ಪುನೀತ್ ರಾಜ್ಕುಮಾರ್ ಅವರನ್ನು ಕರ್ನಾಟಕದ ಜನರು ಮನೆ ಮಗನಂತೆ ಪ್ರೀತಿಸುತ್ತಿದ್ದರು. ಮಹಿಳೆಯರಿಗೂ ಅಪ್ಪು ಮೇಲೆ ಅಪಾರ ಅಭಿಮಾನ. ಕೌಟುಂಬಿಕ ಪ್ರೇಕ್ಷಕರು ಪುನೀತ್ ನಟನೆಯ ಸಿನಿಮಾಗಳನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು. ಆದರೆ ಈಗ ಇಡೀ ಕನ್ನಡ ಚಿತ್ರರಂಗಕ್ಕೆ ಕತ್ತಲು ಆವರಿಸಿದೆ. ಪುನೀತ್ ರಾಜ್ಕುಮಾರ್ ನಿಧನದಿಂದ ಅವರ ಇಡೀ ಕುಟುಂಬ ಮತ್ತು ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ಇಂದು (ನ.1) ಪುನೀತ್ ಸ್ಮರಣಾರ್ಥ ‘ರಾಜಕುಮಾರ’ ಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿ ಹೊರಬಂದ ಮಹಿಳೆಯರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಬೆಂಗಳೂರಿನ ‘ಶ್ರೀನಿವಾಸ’ ಚಿತ್ರಮಂದಿರದಲ್ಲಿ ‘ರಾಜಕುಮಾರ’ ಸಿನಿಮಾ ವೀಕ್ಷಣೆ ನಂತರ ಮಹಿಳಾ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಅಪ್ಪು ಬೇಕು ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ. ‘ನಾನು ಚಾಮುಂಡೇಶ್ವರಿಗೆ ಪೂಜೆ ಮಾಡ್ತಿದ್ದೆ. ಚಾಮುಂಡೇಶ್ವರಿ ಇಲ್ಲ. ನನ್ನ ಮಗ ಸತ್ತರೂ ಕೂಡ ನನಗೆ ಇಷ್ಟು ಬೇಜಾರು ಆಗುತ್ತಿರಲಿಲ್ಲ. ನನ್ನ ಮಗನ ಚಿತ್ರ ವೀಕ್ಷಣೆ ಮಾಡಲು ನಾನು ನೀರು ಕುಡಿಯದೆ ಶ್ರೀನಿವಾಸ ಥಿಯೇಟರ್ಗೆ ಬಂದಿದ್ದೆ’ ಎಂದು ಮಹಿಳಾ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಕನ್ನಡಿಗರ ಪಾಲಿಗೆ ಇದೊಂದು ಸಂದಿಗ್ಧ ಪರಿಸ್ಥಿತಿ. ಒಂದು ಕಡೆ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವು ಎದುರಾಗಿದೆ. ಇನ್ನೊಂದು ಕಡೆ ಕನ್ನಡ ರಾಜ್ಯೋತ್ಸವ ಕೂಡ ಬಂದಿದೆ. ಬಂಗಾರದಂತಹ ಮನುಷ್ಯನನ್ನು ಕಳೆದುಕೊಂಡಿದ್ದಕ್ಕೆ ಅಳಬೇಕೋ ಅಥವಾ ನೋವು ಬದಿಗಿಟ್ಟು ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕೋ ತಿಳಿಯುತ್ತಿಲ್ಲ. ಪುನೀತ್ ಅವರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ಇದ್ದ ಗೌರವ ಅಪಾರ.
ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ (ಅ.31) ಮುಂಜಾನೆ ನೆರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಣ್ಣ ಶಿವರಾಜ್ಕುಮಾರ್, ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಪುನೀತ್ ಅವರಿಗೆ ಗಂಡು ಮಕ್ಕಳಿಲ್ಲ. ಆ ಕಾರಣದಿಂದ ಅವರ ಸಹೋದರ ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರ ವಿನಯ್ ರಾಜ್ಕುಮಾರ್ ಅವರಿಂದ ಅಂತಿಮ ವಿಧಿವಿಧಾನಗಳನ್ನು ಮಾಡಿಸಲಾಯಿತು. ಬಳಿಕ ಪುನೀತ್ ಪುತ್ರಿಯರು ಅಪ್ಪನ ಸಮಾಧಿಗೆ ಪೂಜೆ ಸಲ್ಲಿಸಿದರು.
‘ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಲೇ ಇದ್ದಾರೆ. ಆದರೆ ಸಮಾಧಿ ನೋಡಲು ಯಾರಿಗೂ ಈಗ ಅವಕಾಶ ಇಲ್ಲ. ಇನ್ನೂ ಮೂರು ದಿನ ಕಳೆದ ಬಳಿಕ ಅವಕಾಶ ಮಾಡಿಕೊಡುತ್ತೇವೆ. ಮಂಗಳವಾರ (ನ.2) ಹಾಲು-ತುಪ್ಪ ಕಾರ್ಯ ಇದೆ. ಮಕ್ಕಳು ಮತ್ತು ಮನೆಯವರಿಂದ ಅದನ್ನು ಮಾಡಿಸಬೇಕು. ಅದೊಂದು ಕಾರ್ಯ ಮುಗಿಸಿದ ಬಳಿಕವೇ ಬೇರೆಯವರಿಗೆ ಅನುಮತಿ ನೀಡೋಣ ಅಂತ ತೀರ್ಮಾನಿಸಿದ್ದೇವೆ’ ಎಂದು ರಾಘಣ್ಣ ಹೇಳಿದ್ದಾರೆ.
ಇದನ್ನೂ ಓದಿ:
Puneeth Rajkumar: ಅಶ್ಲೀಲ ಪದಗಳಿಂದ ಪುನೀತ್ಗೆ ಅವಮಾನ; ಜನರಿಗೆ ಮನುಷ್ಯತ್ವ ಇಲ್ವಾ? ಸುದೀಪ್ ಪುತ್ರಿ ಸಾನ್ವಿ ಗರಂ