Puneeth Rajkumar: ಕನ್ನಡಿಗರ ಕಣ್ಮಣಿ ನಮ್ಮ ಅಪ್ಪು ಇನ್ಮುಂದೆ, ಡಾಕ್ಟರ್ ಪುನೀತ್ ರಾಜ್‍ಕುಮಾರ್..!
University of Mysuru | Dr Rajkumar: ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಪುನೀತ್ ರಾಜ್ಕುಮಾರ್ ಅವರ ಕೊಡುಗೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯವು ಅಪ್ಪುಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ವಿಶೇಷವೆಂದರೆ ಡಾ.ರಾಜ್ ಕೂಡ ಈ ಹಿಂದೆ ಮೈಸೂರು ವಿವಿಯಿಂದ ಇದೇ ಗೌರವ ಪಡೆದಿದ್ದರು. ಈ ಕುರಿತ ವಿಶೇಷ ಸಚಿತ್ರ- ಬರಹ ಇಲ್ಲಿದೆ.
ಅಪ್ಪು ಅಂದ್ರೆ ವಿಸ್ಮಯ.. ಅಪ್ಪು ಅಂದ್ರೆ ಆಕಾಶ, ಅಪ್ಪು ಅಂದ್ರೆ ಅನರ್ಘ್ಯ. ಅಪ್ಪು….. ಅಪ್ಪು… ಅಪ್ಪು….! ಅಪ್ಪು, ಪದಗಳಿಗೆ ನಿಲುಕದ ಮರೆಯಲಾಗದ ಮಾಣಿಕ್ಯ. ಅಪ್ಪು (Appu) ಇದೀಗ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಅಪ್ಪನಿಗೆ ಗೌರವ ಡಾಕ್ಟರೇಟ್ ನೀಡಿದ ಪ್ರತಿಷ್ಠಿತ ಮೈಸೂರು ವಿವಿಯಿಂದಲೇ (University of Mysuru) ಅಪ್ಪು ಸಹಾ ಗೌರವ ಡಾಕ್ಟರೇಟ್ ಪಡೆಯುತ್ತಿದ್ದಾರೆ. ಮೈಸೂರು ವಿವಿ 2022ರ ಸಾಲಿನ ಗೌರವ ಡಾಕ್ಟರೇಟ್‌ನ್ನು ಮರಣೋತ್ತರವಾಗಿ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ನೀಡುತ್ತಿದೆ. ಈ ಹಿಂದೆ ಪುನೀತ್ ರಾಜ್ಕುಮಾರ್ ನಯವಾಗಿಯೇ ಗೌರವ ಡಾಕ್ಟರೇಟ್ ನಿರಾಕರಿಸಿದ್ದರು. ಹೌದು. ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಈ ಹಿಂದೆ ಸಹಾ ಹಲವರು ಗೌರವ ಡಾಕ್ಟರೇಟ್ ನೀಡಲು ಮುಂದಾಗಿದ್ದರು. ಆದರೆ ಪುನೀತ್ ಅದನ್ನು ನಯವಾಗಿಯೇ ನಿರಾಕರಿಸಿದ್ದರು. ಅಷ್ಟಕ್ಕೆ ಸುಮ್ಮನಾಗದೆ ವರನಟ ಡಾ. ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದನ್ನು ಉಲ್ಲೇಖಿಸಿ ಡಾಕ್ಟರೇಟ್ ಪಡೆಯಲು ಒತ್ತಾಯಿಸಿದ್ದರು. ಆದರೆ ಅದು ಸಹಾ ಯಾವುದೇ ಪ್ರಯೋಜನಕ್ಕೆ ಬಂದಿರಲಿಲ್ಲ. ಅವರದ್ದೇ ತೂಕ ಬೇರೆ. ನನ್ನದು ಬೇರೆ. ಪ್ರಶಸ್ತಿ ಸ್ವೀಕರಿಸುವ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ ಎಂದು ವಿನಯಪೂರ್ವಕವಾಗಿಯೇ ಗೌರವ ಡಾಕ್ಟರೇಟ್ ಗೌರವವನ್ನು ಅಪ್ಪು ಪಡೆದಿರಲಿಲ್ಲ.
