲ್ಲರೂ ಶಾಂತಿಯನ್ನ ಕಾಪಾಡಿಕೊಳ್ಳಬೇಕು. ನೀವು ಸಹಕಾರ ನೀಡಬೇಕೆಂದರೆ ಎಲ್ಲರೂ ನನ್ನ ಜತೆಗಿರಬೇಕು. ಶಾಂತಿ ಕಾಪಾಡಬೇಕು. ಶಾಂತಿ ಕದಡುವ ಕೆಲಸ ಮಾಡಬೇಡಿ. ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ್ತೇವೆ ಎಂದು ಅಭಿಮಾನಿಗಳಲ್ಲಿ ರಾಘವೇಂದ್ರ ರಾಜ್ಕುಮಾರ್ ಮನವಿ ಮಾಡಿದ್ದಾರೆ.
ನಟ ಪುನೀತ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಪುನೀತ್ ಪಾರ್ಥಿವ ಶರೀರ ಕಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಸಹೋದರರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮಕ್ಕಳು ಕಣ್ಣೀರಿಟ್ಟಿದ್ದಾರೆ.
ಮಂಡ್ಯ: ಪುನೀತ್ ರಾಜಕುಮಾರ್ ನಿಧನದಿಂದ ದುಃಖಗೊಂಡಿರುವ ಅಭಿಮಾನಿಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಣ್ಣೀರಿಡುತ್ತಿದ್ದಾರೆ. ಅವರು ರಸ್ತೆಗೆ ಇಳಿಯುತ್ತಿದ್ದಂತೆ ಅಭಿಮಾನಿಯೊಬ್ಬನನ್ನು ಸಿಪಿಐ ಸಂತೋಷ್ ಕುಮಾರ್ ಜೀಪಿನ ಬಳಿಗೆ ಕರೆತಂದಿದ್ದಾರೆ. ಇದಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾಪಸ್ ಕಳಿಸಲಾಗಿದೆ. ಹೆಚ್ಚಿನ ಸಿಬ್ಬಂದಿ ಕಳುಹಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಪುನೀತ್ ನಿಧನಕ್ಕೆ ಖ್ಯಾತ ತಾರೆಯರು ಕಂಬನಿ ಮಿಡಿದಿದ್ದಾರೆ. ಟ್ವೀಟ್ ಮೂಲಕ ಅವರು ಸಂತಾಪ ಸೂಚಿಸಿದ್ಧಾರೆ.
I am in a state of shock right now ! Just cant process this news .. For someone who was particular about his health ..
gone way too soon Puneeth gone way too soon #PuneethRajkumar RIP Appu .— Erica J Fernandes (@IamEJF) October 29, 2021
It aches beyond words could ever express. Puneeth ? #PuneethRajkumar pic.twitter.com/t3sSeOh52W
— Parvathy Thiruvothu (@parvatweets) October 29, 2021
ದಕ್ಷಿಣ ಭಾರತದ ಖ್ಯಾತ ನಟಿಯರಾದ ರಶ್ಮಿಕಾ ಮಂದಣ್ಣ, ತ್ರಿಷಾ ಕೃಷ್ಣನ್, ಹನ್ಸಿಕಾ ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
Heart broken. Completely lost.
Rest in peace @PuneethRajkumar sir.
Where ever you are- I hope you are smiling like how you always do.
See you on the other side.— Rashmika Mandanna (@iamRashmika) October 29, 2021
I just can’t process this!! Such a passionate ,warm and humble human being !! this is so tragic . Deepest condolence to his family .may his soul rest in peace ? #PuneethRajkumar
— Hansika (@ihansika) October 29, 2021
How it’s possible. I can’t believe this.
Life is too short.#RIP @PuneethRajkumar on behalf of @trishtrashers fans ?? pic.twitter.com/8hherjYqAK— Trisha Krishnan FC (@ActressTrisha) October 29, 2021
ಪುನೀತ್ ನಿಧನಕ್ಕೆ ಚಿರಂಜೀವಿ, ಮಹೇಶ್ ಬಾಬು, ಜ್ಯೂ ಎನ್ಟಿಆರ್ ಸೇರಿದಂತೆ ಟಾಲಿವುಡ್ ತಾರೆಯರು ಕಂಬನಿ ಮಿಡಿದಿದ್ದಾರೆ.
Shocking ,devastating & heartbreaking! #PuneethRajkumar gone too soon. ?
Rest in Peace! My deepest sympathies and tearful condolences to the family. A huge loss to the Kannada / Indian film fraternity as a whole.Strength to all to cope with this tragic loss!— Chiranjeevi Konidela (@KChiruTweets) October 29, 2021
Heartbroken!
