ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಹೃದಯಾಘಾತದಿಂದ ಮೃತರಾಗುವುದಕ್ಕೂ ಮುನ್ನ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಆ ಚಿತ್ರಗಳು ತೆರೆ ಕಾಣುವುದಕ್ಕೂ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದು ವಿಪರ್ಯಾಸ. ಪುನೀತ್ ನಟಿಸುತ್ತಿದ್ದ ಒಂದೆರಡು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ ಎಂಬುದು ಸಮಾಧಾನಕರ ಸಂಗತಿ. ಆ ಪೈಕಿ ‘ಜೇಮ್ಸ್’ ಸಿನಿಮಾ ರಿಲೀಸ್ ಆಗುವುದು ಖಚಿತ ಎಂಬುದು ಈಗಾಗಲೇ ಗೊತ್ತಾಗಿದೆ. ಅಷ್ಟೇ ಅಲ್ಲದೇ, ಅಪ್ಪು ಜತೆ ಪ್ರಭುದೇವ ಮತ್ತು ಡಾರ್ಲಿಂಗ್ ಕೃಷ್ಣ ನಟಿಸಿರುವ ‘ಲಕ್ಕಿ ಮ್ಯಾನ್’ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಆ ಸಿನಿಮಾದ ಡಬ್ಬಿಂಗ್ ಕೆಲಸಗಳು ಈಗ ನಡೆಯುತ್ತಿವೆ. ಡಬ್ಬಿಂಗ್ ಮಾಡುತ್ತಿರುವ ಅನುಭವವನ್ನು ಡಾರ್ಲಿಂಗ್ ಕೃಷ್ಣ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ.
ಡಬ್ಬಿಂಗ್ ಅನುಭವದ ಬಗ್ಗೆ ಬರೆದುಕೊಂಡಿರುವ ಡಾರ್ಲಿಂಗ್ ಕೃಷ್ಣ, ‘ಲಕ್ಕಿಮ್ಯಾನ್ ಸಿನಿಮಾಗೆ ಡಬ್ಬಿಂಗ್ ಶುರು ಮಾಡಿದೆ. ಈ ದೃಶ್ಯಗಳನ್ನು ಡಬ್ಬಿಂಗ್ ಮಾಡುವುದು ಅತ್ಯಂತ ಕಷ್ಟಕರವಾದ ಭಾಗವಾಗಿತ್ತು. ಅಪ್ಪು ಸರ್ ಜೊತೆಗಿನ ಈ ಚಿತ್ರದ ಶೂಟಿಂಗ್ ತುಂಬಾ ವಿಶೇಷವಾಗಿತ್ತು ಮತ್ತು ಇದು ಎಂದೆಂದಿಗೂ ವಿಶೇಷವಾಗಿ ಉಳಿಯುತ್ತದೆ’ ಎಂದು ಬರೆದುಕೊಳ್ಳುವುದರ ಜತೆಗೆ ಒಂದು ಸಣ್ಣ ವಿಡಿಯೋ ಕ್ಲಿಪ್ ಕೂಡ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಸಾಕಷ್ಟು ಮಂದಿ ಭಾವುಕರಾಗಿದ್ದಾರೆ.
ಪರ್ಸಾ ಪಿಕ್ಚರ್ಸ್ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್ ಕೆಲಸಗಳು ಸಾಧು ಕೋಕಿಲ ಅವರ ಸ್ಟುಡಿಯೋದಲ್ಲಿ ನಡೆಯುತ್ತಿವೆ. ‘ಲಕ್ಕಿ ಮ್ಯಾನ್’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್ಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪುನೀತ್ ರಾಜ್ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್ಕುಮಾರ್ ಅವರ ಮೇಲೆ ರಚಿಸಲಾದ ಈ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡುವಂತಾಗಿದೆ. ಇದೇ ಮೊದಲ ಬಾರಿಗೆ ಇವರಿಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ ಎಂಬುದು ಗಮನಾರ್ಹ ಅಂಶ.
‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಶಿನಿ ಪ್ರಕಾಶ್ ದ್ವಿತೀಯ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಅವಿನಾಶ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.
ಇದನ್ನೂ ಓದಿ: ಮ್ಯೂಸಿಯಂ ಆಗಲಿದೆ ಡಾ. ರಾಜ್ ಆಡಿ ಬೆಳೆದ ಮನೆ; ಪುನೀತ್ ಆಸೆ ಈಡೇರಿಸಲು ಕುಟುಂಬದ ನಿರ್ಧಾರ
ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್ ಬೆಳೆದ ಮನೆ; ಇದರ ಬಗ್ಗೆ ಪುನೀತ್ ಕಂಡಿದ್ದರು ಕನಸು