ಕೊನೆಗೂ ಸಫಲವಾದ ಮೈಸೂರು ವಿವಿ:
ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಪುನೀತ್ ರಾಜ್ ಕುಮಾರ್ ಅವರಿಗೆ 2022ರ ಸಾಲಿನಲ್ಲಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಪುನೀತ್ ಅವರ ಸಾಧನೆ, ಸಮಾಜಮುಖಿ ಕೆಲಸ ಗುರುತಿಸಿ ಮರಣೋತ್ತರವಾಗಿ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಈ ಹಿಂದೆ ಹಲವು ಬಾರಿ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರೇ ಖುದ್ದು ಬೆಂಗಳೂರು ಸದಾಶಿವನಗರದ ಪುನೀತ್ ನಿವಾಸಕ್ಕೆ ತೆರಳಿದ್ದರು. ಪುನೀತ್ ಮಡದಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ತಿಳಿಸಿದರು. ಆ ವೇಳೆ ಅಶ್ವಿನಿ ಈ ಹಿಂದೆ ಪುನೀತ್ ತಳೆದಿದ್ದ ನಿಲುವಿನ ಬಗ್ಗೆ ತಿಳಿಸಿದರು. ಕೊನೆಗೂ ಅಶ್ವಿನಿಯವರನ್ನು ಒಪ್ಪಿಸಿದ ಪ್ರೊ.ಹೇಮಂತ್ ಕುಮಾರ್ ಕಾರ್ಯಕ್ರಮದ ಪತ್ರ ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಮಂತ್ರಿಸಿದರು.
46 ವರ್ಷಗಳ ಹಿಂದೆ ವರನಟ ಡಾ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್:
46 ವರ್ಷಗಳ ಹಿಂದೆ ಮೈಸೂರು ವಿವಿ ಡಾ ರಾಜ್‌ಕುಮಾರ್ ಅವರಿಗೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. 46 ವರ್ಷದ ಹಿಂದೆ ಅಂದರೆ 1976 ಫೆಬ್ರವರಿ 8 ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಎಲ್ಲೆಡೆ ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಸರಳ ಸುಂದರ ವೇದಿಕೆ ಸಿದ್ದಪಡಿಸಲಾಗಿತ್ತು. ಅದು ಜನರ ಹಬ್ಬವಾಗಿತ್ತು ಹೀಗಾಗಿ ಜನರು ಕಿಕ್ಕಿರಿದು ತುಂಬಿದ್ದರು. ಅದು ನಾಡು ಕಂಡ ಅಪರೂಪದಲ್ಲಿ ಅಪರೂಪದ ನಟ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಕಾರ್ಯಕ್ರಮ. ಅಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. ವಿಶೇಷ ಅಂದರೆ ಇದಾದ ನಂತರ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕಾರ್ಯಕ್ರಮ ಮೈಸೂರು ವಿವಿಯ ಕ್ರಾಫರ್ಡ್ ಹಾಲ್‌ಗೆ ಸ್ಥಳಾಂತರವಾಯಿತು.
ಅಪ್ಪು @ 46 ಹಾಗೂ ಮೈಸೂರು ವಿ ವಿ..!
ಮೈಸೂರು ವಿವಿಯಿಂದ ಮರಣೋತ್ತರ ಗೌರವ ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿರುವ ಅಪ್ಪು ಹಲವು ವಿಶೇಷತೆಗೆ ಕಾರಣರಾಗಿದ್ದಾರೆ. ಅಪ್ಪನಿಗೆ ಗೌರವ ಡಾಕ್ಟರೇಟ್ ನೀಡಿದ ಪ್ರತಿಷ್ಠಿತ ಮೈಸೂರು ವಿವಿಯಿಂದಲೇ ಅಪ್ಪು ಸಹಾ ಗೌರವ ಡಾಕ್ಟರೇಟ್ ಪಡೆಯುತ್ತಿರುವುದು ಒಂದು ವಿಶೇಷ. ಡಾ ರಾಜ್ ಅವರು 46 ವರ್ಷ ವಯಸ್ಸಿನವರಾಗಿದ್ದಾಗ ಅಪ್ಪು ಜನಿಸಿದ್ದರು. ಇದೀಗ 46 ವರ್ಷದ ಪುನೀತ್ ಅವರಿಗೆ, ಡಾ ರಾಜ್‌ಗೆ ಗೌರವ ಡಾಕ್ಟರೇಟ್ ನೀಡಿದ 46 ವರ್ಷದ ನಂತರ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡುತ್ತಿರುವುದು ಮತ್ತೊಂದು ವಿಶೇಷ.
ಇದರ ಜೊತೆಗೆ 46 ವರ್ಷದ ಹಿಂದೆ ಅಪ್ಪು ಹುಟ್ಟಿದಾಗ ಅಂದರೆ 1976ರಲ್ಲಿ ಅಪ್ಪ ಡಾ ರಾಜ್ ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಆಗ ಡಾ ರಾಜ್ ಅವರ ವಯಸ್ಸು 46 ಆಗಿತ್ತು. ಇನ್ನು 46 ವರ್ಷದ ನಂತರ ಅಪ್ಪು ಮರಣಿಸಿರುವಾಗ ಅಪ್ಪುಗೆ ಮೈಸೂರು ವಿವಿಯಿಂದ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಕಾಕತಾಳೀಯ ಅಂದ್ರೆ ಅಪ್ಪನಿಗೆ ಗೌರವ ಸಿಕ್ಕ 46 ವರ್ಷದ ನಂತರ ಅಂದರೆ 2022ರಲ್ಲಿ ಅದೇ ಗೌರವಕ್ಕೆ ಪಾತ್ರರಾಗುತ್ತಿರುವ ಅಪ್ಪು ವಯಸ್ಸು ಸಹಾ 46.