Can’t believe you have gone so soon. pic.twitter.com/55lt4r62d1
— Jr NTR (@tarak9999) October 29, 2021
ಕಂಠೀರವದಲ್ಲಿ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 6 ಎಸಿಪಿಗಳು, 20 ಇನ್ಸ್ಪೆಕ್ಟರ್ಗಳು, 4 ಡಿಸಿಪಿಗಳು ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ 550ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಪುನೀತ್ ಅಕಾಲಿಕ ಮರಣ ನಿಜಕ್ಕೂ ನಂಬಲು ಆಗಲಿಲ್ಲ. ಪುನೀತ್ ಬಹಳ ಸರಳ ಸಜ್ಜನಿಕೆಯ ವ್ಯಕ್ತಿ. ಅವರ ತಂದೆಯ ಮೌಲ್ಯಗಳನ್ನ ಹೊಂದಿದ್ದರು. ಪುನೀತ್ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಅಂತಾರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ ಕಂಬನಿ ಮಿಡಿದಿದ್ದಾರೆ.
ನಟ ಪುನೀತ್ ನಿಧನಕ್ಕೆ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಂತಾಪ ಸೂಚಿಸಿದ್ದು, ಪುನೀತ್ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಪುನೀತ್ ನನ್ನ ಆತ್ಮೀಯ ಸ್ನೇಹಿತ, ಹಿತೈಷಿಯಾಗಿದ್ದರು. ನಾವು ಒಬ್ಬ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದಿದ್ದಾರೆ.
ಕುಟುಂಬಸ್ಥರಿಗಷ್ಟೆ ಮನೆಯೊಳಗೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಸಿದ್ದರಾಮಯ್ಯ, ಅಶ್ವತ್ ನಾರಾಯಣ್,ಮಧು ಬಂಗಾರಪ್ಪ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಆದಿ ಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಾಲಾನಂದನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಪುನೀತ್ ಇನ್ನಿಲ್ಲವಾದ್ದು ಅತ್ಯಂತ ನೋವಿನ ಸಂಗತಿ. ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ಪುನೀತ್, ರಾಷ್ಟ್ರ, ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರವಾಗಿದ್ದರು. ಯುವನಟರಿಗೆ ಮಾದರಿಯಾಗಿದ್ದರು. ನಟರಾಗಿ, ಹಿನ್ನಲೆ ಗಾಯಕರಾಗಿ, ಚಿತ್ರ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದ ಬಹುದೊಡ್ಡ ಆಸ್ತಿಯಾಗಿದ್ದರು. ಚಿತ್ರರಂಗದ ಬಹುದೊಡ್ಡ ಆಸ್ತಿಯಾಗಿದ್ದ ಅವರ ನಿಧನದಿಂದ ಕನ್ನಡ ನಾಡು ಓರ್ವ ಸಾಂಸ್ಕೃತಿಕ ರಾಯಭಾರಿಯನ್ನ ಕಳೆದುಕೊಂಡಂತಾಗಿದೆ. ಭಗವಂತನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಖವನ್ನ ಸಹಿಸುವ ಶಕ್ತಿ ನೀಡಲಿ, ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.
ಪುನೀತ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚಿತ್ರಪ್ರದರ್ಶನ ರದ್ದಾಗಿದೆ ಎಂದು ಕರ್ನಾಟಕದ ಚಲನಚಿತ್ರ ಪ್ರದರ್ಶಕರ ಮಹಾ ಮಂಡಲ್ ಉಪಾಧ್ಯಕ್ಷ ರಾಜಾರಾಮ್ ಹೇಳಿಕೆ ನೀಡಿದ್ದಾರೆ.
ಪುನೀತ್ ಮನೆ ಬಳಿ ಬರದಂತೆ ಜನರಿಗೆ ಸರ್ಕಾರ ಮನವಿ ಮಾಡಿದ್ದು, ಕಂಠೀರವ ಸ್ಟೇಡಿಯಂಗೆ ಬರಲು ತಿಳಿಸಿದೆ. ನಟ ಪುನೀತ್ ರಾಜಕುಮಾರ್ ಅಂತಿಮ ದರ್ಶನಕ್ಕೆ ಸಂಜೆ 5ರಿಂದ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪುನೀತ್ ಫಾರ್ಮ್ ಹೌಸ್ಗೆ ಪೊಲೀಸರು, ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ನಟ ಪುನೀತ್ ನಿಧನಕ್ಕೆ ಸಚಿವ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದು, ‘‘ಪುನೀತ್ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ. ಇಂದು ನಾವು ಬಹುದೊಡ್ಡ ಆಸ್ತಿಯನ್ನ ಕಳೆದುಕೊಂಡಿದ್ದೇನೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ’’ ಎಂದು ಹೇಳಿದ್ದಾರೆ.
ನಟ ಪುನೀತ್ ನಿಧನಕ್ಕೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸಂತಾಪ ಸೂಚಿಸಿದ್ದು, ‘‘ನಟ ಪುನೀತ್ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಪುನೀತ್‌ರನ್ನು ಕಳೆದುಕೊಂಡು ರಾಜ್ಯದ ಜನ ದುಃಖಿತರಾಗಿದ್ದಾರೆ. ಪುನೀತ್ ರಾಜ್ಕುಮಾರ್ ಆತ್ಮಕ್ಕೆ ಆ ಭಗವಂತ ಶಾಂತಿ ಸಿಗಲಿ’’ ಎಂದು ಕಂಬನಿ ಮಿಡಿದಿದ್ದಾರೆ.
