ಲಕ್ಷ್ಮಿ ಪಾತ್ರಕ್ಕೆ ರಮ್ಯಾ, ಅಣ್ಣಾವ್ರ ಪಾತ್ರಕ್ಕೆ ಪುನೀತ್; ನಿಜವಾಗಲಿಲ್ಲ ‘ನಾ ನಿನ್ನ ಮರೆಯಲಾರೆ’ ಕನಸು
Puneeth Rajkumar | Naa Ninna Mareyalare: ‘ನಾ ನಿನ್ನ ಮರೆಯಲಾರೆ’ ಚಿತ್ರವನ್ನು ರೀ-ಕ್ರಿಯೇಟ್ ಮಾಡುವ ಬಗ್ಗೆ ಪುನೀತ್ ರಾಜ್ಕುಮಾರ್ ಕನಸು ಕಂಡಿದ್ದರು. ಈ ಕುರಿತು ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡದ ಸಿನಿಮಾ ಪ್ರೇಕ್ಷಕರು ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಮಿಸ್ ಮಾಡಿಕೊಳ್ಳದ ದಿನವೇ ಇಲ್ಲ. ಪ್ರತಿ ದಿನ ಒಂದಿಲ್ಲೊಂದು ರೂಪದಲ್ಲಿ ಅಪ್ಪು ಸ್ಮರಣೆ ಮಾಡಲಾಗುತ್ತದೆ. ಎಲ್ಲ ಸಿನಿಮಾ ಕಾರ್ಯಕ್ರಮಗಳಲ್ಲೂ ‘ಪವರ್ ಸ್ಟಾರ್’ ಹೆಸರು ಬಂದೇ ಬರುತ್ತದೆ. ಕಳೆದ ವರ್ಷ ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ. ನಿಧನಕ್ಕೂ ಮುನ್ನ ಅಪ್ಪು ಅನೇಕ ಕನಸುಗಳನ್ನು ಕಂಡಿದ್ದರು. ಅವುಗಳ ಬಗ್ಗೆ ಈಗ ಒಂದೊಂದಾಗಿಯೇ ತಿಳಿಯುತ್ತಿದೆ. ಅಚ್ಚರಿ ಎಂದರೆ, ನಟಿ ರಮ್ಯಾ (Ramya Divya Spandana) ಜೊತೆ ‘ನಾ ನಿನ್ನ ಮರೆಯಲಾರೆ’ (Naa Ninna Mareyalare) ಸಿನಿಮಾವನ್ನು ರೀ-ಕ್ರಿಯೇಟ್ ಮಾಡುವ ಆಸೆ ಅವರಿಗೆ ಇತ್ತು. ಆ ಕುರಿತು ಈಗ ವಿಷಯ ಹೊರಬಿದ್ದಿದೆ. ಆದರೆ ಕಾಲ ಮಿಂಚಿ ಹೋಗಿದೆ.
ಡಾ. ರಾಜ್ಕುಮಾರ್ ಅಭಿನಯದ ‘ನಾ ನಿನ್ನ ಮರೆಯಲಾರೆ’ ಸಿನಿಮಾ 1976ರಲ್ಲಿ ಬಿಡುಗಡೆ ಆಯಿತು. ನಾಯಕಿಯಾಗಿ ಲಕ್ಷ್ಮಿ ನಟಿಸಿದ್ದರು. ಪ್ರೇಕ್ಷಕರ ಫೇವರಿಟ್ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಇಂದಿಗೂ ಸ್ಥಾನವಿದೆ. ಈ ಸಿನಿಮಾವನ್ನು ಈಗಿನ ಕಾಲಕ್ಕೆ ತಕ್ಕಂತೆ ರೀಕ್ರಿಯೇಟ್ ಮಾಡಬೇಕು ಎಂಬುದು ಪುನೀತ್ ರಾಜ್ಕುಮಾರ್ ಅವರ ಆಸೆ ಆಗಿತ್ತು. ಲಕ್ಷ್ಮಿ ಮಾಡಿದ್ದ ಪಾತ್ರಕ್ಕೆ ರಮ್ಯಾ, ಅಣ್ಣಾವ್ರ ಪಾತ್ರಕ್ಕೆ ಪುನೀತ್ ಬಣ್ಣ ಹಚ್ಚಬೇಕಿತ್ತು. ಆದರೆ ಆ ಕನಸು ಕನಸಾಗಿಯೇ ಉಳಿಯುವಂತಾಗಿದ್ದು ಬೇಸರದ ಸಂಗತಿ.
ಪುನೀತ್ ರಾಜ್ಕುಮಾರ್ ಅವರು ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ. ಚಿತ್ರದ ಬಿಡುಗಡೆ ಹೊಸ್ತಿಲಿನಲ್ಲಿ ‘ಸಿನಿಮಾ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ‘ನಾ ನಿನ್ನ ಮರೆಯಲಾರೆ’ ರೀ-ಕ್ರಿಯೇಟ್ ವಿಚಾರದ ಬಗ್ಗೆ ಹೇಳಿದ್ದಾರೆ. ಅಪ್ಪು ಅವರು ಈ ರೀತಿ ಕನಸು ಕಂಡಿದ್ದರು ಎಂಬುದನ್ನು ಕೃಷ್ಣ ತಿಳಿಸಿದ್ದಾರೆ.
This is true- Appu and I had spoken about it too. We all miss him dearly. Best wishes to @darlingkrishnaa and the team of #Luckyman https://t.co/7llbmVXXqp
— Divya Spandana/Ramya (@divyaspandana) September 7, 2022
ಈ ವಿಚಾರದ ಕುರಿತು ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ನಿಜ. ಅಪ್ಪು ಮತ್ತು ನಾನು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ಅವರನ್ನು ನಾವು ತುಂಬ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ‘ಲಕ್ಕಿ ಮ್ಯಾನ್’ ಚಿತ್ರತಂಡಕ್ಕೆ ಹಾಗೂ ಡಾರ್ಲಿಂಗ್ ಕೃಷ್ಣ ಅವರಿಗೆ ರಮ್ಯಾ ಶುಭ ಹಾರೈಸಿದ್ದಾರೆ. ‘ಅಭಿ’, ‘ಅರಸು’, ‘ಆಕಾಶ್’ ಸಿನಿಮಾದಲ್ಲಿ ರಮ್ಯಾ ಮತ್ತು ಪುನೀತ್ ಜೊತೆಯಾಗಿ ನಟಿಸಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಮನೆ ಮಾಡಿತ್ತು. ರಮ್ಯಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಲಿ ಎಂದು ಪುನೀತ್ ಬಯಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 am, Fri, 9 September 22