ಮೈಸೂರು ವಿವಿ ವಿಸಿ ಪ್ರೊ ಹೇಮಂತ್ ಕುಮಾರ್ ಹೇಳಿದ್ದೇನು?
ಕರ್ನಾಟಕದ ಹೆಮ್ಮೆ ನಟ ಪುನೀತ್ ರಾಜ್ ಕುಮಾರ್, ಓರ್ವ ನಟ ಎಂಬುದಕ್ಕಿಂತ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಗುಡ್ ಹ್ಯೂಮನ್ ಬೀಯಿಂಗ್. ಅತ್ಯಂತ ಕಿರಿಯ ವಯಸ್ಸಿನಲ್ಲೇ ಅವರ ಸಾಧನೆ, ಜನಪ್ರಿಯತೆ ಅಪಾರ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಪುನೀತ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡುವ ತೀರ್ಮಾನ ಕೈಗೊಂಡಿತು. ಈ ಸಂಬಂಧ ಪುನೀತ್ ಅವರ ಮಡದಿ ಅಶ್ವಿನಿ ಅವರನ್ನು ಶನಿವಾರ ಖುದ್ದು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು. ಈ ವೇಳೆ, ಹಿಂದೆ ಹಲವಾರು ಬಾರಿ ಅವರಿಗೆ ಗೌರವ ಡಾಕ್ಟರೇಟ್ ನೀಡುವ ವಿಷಯ ಪ್ರಸ್ತಾಪವಾಗಿತ್ತು. ಆಗೆಲ್ಲಾ ಅವರು ಅದನ್ನು ನಯವಾಗಿಯೇ ನಿರಾಕರಿಸಿದ್ದರು. ತಂದೆಯವರಿಗೆ ನೀಡಿದ್ದ ಸಂಗತಿ ಹೇಳಿದಾಗಲೂ ಅಷ್ಟೆ, ಅವರದ್ದೇ ತೂಕ ಬೇರೆ. ನನ್ನದು ಬೇರೆ. ಪ್ರಶಸ್ತಿ ಸ್ವೀಕರಿಸುವ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ ಎಂದೇ ವಿನಯಪೂರ್ವಕವಾಗಿಯೇ ಅದನ್ನು ನಿರಾಕರಿಸುತ್ತಿದ್ದರು. ಈ ಘಟನೆಯನ್ನು ಸ್ಮರಿಸಿಕೊಂಡು ಅಶ್ವಿನಿ ಗದ್ಗದಿತರಾದರು. ಅದರೂ ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದಾರೆ. ಅವರೇ ಖುದ್ದು ಬಂದು ಗೌರವ ಸ್ವೀಕರಿಸಲಿದ್ದಾರೆ.
ಇದೇ ತಿಂಗಳು ಕಾರ್ಯಕ್ರಮ
ಇದೇ ತಿಂಗಳು ಅಂದರೆ ಮಾರ್ಚ್ 22 ರಂದು ಮೈಸೂರು ವಿವಿಯ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪುನೀತ್ ಪತ್ನಿ ಅಶ್ವಿನಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಗೌರವ ಸಮರ್ಪಿಸಲಿದ್ದಾರೆ. ಇದರ ಜೊತೆಗೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಮೈಸೂರು ವಿವಿ ಸಾಕ್ಷಿಯಾಗಲಿದೆ. ಇನ್ನು ಪುನೀತ್ ಅವರಿಗೆ ಮೈಸೂರು ವಿವಿಯ ಗೌರವ ಡಾಕ್ಟರೇಟ್ ಸಿಕ್ಕಿರುವುದು ಮೈಸೂರು ವಿವಿಯ ಡಾಕ್ಟರೇಟ್ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.
ವಿಶೇಷ ಬರಹ: ರಾಮ್ ಟಿವಿ9 ಮೈಸೂರು
ಇದನ್ನೂ ಓದಿ:
Puneeth Rajkumar: ಡಾ.ರಾಜ್ ಹಾದಿಯಲ್ಲಿ ಅಪ್ಪು; ಮೈಸೂರು ವಿವಿಯಿಂದ ಪುನೀತ್ಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆ
Bairagee: ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ; ‘ಜೇಮ್ಸ್’ ಜತೆಗೆ ಪ್ರದರ್ಶನವಾಗಲಿದೆ ‘ಬೈರಾಗಿ’ ಟೀಸರ್!