ರೇಣುಕಾಸ್ವಾಮಿ ಕೊಲೆ ಕೇಸ್; ಸುಪ್ರೀಂಕೋರ್ಟ್‌ಗೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಯಿಂದ 3 ಮೇಲ್ಮನವಿ ಸಲ್ಲಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶಗಳನ್ನು ಪ್ರಶ್ನಿಸಿ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸುಪ್ರೀಂಕೋರ್ಟ್‌ಗೆ ಒಟ್ಟು ಮೂರು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮತ್ತೊಂದೆಡೆ ವಿಚಾರಣೆ ವೇಳೆ ಸಹ-ಆರೋಪಿ ಪ್ರದೋಶ್ ನೀಡುತ್ತಿರುವ ಹೇಳಿಕೆಗಳು ದರ್ಶನ್ ಪಾಳಯದಲ್ಲಿ ತೀವ್ರ ನಡುಕ ಹುಟ್ಟಿಸಿವೆ.

ಮುಖ್ಯಾಂಶಗಳು
- ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪ್ರಕರಣ
- ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ದರ್ಶನ್-ವಿಜಯಲಕ್ಷ್ಮಿ ಮೇಲ್ಮನವಿ
- ಹೈಕೋರ್ಟ್ ತೀರ್ಪಿಗೆ ಸುಪ್ರೀಂನಲ್ಲಿ ಸವಾಲೆಸೆದ ನಟ ದರ್ಶನ್
ಬೆಂಗಳೂರು, ಸೆಪ್ಟೆಂಬರ್ 29: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸುಪ್ರೀಂಕೋರ್ಟ್‌ಗೆ ಒಟ್ಟು 3 ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮಾಫಿ ಸಾಕ್ಷಿಗೆ ಸಂಬಂಧಿಸಿದ ಹೈಕೋರ್ಟ್‌ನ ವಿವಿಧ ಆದೇಶಗಳನ್ನು ಪ್ರಶ್ನಿಸಿ ಈ ಮೇಲ್ಮನವಿಗಳನ್ನು ಸಲ್ಲಿಸಲಾಗಿದ್ದು, ಅರ್ಜಿಗಳ ವಿಚಾರಣೆ ಇದೇ ವಾರದಲ್ಲೇ ನಡೆಯುವ ಸಾಧ್ಯತೆಯಿದೆ. ಅಲ್ಲಿ ದರ್ಶನ್ಗೆ ಜಯ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ
ಮಾಫಿ ಸಾಕ್ಷಿ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ದರ್ಶನ್:
ಪ್ರಕರಣದಲ್ಲಿ ಮಾಫಿ ಸಾಕ್ಷಿ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನಟ ದರ್ಶನ್ ಸುಪ್ರೀಂಕೋರ್ಟ್‌ಗೆ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದಾರೆ. ‘ಮಾಫಿ ಸಾಕ್ಷಿ ಆದೇಶ ನೀಡುವ ಮುನ್ನ ಸಹ-ಆರೋಪಿಯ ವಾದ ಆಲಿಸುವ ಅಗತ್ಯವಿಲ್ಲ’ ಎಂಬ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಲಾಗಿದೆ. ಇನ್ನು, ಮಾಫಿ ಸಾಕ್ಷಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ದರ್ಶನ್ ಪ್ರಶ್ನೆ ಮಾಡಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಅವರಿಂದಲೂ ಮೇಲ್ಮನವಿ:
ಇನ್ನೊಂದೆಡೆ, ಮಾಫಿ ಸಾಕ್ಷಿ ಆದೇಶವನ್ನು ಎತ್ತಿಹಿಡಿದಿದ್ದ ಹೈಕೋರ್ಟ್‌ನ ಸೆಪ್ಟೆಂಬರ್ 23ರ ತೀರ್ಪನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸುಪ್ರೀಂಕೋರ್ಟ್‌ಗೆ ಮತ್ತೊಂದು ಮೇಲ್ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಕಡೆಯಿಂದ ಒಟ್ಟು ಮೂರು ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದು, ದೇಶದ ಸರ್ವೋಚ್ಛ ನ್ಯಾಯಾಲಯ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ‘ಪವಿತ್ರಾ ಯಾರು ಗೊತ್ತಾ? ನನ್ನ ಹೆಂಡತಿ’; ರೇಣುಕಾಸ್ವಾಮಿ ಎದುರೇ ಹೇಳಿದ್ದ ದರ್ಶನ್
ಪ್ರದೋಷ್ ಮಾಫಿ ಸಾಕ್ಷಿ
ಮತ್ತೊಂದು ಕಡೆ ರೇಣುಕಾಸ್ವಾಮಿ ಮಾಫಿ ಸಾಕ್ಷಿ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಪಾತ್ರ ಏನು ಎಂಬುದನ್ನು ಪ್ರದೋಷ್ ಬಿಚ್ಚಿಡುತ್ತಿದ್ದಾರೆ. ಇದರಿಂದ ದರ್ಶನ್ ಪಾಳಯದಲ್ಲಿ ನಡುಕ ಶುರುವಾಗಿದೆ. ಪ್ರದೋಷ್ ಹೇಳಿಕೆಗಳು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಇಂದು ಕೂಡ ಪ್ರದೋಷ್ ವಿಚಾರಣೆ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