ನಟ ಪುನೀತ್ ನಿಧನಕ್ಕೆ ನಿರ್ಮಲಾನಂದನಾಥಶ್ರೀ ಸಂತಾಪ ಸೂಚಿಸಿದ್ದಾರೆ.
ನಟ ಪುನೀತ್ ನಿಧನ ಹಿನ್ನೆಲೆಯಲ್ಲಿಅಶೋಕ ನಗರದಲ್ಲಿರುವ ಗರುಡಾ ಮಾಲ್ ಕ್ಲೋಸ್ ಮಾಡುವ ಮೂಲಕ ಸಂತಾಪ ಸೂಚಿಸಲಾಗಿದೆ.
ದಾವಣಗೆರೆ ಯ ಬಹುತೇಕ ಕಡೆ ಕೈಕೊಟ್ಟ ವಿದ್ಯುತ್ ಕೈಕೊಟ್ಟಿದ್ದು, ಪುನೀತ್ ವಿಧಿವಶವಾದ ಸುದ್ದಿ ನೋಡಲು ವಿದ್ಯುತ್ ಪೂರೈಕೆ ಮಾಡಲು ಆಗ್ರಹಿಸಿ, ಶಿವರಾಜ್ ಕುಮಾರ ಅಭಿಮಾನಿಗಳಿಂದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಗೆ ನಾಳೆ ಪ್ರವಾಸ ಮಾಡಿ, ಶೃಂಗೇರಿ ಶಾರದಾಂಬೆ ದರ್ಶನ ಪಡೆಯಬೇಕಿದ್ದ ಸಿಎಂ ಬೊಮ್ಮಾಯಿ ಪ್ರವಾಸ ರದ್ದಾಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ನಾಳಿನ ಶಿವಮೊಗ್ಗ ಪ್ರವಾಸ ರದ್ದುಗೊಳಿಸಿದ್ದಾರೆ. ಅವರು ಹಿಂದುಳಿದ ಜಾತಿಗಳ ಒಕ್ಕೂಟ ಸತ್ಯಾಗ್ರಹದಲ್ಲಿ ಭಾಗವಹಿಸಬೇಕಿತ್ತು.
ಕನ್ನಡ ಚಿತ್ರರಂಗದ ಒಬ್ಬ ಪ್ರತಿಭಾನ್ವಿತ ನಟ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇನ್ನೂ ಕೊಡುಗೆ ನೀಡಬೇಕಿದ್ದ ಪುನೀತ್, ನಿಧನದ ಸುದ್ದಿಯನ್ನು ನಂಬಲು ಆಗುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹಲವಾರು ಉತ್ತಮ ಸಿನಿಮಾಗಳನ್ನು ನೀಡಿರುವ ಪುನೀತ್, ಅವರ ತಂದೆಯಂತೆ ಸರಳವಾಗಿದ್ದರು. ಅವರು ಸಂಪೂರ್ಣ ಆರೋಗ್ಯವಂತರಾಗಿದ್ದರು. ಪುನೀತ್ ನಿಧನ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಅವರನ್ನು ನಾವೆಲ್ಲರೂ ಗೌರವಯುತವಾಗಿ ಕಳಿಸಿಕೊಡೋಣ. ಅಪ್ಪು ಹೆಸರಿಗೆ ಕಪ್ಪುಚುಕ್ಕೆ ಬರದಂತೆ ನಾವು ನೋಡಿಕೊಳ್ಳಬೇಕು ಎಂದು ವಿಕ್ರಂ ಆಸ್ಪತ್ರೆ ಬಳಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ವಿಕ್ರಂ ಆಸ್ಪತ್ರೆ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ‘‘ನಟ ಪುನೀತ್ ನಿಧನದ ಸುದ್ದಿ ನಮಗೆ ಆಘಾತವನ್ನು ತಂದಿದೆ. ಆಸ್ಪತ್ರೆಯಲ್ಲಿ ಎಲ್ಲ ಪ್ರಯತ್ನ ಮಾಡಿದ್ರೂ ಉಳಿಸಿಕೊಳ್ಳಲಾಗಲಿಲ್ಲ. ನಟ ಪುನೀತ್ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ನಿನ್ನೆ ನಟ ಪುನೀತ್ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಇಂದು ನನ್ನ ಭೇಟಿಗೆ ಸಮಯ ಸಹ ನಿಗದಿ ಮಾಡಲಾಗಿತ್ತು. ಕನ್ನಡ ರಾಜ್ಯೋತ್ಸವದ ಕುರಿತು ಖಾಸಗಿ ವೆಬ್ಸೈಟ್ ಲಾಂಚ್ ಮಾಡುವ ಬಗ್ಗೆ ನನ್ನ ಭೇಟಿಯಾಗಬೇಕಿತ್ತು. ಆದ್ರೆ ಆ ವಿಧಿಯಾಟ ಬೇರೆಯೇ ಆಗಿತ್ತ. ಪುನೀತ್ ತಮ್ಮ ತಂದೆಯ ಗುಣಗಳನ್ನೇ ಅಳವಡಿಸಿಕೊಂಡಿದ್ದರು ಎಂದು ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಅಭಿಮಾನಿಗಳು ಶಾಂತಿ ಕಾಪಾಡಿಕೊಳ್ಳಬೇಕು. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಶಾಂತಿಯಿಂದ ನಟ ಪುನೀತ್ರನ್ನ ನಾವು ಬೀಳ್ಕೊಡೋಣ ಎಂದು ಅವರು ಕರೆ ನೀಡಿದ್ದಾರೆ.
