ದರ್ಶನ್ ಭೇಟಿಗೆ ಬಂದು ನಿರಾಸೆಯಿಂದ ವಾಪಸ್ ಹೋದ ರಚಿತಾ ರಾಮ್: 2 ಗಂಟೆ ಕಾದರೂ ಸಿಗಲಿಲ್ಲ ಅವಕಾಶ
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚುರುಕುಗೊಂಡಿದೆ. ಪ್ರದೋಷ್ ಮಾಫಿಸಾಕ್ಷಿ ಆದ ಬಳಿಕ ದರ್ಶನ್ ಅವರಿಗೆ ಚಿಂತೆ ಹೆಚ್ಚಾಗಿದೆ. ಹಾಗಾಗಿ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಭೇಟಿಯಾಗಲು ಅವರು ಒಪ್ಪುತ್ತಿಲ್ಲ. ಇಂದು (ಅಕ್ಟೋಬರ್ 1) ದರ್ಶನ್ ಭೇಟಿ ಮಾಡಲು ಬಂದಿದ್ದ ರಚಿತಾ ರಾಮ್ ಅವರು ನಿರಾಸೆಯಿಂದ ವಾಪಸ್ ತೆರಳಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಬಂದಿದ್ದ ನಟಿ ರಚಿತಾ ರಾಮ್ ಅವರಿಗೆ ತೀವ್ರ ನಿರಾಸೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಜೈಲಿನ ಆವರಣದಲ್ಲಿ ಕಾದಿದ್ದರೂ ದರ್ಶನ್ ಅವರನ್ನು ಭೇಟಿಯಾಗಲು ಅವರಿಗೆ ಅವಕಾಶ ಸಿಗಲಿಲ್ಲ. ಈ ವರ್ಷ ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ದರ್ಶನ್ ಅವರನ್ನು ಭೇಟಿ ಆಗಬೇಕು ಎಂಬುದು ರಚಿತಾ ಅವರ ಆಸೆ ಆಗಿತ್ತು. ಆದರೆ ಅದು ಈಡೇರಿಲ್ಲ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ ರಚಿತಾ ರಾಮ್ ಅವರು ದರ್ಶನ್ ಅವರನ್ನು ಭೇಟಿ ಮಾಡಲು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು. ಜೈಲಾಧಿಕಾರಿಗಳು ಈ ವಿಚಾರವನ್ನು ದರ್ಶನ್ ಅವರ ಗಮನಕ್ಕೆ ತಂದಾಗ, ‘ನಾನು ಯಾರನ್ನೂ ಭೇಟಿಯಾಗುವುದಿಲ್ಲ’ ಎಂದು ದರ್ಶನ್ ಸ್ಪಷ್ಟವಾಗಿ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ರಚಿತಾ ರಾಮ್ ಅವರು ಬೇಸರದಿಂದಲೇ ತಮ್ಮ ಕಾರಿನಲ್ಲಿ ವಾಪಸ್ ತೆರಳಿದ್ದಾರೆ.
ಕುಟುಂಬಸ್ಥರಿಗೆ ಮಾತ್ರ ಭೇಟಿಯ ಅವಕಾಶ:
ಪ್ರಸ್ತುತ ಜೈಲಿನಲ್ಲಿರುವ ದರ್ಶನ್ ಅವರು ತಮ್ಮ ಪತ್ನಿ, ಮಗ, ತಾಯಿ ಹಾಗೂ ಸಹೋದರನನ್ನು ಹೊರತುಪಡಿಸಿ ಬೇರೆ ಯಾರನ್ನೂ ಭೇಟಿಯಾಗಲು ಒಪ್ಪುತ್ತಿಲ್ಲ. ಚಿತ್ರರಂಗದ ಆಪ್ತರು ಅಥವಾ ಸ್ನೇಹಿತರು ಬಂದರೂ ಅವರನ್ನು ನೋಡಲು ದರ್ಶನ್ ನಿರಾಕರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಅವರಿಗೆ ದಿನದಿಂದ ದಿನಕ್ಕೆ ಕಾನೂನಿನ ಸಂಕಷ್ಟ ಹೆಚ್ಚಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದು, ಸಹ-ಆರೋಪಿಯಾಗಿದ್ದ ಪ್ರದೋಷ್ ರಾವ್ ಈಗ ಮಾಫಿ ಸಾಕ್ಷಿಯಾಗಿರುವ ಕಾರಣದಿಂದ ಮತ್ತು ಕಾನೂನು ಸಂಕಷ್ಟಗಳ ಒತ್ತಡದಿಂದ ದರ್ಶನ್ ಅವರು ಚಿಂತೆಯಲ್ಲೇ ದಿನ ಕಳೆಯುತ್ತಿದ್ದಾರೆ. ಈ ಮಾನಸಿಕ ಒತ್ತಡದ ಕಾರಣಕ್ಕಾಗಿಯೇ ಅವರು ಹೊರಗಿನವರ ಭೇಟಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಪವಿತ್ರಾ ಯಾರು ಗೊತ್ತಾ? ನನ್ನ ಹೆಂಡತಿ’; ರೇಣುಕಾಸ್ವಾಮಿ ಎದುರೇ ಹೇಳಿದ್ದ ದರ್ಶನ್
ದರ್ಶನ್ ಅವರ ಬಗ್ಗೆ ರಚಿತಾ ರಾಮ್ ಅವರಿಗೆ ಅಪಾರ ಗೌರವ ಇದೆ. ಈ ಮೊದಲು ಕೂಡ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಅಕ್ಟೋಬರ್ 3ರಂದು ರಚಿತಾ ರಾಮ್ ಅವರ ಹುಟ್ಟುಹಬ್ಬ. ಅದಕ್ಕೂ ಮುನ್ನ ದರ್ಶನ್ ಅವರನ್ನು ಭೇಟಿಯಾಗಿ ಮಾತನಾಡಿಸಿಕೊಂಡು ಹೋಗಬೇಕು ಎಂದುಕೊಂಡಿದ್ದ ರಚಿತಾಗೆ ನಿರಾಸೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




