‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ನಲ್ಲಿ ತಯಾರಾಗಲಿರುವ ‘ದ್ವಿತ್ವ’ ಚಿತ್ರದ ಪೋಸ್ಟರ್ ಈಗ ಭಾರೀ ಚರ್ಚೆ ಹುಟ್ಟುಹಾಕಿದೆ. ಇದು ಕಾಪಿ ಮಾಡಿರುವ ಪೋಸ್ಟರ್ ಎಂಬ ಅಭಿಪ್ರಾಯ ಹಲವರಿಂದ ಕೇಳಿಬಂದಿದೆ. ಆ ಮಾತನ್ನು ಸಾಬೀತುಪಡಿಸುವಂತಹ ಮೂಲ ಪೋಸ್ಟರ್ ಕೂಡ ಲಭ್ಯವಾಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಪವನ್ ಕುಮಾರ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಪೋಸ್ಟರ್ ಮೇಲೆ ಕಳಂಕ ಬರಲು ಕಾರಣ ಏನು? ಇದರ ಹಿಂದಿರುವ ಸತ್ಯ ಏನು ಎಂದು ಅವರು ವಿವರಿಸಿದ್ದಾರೆ.
‘ಪೋಸ್ಟರ್ ಡಿಸೈನರ್ ಆದರ್ಶ್ ಅವರು ದ್ವಿತ್ವ ಪೋಸ್ಟರ್ ವಿನ್ಯಾಸ ಮಾಡಿ ತೋರಿಸಿದಾಗ ನಾನು ಮೂಲ ಪೋಸ್ಟರ್ ನೋಡಿರಲಿಲ್ಲ. ಲೈಸೆನ್ಸ್ ಇರುವ ಒಂದು ಇಮೇಜ್ ಬಳಸಿಕೊಂಡು ಆದರ್ಶ್ ಅವರು ಈ ಪೋಸ್ಟರ್ ವಿನ್ಯಾಸ ಮಾಡಿದ್ದರು. ಅದು ನನಗೆ ಆಗಲೇ ಗೊತ್ತಾಗಿದ್ದರೆ ನಾನು ಈ ಡಿಸೈನ್ ಬಳಸುತ್ತಿರಲಿಲ್ಲ. ಮೂಲ ಇಮೇಜ್ ಅನ್ನು ಕಾನೂನಿನ ಪ್ರಕಾರವೇ ಅದರ್ಶ್ ಅವರು ಬಳಕೆ ಮಾಡಿದ್ದರೂ ಕೂಡ, ಈ ರೀತಿ ಆಗಿದ್ದು ದುರದೃಷ್ಟಕರ’ ಎಂದು ಪವನ್ ಹೇಳಿದ್ದಾರೆ.
‘ಕದ್ದು ಪೋಸ್ಟರ್ ಮಾಡಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ. ನನ್ನ ಮತ್ತು ಪೋಸ್ಟರ್ ಡಿಸೈನರ್ ಆದರ್ಶ್ ನಡುವೆ ಆದ ಸಣ್ಣ ಕಮ್ಯುನಿಕೇಷನ್ ಗ್ಯಾಪ್ನ ಕಾರಣದಿಂದಾಗಿ ಈ ರೀತಿ ಆಯಿತು’ ಎಂದು ಪವನ್ ಕುಮಾರ್ ಕಾರಣ ನೀಡಿದ್ದಾರೆ.
‘ನಾನು ಪ್ರೇಕ್ಷಕರ ಜಾಗದಲ್ಲಿ ಇದ್ದಿದ್ದರೆ ನನಗೂ ಕೂಡ ಪೋಸ್ಟರ್ ಬಗ್ಗೆ ಕಾಪಿ ಎಂಬ ಅಭಿಪ್ರಾಯ ಮೂಡುವುದು ಸಹಜ. ಇಂದಿಗೂ ನಮ್ಮ ಸ್ಕ್ರಿಪ್ಟ್ ಮೇಲೆ ನಮಗೆ ನಂಬಿಕೆ ಇದೆ. ಪೋಸ್ಟರ್ ಬಿಡುಗಡೆ ಆದ ನಂತರ ಕಾಪಿ ಎಂಬುದನ್ನೇ ಇಟ್ಟುಕೊಂಡು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಮಾಡಿದರು. ನೆಗೆಟಿವಿಟಿ ಯಾಕೆ ಹೆಚ್ಚು ಹರಡುತ್ತದೆ ಎಂಬುದು ನನಗೆ ಅರ್ಥ ಆಗುತ್ತಿಲ್ಲ’ ಎಂದಿದ್ದಾರೆ ಪವನ್.
‘ಇನ್ಮುಂದೆ ಪೋಸ್ಟರ್ ವಿನ್ಯಾಸಕರು ಈ ರೀತಿ ಲೈಸೆನ್ಸ್ ಇರುವ ಸ್ಟಾಕ್ ಇಮೇಜ್ಗಳನ್ನು ಬಳಸಿಕೊಂಡಿದ್ದರೆ ದಯವಿಟ್ಟು ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಮೊದಲೇ ತಿಳಿಸಿ. ಆಗ ಇಂಥ ದುರದೃಷ್ಟಕರ ಸಂಗತಿಯನ್ನು ತಪ್ಪಿಸಬಹುದು. ಇದು ಈಗ ನಾನು ಕಲಿತ ಪಾಠ. ನಾನೇ ಕಾಪಿ ಮಾಡಿಸಿದ್ದೇನೆ ಅಂತ ತುಂಬ ಜನರು ಅಂದುಕೊಂಡಿದ್ದಾರೆ. ಆದರೆ ಅದು ಸತ್ಯವಲ್ಲ. ಆದರ್ಶ್ ಮೇಲೆ ನಮಗೆ ನಂಬಿಕೆ ಇದೆ. ಶೂಟಿಂಗ್ ಶುರು ಮಾಡುವುದರೊಳಗೆ ಅವರು ಇನ್ನೂ ಒಳ್ಳೆಯ ಪೋಸ್ಟರ್ ವಿನ್ಯಾಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಯಾರಿಗಾದರೂ ಬೇಜಾರು ಆಗಿದ್ದರೆ ಕ್ಷಮಿಸಿ’ ಎಂದು ಪವನ್ ಅವರು ವಿಡಿಯೋ ಮೂಲಕ ಹೇಳಿದ್ದಾರೆ.
‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ನಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಅವರು ದ್ವಿತ್ವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಇದನ್ನೂ ಓದಿ:
‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಸತ್ಯ ಪ್ರಕಾಶ್
ಪುನೀತ್ ರಾಜ್ಕುಮಾರ್ ಸಿನಿಮಾ ಹಾಡನ್ನು ಮಧುರವಾಗಿ ಹಾಡಿದ ಕೊರಿಯಾ ಯುವತಿ