ಗದಗ ನಗರಕ್ಕೆ ಬರ್ತೀನಿ ಅಂದಿದ್ದ ನಟ ಪುನೀತ್ ಇಲ್ಲ ಅಂತ ಕಣ್ಣೀರು ಎಂದು ನೆಚ್ಚಿನ ನಟನ ಕಳೆದುಕೊಂಡ ದುಃಖದಲ್ಲಿ ಮಹಿಳಾ ಅಭಿಮಾನಿ ರೇಖಾ ಬಂಗಾರಶೆಟ್ಟರ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಒಮ್ಮೆಯಾದರೂ ಭೇಟಿಯಾಗಬೇಕು ಅನ್ನೋ ಕನಸಿತ್ತು. ಈಗ ಅವರ ನಿಧನದಿಂದ ನನ್ನ ಕನಸು ಕಮರಿದೆ ಅಂತ ಅವರು ಕಣ್ಣೀರು ಹಾಕಿದ್ದಾರೆ. ಗದಗ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘದ ಮಹಿಳೆಯರು ಕೂಡ ಅಪಾರ ದುಃಖ ವ್ಯಕ್ತಪಡಿಸಿದ್ದಾರೆ.
ನಟ ಪುನೀತ್ ರಾಜಕುಮಾರ್ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಸಂಜೆ 5ರಿಂದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಂತಾಪ
ಪುನೀತ್ ರಾಜಕುಮಾರ್ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ.
ಪೇಜಾವರ ಶ್ರೀ ಸಂತಾಪ
ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಪೇಜಾವರ ಶ್ರೀ ಸಂತಾಪ ಸೂಚಿಸಿದ್ದಾರೆ.
ವಿಕ್ರಂ ಆಸ್ಪತ್ರೆ ಬಳಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು, ‘‘ನಟ ಪುನೀತ್ ನಿಧನದಿಂದ ನನಗೆ ತೀವ್ರ ಆಘಾತವಾಗಿದೆ. ನಟ ಪುನೀತ್ ನಿಧನದಿಂದ ಕರುನಾಡಿಗೆ ತುಂಬಲಾರದ ನಷ್ಟ. ನಟ ಪುನೀತ್ ಆತ್ಮಕ್ಕೆ ಆ ದೇವರು ಶಾಂತಿಯನ್ನ ಕರುಣಿಸಲಿ ಎಂದು ನುಡಿದಿದ್ದಾರೆ.
ಕನ್ನಡಿಗರ ಪ್ರೀತಿಯ ಅಪ್ಪು, ಖ್ಯಾತ ಚಿತ್ರನಟ ಹಾಗೂ ಆತ್ಮೀಯರಾದ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ದಿಗ್ಭ್ರಮೆ ಮೂಡಿಸಿದೆ. ಪುನೀತ್ ಅವರು ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಅಣ್ಣಾವ್ರ ಕುಟುಂಬಕ್ಕೆ, ಅವರ ಅಸಂಖ್ಯಾತ ಅಭಿಮಾನಿ ದೇವರುಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದಾವಣಗೆರೆ ಸಂಸದ ಡಾ. ಜಿ.ಎಂ.ಸಿದ್ದೇಶ್ವರ ಸಂತಾಪ ಸೂಚಿಸಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನಕ್ಕೆ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಕಂಬನಿ ಮಿಡಿದಿದ್ದಾರೆ.
