ಬೆಂಗಳೂರು: ಪುನೀತ್ ರಾಜ್ಕುಮಾರ್ (Puneeth Rajkumar) ನಾಯಕನಾಗಿ ಕಾಣಿಸಿಕೊಂಡಿರುವ ಕೊನೆಯ ಚಿತ್ರ ‘ಜೇಮ್ಸ್’. ಹೀಗಾಗಿ ಇದರ ಮೇಲೆ ಎಲ್ಲರಿಗೆ ವಿಶೇಷ ಪ್ರೀತಿಯಿದೆ. ಪುನೀತ್ ಹುಟ್ಟುಹಬ್ಬದ ದಿನವಾದ ಮಾರ್ಚ್ 17ರಂದು ‘ಜೇಮ್ಸ್’ (James) ವಿಶ್ವದೆಲ್ಲೆಡೆ ರಿಲೀಸ್ ಆಗಲಿದೆ. ಈ ಸಂಭ್ರಮವನ್ನು ಆಚರಿಸಲು ಅಭಿಮಾನಿಗಳು ಹಬ್ಬದಂತೆ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಇಂದು (ಮಾ.13) ಪ್ರಿ- ರಿಲೀಸ್ ಈವೆಂಟ್ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು, ಹಲವು ತಾರೆಗಳು ಭಾಗಿಯಾಗಲಿದ್ದಾರೆ. ಸಂಜೆ 7ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಇದಕ್ಕೆ ತಯಾರಿ ಹೇಗಿದೆ? ಕಾರ್ಯಕ್ರಮದಲ್ಲಿ ಪಾಸ್ ವ್ಯವಸ್ಥೆ ಹೇಗೆ? ಈವೆಂಟ್ನಲ್ಲಿ ಭಾಗಿಯಾಗುವ ತಾರೆಯರು ಯಾರ್ಯಾರು? ಈ ಎಲ್ಲಾ ಮಾಹಿತಿ ಇಲ್ಲಿದೆ.
‘ಜೇಮ್ಸ್’ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಪುನೀತ್ಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಈ ಎಲ್ಲಾ ಕಾರಣದಿಂದ ಅರಮನೆ ಮೈದಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಿ-ರಿಲೀಸ್ ಈವೆಂಟ್ಗೆ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. 5,000 ಅಭಿಮಾನಿಗಳಿಗೆ ಪ್ಯಾಲೇಸ್ ಗ್ರೌಂಡ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವ್ಯವಸ್ಥೆಯಾಗಬಾರದು ಎಂಬ ಕಾರಣದಿಂದ ಪಾಸ್ ವ್ಯವಸ್ಥೆ ಮಾಡಲಾಗಿದೆ. 1 ಪಾಸ್ನಲ್ಲಿ ಇಬ್ಬರಿಗೆ ಮಾತ್ರ ಕಾರ್ಯಕ್ರಮ ವೀಕ್ಷಿಸಲು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈವೆಂಟ್ಗಾಗಿ 100/40 ಅಳತೆಯ ಬೃಹತ್ ಸ್ಟೇಜ್ ಸಿದ್ಧವಾಗಿದೆ. ಸ್ಟೇಜ್ ಮೇಲೆ ದೊಡ್ಡದಾದ ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಮುಕ್ತ ಅವಕಾಶವಿದ್ದು, ಈಗಾಗಲೇ ಅಭಿಮಾನಿಗಳಿಗಾಗಿ 2500 ಪಾಸ್ ನೀಡಲಾಗಿದೆ. ಒಟ್ಟು 5,000 ಅಭಿಮಾನಿಗಳಿಗೆ ಪ್ರವೇಶ ಸಿಗಲಿದೆ. ಇದಲ್ಲದೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 18 ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. ಇದರಿಂದ ಕಾರ್ಯಕ್ರಮ ವೀಕ್ಷಣೆ ಮತ್ತಷ್ಟು ಸುಲಭವಾಗಲಿದೆ.
‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ಗೆ ಯಾರೆಲ್ಲಾ ಸಾಕ್ಷಿಯಾಗಲಿದ್ದಾರೆ?
‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ ಅನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇದರಲ್ಲಿ ದೊಡ್ಮನೆ ಕುಟುಂಬ ಭಾಗಿಯಾಗಲಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಉಪಸ್ಥಿತರಿರಲಿದ್ದಾರೆ. ವಿನಯ್ ರಾಜ್ ಕುಮಾರ್, ಗುರು ರಾಘವೇಂದ್ರ, ಧೀರನ್ ರಾಮ್‌ಕುಮಾರ್, ಧನ್ಯ ರಾಮ್ ಕುಮಾರ್ ಹಾಗೂ ಕುಟುಂಬ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸ್ಯಾಂಡಲ್ವುಡ್ ತಾರೆಯರಾದ ಉಪೇಂದ್ರ, ಶ್ರೀ ಮುರಳಿ, ಚರಣ್ ರಾಜ್ ಮೊದಲಾದವರು ಕೂಡ ಇರಲಿದ್ದಾರೆ.
ಬಹುಭಾಷಾ ತಾರೆಯರಾದ ಶ್ರೀಕಾಂತ್ ಮೆಕಾ, ಶರತ್ ಕುಮಾರ್ ಮೊದಲಾದವರು ಉಪಸ್ಥಿತರಿರಲಿದ್ದಾರೆ. ‘ಜೇಮ್ಸ್’ ನಾಯಕಿ ಪ್ರಿಯಾ ಆನಂದ್ ಹಾಗೂ ಸಂಪೂರ್ಣ ‘ಜೇಮ್ಸ್’ ಚಿತ್ರತಂಡ ಕಾರ್ಯಕ್ರಮದಲ್ಲಿ ಇರಲಿದ್ದಾರೆ.
ಮಾರ್ಚ್ 17ರಂದು ‘ಜೇಮ್ಸ್’ ತೆರೆಗೆ:
ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ‘ಜೇಮ್ಸ್’ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಈ ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದು, ಈಗಾಗಲೇ ರಿಲೀಸ್ ಆಗಿರುವ ಹಾಡುಗಳು, ಟೀಸರ್ ಮೋಡಿ ಮಾಡಿವೆ. ಪುನೀತ್ಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಚಿಕ್ಕಣ್ಣ, ಗಜಪಡೆ ಹರ್ಷ, ತಿಲಕ್ ಶೇಖರ್ ಅವರು ಹೀರೋ ಸ್ನೇಹಿತರ ಪಾತ್ರ ಮಾಡಿದ್ದಾರೆ. ಶ್ರೀಕಾಂತ್ ಮುಕೇಶ್ ರಿಷಿ, ಅನು ಪ್ರಭಾಕರ್, ಆದಿತ್ಯ ಮೆನನ್, ಸಾಧುಕೋಕಿಲ, ರಂಗಾಯಣ ರಘು ಸೇರಿ ಹಲವಾರು ಕಲಾವಿದರು ನಟಿಸಿದ್ದಾರೆ. ರವಿ ಸಂತೆ ಹಕ್ಲು ಕಲಾ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ಸ್ವಾಮಿ ಜೆ. ಛಾಯಾಗ್ರಹಣ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ಗೆ ಶಿವರಾಜ್ಕುಮಾರ್ ಕಂಠದಾನ ಮಾಡಿದ್ದಾರೆ.
ಇದನ್ನೂ ಓದಿ:
Puneeth Rajkumar: ಡಾ.ರಾಜ್ ಹಾದಿಯಲ್ಲಿ ಅಪ್ಪು; ಮೈಸೂರು ವಿವಿಯಿಂದ ಪುನೀತ್ಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆ
100 ಎಕರೆ ಜಾಗದಲ್ಲಿ RRR ಪ್ರೀ-ರಿಲೀಸ್ ಇವೆಂಟ್ಗೆ ಸಿದ್ಧತೆ; ಅತಿಥಿಯಾಗಿ ಬರ್ತಾರೆ ಸಿಎಂ ಬೊಮ್ಮಾಯಿ, ಶಿವಣ್ಣ