ವಿಕ್ರಂ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸಕ್ಕೆ ಸ್ಥಳಾಂತರ ಮಾಡಲಾಗಿದೆ. ಆ್ಯಂಬುಲೆನ್ಸ್ ಮೂಲಕ ಮನೆಗೆ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ, “ಪವರ್ ಸ್ಟಾರ್” ಎಂದೇ ಖ್ಯಾತರಾಗಿದ್ದ, ಜನಾನುರಾಗಿ ಹಾಗೂ ಶ್ರೇಷ್ಠ ನಟ ಪುನೀತ್ ರಾಜಕುಮಾರ್, ಅವರ ಹಠಾತ್ ನಿಧನ, ಅಪಾರವಾದ ನೋವು ಹಾಗೂ ದುಃಖ ತಂದಿದೆ. ಬರ ಸಿಡಿಲಿನಂತೆ ಬಂದೆರಗಿದ ಪುನೀತ್ ರಾಜಕುಮಾರ್ ರವರ ಹಠಾತ್ ನಿಧನದ ಸುದ್ದಿಯಿಂದ ಇಡೀ ಕನ್ನಡ ಚಿತ್ರರಂಗ ಕನ್ನಡ ಚಿತ್ರರಂಗ ಹಾಗೂ ನಾಡಿನ ಜನತೆ, ಆಘಾತಗೊಂಡಿದ್ದು ನಾಡಿನಾದ್ಯಂತ, ದುಃಖದ ಛಾಯೆ ಆವರಿಸಿದೆ. ಕನ್ನಡ ಚಿತ್ರ ಜಗತ್ತಿನ, ಮೇರು ನಟರಾಗಿದ್ದ, ಡಾ: ರಾಜಕುಮಾರ್ ಅವರ ಪುತ್ರರೂ ಆಗಿದ್ದ, ಪುನೀತ್ ರಾಜಕುಮಾರ್, ತಮ್ಮ ಸಹಜ ಅಭಿನಯ ಚಾತುರ್ಯದಿಂದ, ಸದಭಿರುಚಿಯ ಹಾಗೂ ವೈಚಾರಿಕ ನೆಲೆಯುಳ್ಳ
ಮಾದರಿ ಪಾತ್ರಗಳಲ್ಲಿ ಅಭಿನಯಿಸಿ, ನಾಡಿನ ಮೂಲೆ ಮೂಲೆಯಲ್ಲಿಹಾಗೂ ನಾಡಿನ ಹೊರಗೂ, ಅಭಿಮಾನಿಗಳ ಸಾಗರವನ್ನೇ, ಹೊಂದಿದ್ದರು. ಪುನೀತ್ ರಾಜಕುಮಾರ್ ರವರು, ಇನ್ನಿಲ್ಲ ಎಂಬ ಸುದ್ದಿಯನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಮೃತರ ಕುಟುಂಬದ ಸದಸ್ಯರಿಗೆ, ಹಾಗೂ ಅವರ ಅಪಾರ ಪ್ರಮಾಣದ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ, ಭಗವಂತ ನೀಡಲಿ
ಎಂದು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವುಡ್‌ಲ್ಯಾಂಡ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಕಣ್ಣೀರಿಡುತ್ತಲೇ ಚಿತ್ರಮಂದಿರದ ಬಾಗಿಲು ಬಡಿದು, ಪಾಪ್ಕಾರ್ನ್ ಗಾಡಿಯ ಗ್ಲಾಸ್ ಒಡೆದ ಘಟನೆ ವರದಿಯಾಗಿದೆ.
ವಿಕ್ರಂ ಆಸ್ಪತ್ರೆ ಬಳಿ ಕಂದಾಯ ಸಚಿವ ಅಶೋಕ್ ಹೇಳಿಕೆ ನೀಡಿದ್ದು, ‘‘ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಗೆ ಪುನೀತ್ ದಾಖಲಾಗಿದ್ದರು. ನಟ ಪುನೀತ್ ನಮ್ಮನ್ನಗಲಿರುವುದು ತೀವ್ರ ನೋವಿನ ಸಂಗತಿ. ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆಯನ್ನು ನಡೆಸಲಾಗುವುದು. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಕುಟುಂಬಸ್ಥರ ಆಸೆಯಂತೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ದೇವರು ನಟ ಪುನೀತ್ ಆತ್ಮಕ್ಕೆ ಶಾಂತಿಯನ್ನ ಕರುಣಿಸಲಿ. ನಟ ಪುನೀತ್ ಅಭಿಮಾನಿಗಳು ಶಾಂತಿಯನ್ನ ಕಾಪಾಡಬೇಕು. ನಾಳೆ ಅಂತ್ಯಕ್ರಿಯೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಕುಟುಂಬಸ್ಥರ ಬಳಿ ಚರ್ಚಿಸಿ ಸಮಯ ನಿಗದಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ನಟ ಪುನಿತ್ ನಿಧನಕ್ಕೆ ನಗರದ ಜಿಮ್ ಸೆಂಟರ್ ಕ್ಲೋಸ್ ಮಾಡಲು ಮಾಲಿಕರು ಮುಂದಾಗಿದ್ದಾರೆ.
ನಟ ಪುನೀತ್ ನಿಧನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂತಾಪ ಸೂಚಿಸಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನಕ್ಕೆ ನಟಿ ರಮ್ಯಾ ಸಂತಾಪ ಸೂಚಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಕೆಲವು ನೋವುಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಆಗಲ್ಲ. ‘ಮಿಸ್ ಯೂ ಅಪ್ಪು’ ಎಂದು ನಟಿ ರಮ್ಯಾ ಪೋಸ್ಟ್ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನಕ್ಕೆ ವಿಧಾನಪರಿಷತ್ನ ಮಾಜಿ ಸದಸ್ಯ ಟಿ.ಎ.ಶರವಣ ಸಂತಾಪ ಸೂಚಿಸಿದ್ಧಾರೆ. ಎಂಎಲ್ಸಿ, ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಕೂಡ ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ನನ್ನ ಬಾಲ್ಯ ಸ್ನೇಹಿತ, ನೆರೆ ಮನೆಯ ಪುನೀತ್ ಇನ್ನಿಲ್ಲ. ಇದನ್ನು ನಂಬುವುದಕ್ಕೂ ಸಾಧ್ಯವಾಗುತ್ತಿಲ್ಲ. ವಿಧಿ ಎಷ್ಟು ಕ್ರೂರಿ ಎನ್ನುವುದಕ್ಕೆ ಇದೇ ಸಾಕ್ಷಿ. ಪುನೀತ್‌ಗೆ ಯಾವುದೇ ಕೆಟ್ಟ ಹವ್ಯಾಸಗಳು ಇರಲಿಲ್ಲ. ರಾಜಕೀಯಕ್ಕೆ ಕರೆತರಲು ಪ್ರಯತ್ನಿಸಿದ್ದೆವು. ಆದರೆ ಅವರು ರಾಜಕೀಯಕ್ಕೆ ಬರಲು ಇಷ್ಟಪಡಲಿಲ್ಲ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುನೀತ್ ವ್ಯಕ್ತಿತ್ವವನ್ನು ಸ್ಮರಿಸಿಕೊಂಡಿದ್ದಾರೆ.
ನಟ ಪುನೀತ್ ನಿಧನಕ್ಕೆ ತೆಲುಗಿನ ಖ್ಯಾತ ನಟರಾದ ಮಹೇಶ್ ಬಾಬು, ಚಿರಂಜೀವಿ ಸಂತಾಪ ಸೂಚಿಸಿದ್ಧಾರೆ.
ತೆಲುಗು ಸೂಪರ್ ಸ್ಟಾರ್ ಮಹೇಶ್‌ಬಾಬು ಸಂತಾಪ
ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಮಹೇಶ್‌ಬಾಬು
ಪುನೀತ್ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹಾಸನ ಜಿಲ್ಲೆ ಪ್ರವಾಸ ಮುಂದೂಡಿಕೆಯಾಗಿದೆ.
ಶಿವಮೊಗ್ಗದಲ್ಲಿ ಸಾಗರ ಶಾಸಕ ಹರತಾಳ ಹಾಲಪ್ಪ ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪುನೀತ್ ಕಳೆದ ವಾರ ನನ್ನ ಮಗಳ ಮದುವೆಗೆ ಬಂದಿದ್ದರು. ಮೂರು ದಿನಗಳ ಕಾಲ ಮದುವೆಗೆ ಬಂದಿದ್ದರು. ಅವರಿಗೆ ಹೀಗಾಗಿರುವುದು ಸುದ್ದಿ ಕೇಳಿ ತುಂಬಾ ನೋವಾಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಸ್ಯಾಂಡಲ್ವುಡ್ ನಟರಾದ ಸುದೀಪ್, ಉಪೆಂದ್ರ ಚಿತ್ರೀಕರಣಕ್ಕಾಗಿ ಹೈದರಾಬಾದ್ನಲ್ಲಿದ್ದರು. ಸಂಜೆ 4.30 ಫ್ಲೈಟ್‌ಗೆ ಅವರು ಬರುವ ನಿರೀಕ್ಷೆ ಇದೆ. ಶೂಟಿಂಗ್ನಲ್ಲಿದ್ದ ನಟ ರಕ್ಷಿತ್ ಶೆಟ್ಟಿ ಆಗಮಿಸಿದ್ದಾರೆ.
ವಿಕ್ರಂ ಆಸ್ಪತ್ರೆ ಬಳಿ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ. ಆಸ್ಪತ್ರೆಯ ಒಳನುಗ್ಗಲು ಅಭಿಮಾನಿಗಳು ಪ್ರಯತ್ನಿಸುತ್ತಿದ್ದಾರೆ. ಅಪ್ಪು ಆರೋಗ್ಯದ ಬಗ್ಗೆ ಸ್ಪಷ್ಟವಾಗಿ ಡಾಕ್ಟರ್ಗಳು ಹೇಳದ ಹಿನ್ನೆಲೆಯಲ್ಲಿ ಕೌಪೌಂಡ್ ಹಾರಲು ಅಭಿಮಾನಿಗಳು ಮುಂದಾಗಿದ್ದಾರೆ. ಆಸ್ಪತ್ರೆಯ ಸುತ್ತಲು ಬ್ಯಾರಿಕೇಡ್ ಹಾಕಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಮಾಧ್ಯಮ ಅಕಾಡೆಮಿ & ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಸಂತಾಪ ಸೂಚಿಸಿದ್ದಾರೆ.
ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದರು. ನಾಡು-ನುಡಿ ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರನ್ನು ಕಳೆದುಕೊಂಡಿರುವುದರಿಂದ ಕನ್ನಡ ನಾಡು ಅಕ್ಷರಶಃ ಬಡವಾಗಿದೆ’ ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಮ್ಮ ಶೋಕಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ.
ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಕನ್ನಡ ಚಲನಚಿತ್ರರಂಗ ಒಬ್ಬ ಉತ್ತಮ ನಟನನ್ನು ಕಳೆದುಕೊಂಡಿರುವುದು ದುಃಖಕರ ಸಂಗತಿ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾವಂತ ಮತ್ತು ಪ್ರಖ್ಯಾತ ನಟರಾದ ಡಾ. ರಾಜ್‍ಕುಮಾರ್ ಅವರ ಪುತ್ರರಾದ ಪುನೀತ್ ಅವರು “ಅಪ್ಪು’ ಎಂದೇ ಖ್ಯಾತಿ ಪಡೆದಿದ್ದು ಕನ್ನಡಿಗರ ಕಣ್ಮಣಿ ಎನಿಸಿದ್ದರು. ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅವರ ನಿಧನ ನಿಜಕ್ಕೂ ಆಘಾತಕರ ಸುದ್ದಿ. ನಾಡಿನ ಸಮಸ್ತ ಕನ್ನಡಿಗರಿಗೆ ಈ ವಿಷಯ ಆಘಾತವನ್ನು ತಂದಿದೆ. ಈ ಸಂದರ್ಭದಲ್ಲಿ ಜನರು ಶಾಂತಿ- ಸಂಯಮದಿಂದ ವರ್ತಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅಗಲಿರುವ ಕುರಿತು ಇನ್ನೂ ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ಕೆಲವು ಮಾಧ್ಯಮಗಳಲ್ಲಿ ಅವರು ಆಗಲಿದ್ದಾರೆ ಎಂದು ಬಂದಿದೆ. ಚಿಕ್ಕ ವಯಸ್ಸಿನಲ್ಲೇ ಉತ್ತಮ ನಟನಾಗಿ ಅವರು ಗುರುತಿಸಿಕೊಂಡಿದ್ದರು. ಎಲ್ಲ ಕಾನೂನು ಸುವ್ಯವಸ್ಥೆ ಮಾಡಲಾಗುತ್ತಿದೆ. ಮಾಜಿ ಸಿಎಂ ಬಿಎಸ್ ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಅಲ್ಲಿಯೇ ಇದ್ದಾರೆ. ಅಭಿಮಾನಿಗಳು ತಾಳ್ಮೆಯಿಂದ ಶಿಸ್ತಿನಿಂದ ವರ್ತಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಪುನೀತ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ಆಗಮಿಸಿದ್ದಾರೆ.
ಸಂಜೆ ಐದು ಗಂಟೆ ಬಳಿಕ ನಟ ಪುನೀತ್ ಮೃತದೇಹ ಕಂಠೀರವ ಕ್ರೀಡಾಗಂಣಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಸಂಜೆ ಬಳಿಕವೇ ಅಭಿಮಾನಿಗಳ ದರ್ಶನಕ್ಕೆ ಪ್ರಾರ್ಥಿವ ಶರೀರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಗಣಿ,ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ ಸಂತಾಪ ಸೂಚಿಸಿದ್ದಾರೆ. ಈ ದಿನ ಕರಾಳ ದಿನ ಎಂಬ ಭಾವನೆ ಬರ್ತಿದೆ. ಯುವ ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ. ಹೃದಯಾಘಾತದಿಂದ ಆಕಸ್ಮಿಕವಾಗಿ ಅಗಲಿಕೆ ನೋವು ತಂದಿದೆ. ಪುನೀತ್ ಅಪ್ರತಿಮ ಕಲಾವಿದ. ಅವರ ತಂದೆಯಷ್ಟೇ ಪ್ರತಿಭೆ ಪುನೀತ್‌ರಾಜಕುಮಾರ್ ಅವರಿಗೆ ಇತ್ತು. ಅಪ್ಪನನ್ನೂ ಮೀರಿಸುವ ಕಲಾ ಶಕ್ತಿ ಪುನೀತ್ ಗೆ ಇತ್ತು. ಯುವ ಪ್ರತಿಭೆಯನ್ನು ಕಳೆದುಕೊಂಡಿದ್ದು ಕರ್ನಾಟಕ ಕಲಾ ಕ್ಷೇತ್ರಕ್ಕೆ ಆಘಾತ. ಇಡೀ ರಾಜ್ಯದ ಕಲಾ ಅಭಿಮಾನಿಗಳಿಗೆ ದೇವರು ದುಖಃ ಸಹಿಸುವ ಶಕ್ತಿ ನೀಡಲಿ. ಪುನೀತ್ ಕುಟುಂಬಕ್ಕೂ ದುಃಖ ಸಹಿಸುವ ಶಕ್ತಿ ದೇವರು ನೀಡಲಿ. ಇವತ್ತು ಕರಾಳ ದಿನ ಎಂದು ನಾನು ಭಾವಿಸುತ್ತೇನೆ ಎಂದು ಕೊಪ್ಪಳದಲ್ಲಿ ಹಾಲಪ್ಪ ಆಚಾರ್ ದುಃಖ ವ್ಯಕ್ತಪಡಿಸಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಕ್ರಿಕೆಟಿಗರು ಸಂತಾಪ ಸೂಚಿಸುತ್ತಿದ್ದಾರೆ. ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಆರ್.ವಿನಯ್ ಕುಮಾರ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗುತ್ತಿದ್ದು, ಸ್ಥಳಕ್ಕೆ ಬೆಂಗಳೂರು ನಗರ ಡಿಸಿ ಮಂಜುನಾಥ್ ಆಗಮಿಸಿದ್ದಾರೆ. ಕೈಗೊಂಡಿರುವ ಸಿದ್ಧತೆಗಳ ಕುರಿತು ಅವರು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಮನೆಗೆ ಪುನೀತ್ ಅಂತಿಮ ದರ್ಶನಕ್ಕೆ ಹೂವುಗಳನ್ನು ತಂದು ಸಿದ್ಧತೆ ಮಾಡಲಾಗುತ್ತಿದೆ.
ಪುನೀತ್ ನಿವಾಸಕ್ಕೆ ಬಂದ ಸಂಸದೆ ಸುಮಲತಾ ಹಾಗೂ ನಟ ದರ್ಶನ್ ಆಗಮಿಸಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂತಾಪ ಸೂಚಿಸಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಪುನೀತ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಪುನೀತ್ ರಾಜ್‌ಕುಮಾರ್ ಕನ್ನಡಿಗರ ಮನೆ ಮಗನಂತಿದ್ದರು. ಅವರ ನಿಧನ ತುಂಬಲಾರದ ನಷ್ಟ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನಕ್ಕೆ ಉಮಾಶ್ರೀ ಸಂತಾಪ ವ್ಯಕ್ತಪಡಿಸಿದ್ದು, ನಟ ಪುನೀತ್ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ಬಾಲನಟನಾಗಿದ್ದಾಗ ನಮ್ಮ ಜತೆ ಮಗುವಂತೆ ಇರುತ್ತಿದ್ದ. ಪುನೀತ್ ರಾಜ್‌ಕುಮಾರ್ ಸಾಧನೆ ಬಹಳ ದೊಡ್ಡದು ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ. ಪುನೀತ್ ಇನ್ನಿಲ್ಲವೆಂಬ ಸುದ್ದಿ ಅರಗಿಸಿಕೊಳ್ಳಲಾಗುತ್ತಿಲ್ಲ. ಪುನೀತ್ ರಾಜ್‌ಕುಮಾರ್ ನನ್ನ ಸಹೋದರನಂತೆ ಇದ್ದಂತೆ. ವಿಧಿ ಬಹಳ ಕ್ರೂರಿ. ಪುನೀತ್ ಅವರ ಅಗಲಿಕೆ ಕೇವಲ ಚಿತ್ರರಂಗಕ್ಕಷ್ಟೇ ಅಲ್ಲ. ಇಡೀ ನಾಡಿಗೆ ತುಂಬಲಾರದ ನಷ್ಟ ಎಂದು ಡಿಕೆಶಿ ಕಂಬನಿ ಮಿಡಿದಿದ್ದಾರೆ.
ನಟ ಪುನೀತ್ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಪುನೀತ್ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಪುನೀತ್ ನಿಧನದ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಯುವರತ್ನನನ್ನು ಕಳೆದುಕೊಂಡ ಕರುನಾಡು ಬರಿದಾಗಿದೆ. ದೇವರು ಪುನೀತ್ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.
ಪ್ರತಿಭಾವಂತರಾದ ಪುನೀತ್, ಕಲೆಯಲ್ಲಿ ಅವರ ತಂದೆಯ ದಾರಿಯಲ್ಲಿ ಸಾಗುತ್ತಿದ್ದರು. ನಮಗಿಂತ ಚಿಕ್ಕವನು,ಕನ್ನಡದ ಮೇರು ಶಿಖರ ಏರಬೇಕೆಂದು ಬಯಕೆ ಇಟ್ಟುಕೊಂಡು ನಡೆಯುತ್ತಿದ್ದ ನಟ. ಪುನೀತ್ ಅಗಲಿಕೆಯಿಂದ ಇಡೀ ಕರ್ನಾಟಕಕ್ಕೆ ದುಃಖವಾಗಿದೆ. ನಾಡಿನ ರೈತರ ಪರವಾಗಿ ನಾವು ಸಂತಾಪ ಮಾಡಿದ್ದೇವೆ. ಅವರ ಕಲಾಕ್ಷೇತ್ರದ ಬೆಳವಣಿಗೆ, ಅವರ ಬದುಕು ಇನ್ನು ಬೇಕಾಗಿತ್ತು ಎಂದು ಕೋಡಿಹಳ್ಳಿ ಚಂದ್ರಶೇಖರ್ ನುಡಿದಿದ್ದಾರೆ.
ತಂದೆಯಂತೆ ತಾವೂ ಕೂಡ ನೇತ್ರದಾನ ಮಾಡುವ ಮೂಲಕ ಪುನೀತ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ S.M.ಕೃಷ್ಣ ಸಂತಾಪ ಸೂಚಿಸಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಅವರು ಪುನೀತ್ ನಮ್ಮನ್ನು ಅಗಲಿರುವುದು ಅತ್ಯಂತ ದುಃಖದ ವಿಷಯ. ಸರಳ, ಸೌಜನ್ಯಕ್ಕೆ ಹೆಸರಾಗಿದ್ದ ಪುನೀತ್ ಅಗಲಿಕೆ ತುಂಬಲಾರದ ನಷ್ಟ ಎಂದು ದುಃಖ ವ್ಯಕ್ತಪಡಿಸಿದ್ಧಾರೆ.
Published On - 1:00 pm, Fri, 29 October 21