ಈಗಾಗಲೇ ಎರಡು ಲಾಕ್ಡೌನ್ ಕಾರಣದಿಂದ ಅನೇಕ ಉದ್ಯಮಗಳು ನಷ್ಟ ಅನುಭವಿಸಿವೆ. ಈಗ ಕೊವಿಡ್ ಮೂರನೇ ಅಲೆ ಜೋರಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರಗಳು ಕಠಿಣ ನಿಯಮಗಳನ್ನು ಜಾರಿ ಮಾಡುತ್ತಿವೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮುಂತಾದ ನಿರ್ಬಂಧಗಳ ಹೇರಿಕೆಯಿಂದ ಚಿತ್ರೋದ್ಯಮದ ವಹಿವಾಟು ಕುಸಿಯಲಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್ ದಿನಾಂಕ ಮುಂದೂಡಿಕೊಳ್ಳುತ್ತಿವೆ. ಜೋಗಿ ಪ್ರೇಮ್ (Jogi Prem) ನಿರ್ದೇಶನದ ‘ಏಕ್ ಲವ್ ಯಾ’ (Ek Love Ya) ಸಿನಿಮಾ ಕೂಡ ಇದೇ ನಿರ್ಧಾರಕ್ಕೆ ಬಂದಿದೆ. ರಾಣಾ (Raana), ರಚಿತಾ ರಾಮ್ (Rachita Ram), ಗ್ರೀಷ್ಮಾ ನಾಣಯ್ಯ ಮುಖ್ಯಭೂಮಿಕೆ ನಿಭಾಯಿಸಿರುವ ಈ ಸಿನಿಮಾದ ರಿಲೀಸ್ ದಿನಾಂಕ ಸಹ ಮುಂದೂಡಿಕೆ ಆಗಿದೆ. ಈ ಚಿತ್ರವನ್ನು ಆದಷ್ಟು ಬೇಗ ನೋಡಬೇಕು ಅಂದುಕೊಂಡಿದ್ದ ಅಭಿಮಾನಿಗಳಿಗೆ ಇದರಿಂದ ಸಹಜವಾಗಿಯೇ ನಿರಾಸೆ ಆಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.21ರಂದು ‘ಏಕ್ ಲವ್ ಯಾ’ ತೆರೆಗೆ ಬರಬೇಕಿತ್ತು. ಆದರೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಕಲೆಕ್ಷನ್ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ ‘ಏಕ್ ಲವ್ ಯಾ’ ಬಿಡುಗಡೆ ದಿನಾಂಕವನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ.
‘ಏಕ್ ಲವ್ ಯಾ’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗಿವೆ. ಆದ್ದರಿಂದ ಸಿನಿಮಾದ ಮೇಲೆ ಭಾರಿ ಹೈಪ್ ಸೃಷ್ಟಿಯಾಗಿದೆ. ಅನೇಕ ಊರುಗಳಿಗೆ ತೆರಳಿ ಚಿತ್ರತಂಡ ಪ್ರಚಾರ ಮಾಡಿದೆ. ಆದರೆ ಏಕಾಏಕಿ ರಿಲೀಸ್ ಡೇಟ್ ಮುಂದೂಡಿಕೆ ಮಾಡಿರುವುದರಿಂದ ಇಷ್ಟು ದಿನ ಪ್ರಚಾರ ಮಾಡಿದ್ದು ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಇದೇ ರೀತಿ ಅನೇಕ ಚಿತ್ರಗಳಿಗೆ ಸಂಕಷ್ಟ ಎದುರಾಗಿದೆ.
‘ಕೊವಿಡ್ ಮಾರ್ಗಸೂಚಿ ಬದಲಾದ ನಂತರ ಏಕ್ ಲವ್ ಯಾ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು. ಈ ಸಿನಿಮಾವನ್ನು ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ. ಆದರೆ ಸದ್ಯದ ಸಂದರ್ಭವನ್ನು ಅರಿತು ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರದ ಕುರಿತು ಸಾಕಷ್ಟು ಕುತೂಹಲಕರ ಅಂಶಗಳಿದ್ದು, ಸಿನಿಮಾ ಬಿಡುಗಡೆಯ ತನಕ ಅವೆಲ್ಲವನ್ನೂ ಅನಾವರಣಗೊಳಿಸಲಾಗುವುದು’ ಎಂದು ಚಿತ್ರತಂಡ ಮಾಹಿತಿ ನೀಡಿದೆ. ‘ರಕ್ಷಿತಾಸ್ ಫಿಲ್ಮ್ ಫ್ಯಾಕ್ಟರಿ’ ಬ್ಯಾನರ್ನಲ್ಲಿ ಈ ಸಿನಿಮಾ ಸಿದ್ಧವಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಡೇಟ್ ಮುಂದೂಡಿಕೊಂಡಿವೆ. ಬಹುನಿರೀಕ್ಷಿತ ಸಿನಿಮಾಗಳಾದ ‘ಆರ್ಆರ್ಆರ್’ ಹಾಗೂ ‘ರಾಧೆ ಶ್ಯಾಮ್’ ಚಿತ್ರಗಳು ಕೂಡ ಬಿಡುಗಡೆ ದಿನಾಂಕವನ್ನು ಪೋಸ್ಟ್ಪೋನ್ ಮಾಡಿವೆ. ಒಟ್ಟಾರೆಯಾಗಿ ಕೊವಿಡ್ ಮೂರನೇ ಅಲೆಯಿಂದಾಗಿ ಚಿತ್ರರಂಗದಲ್ಲಿ ಅನಿಶ್ಚಿತತೆ ಕಾಡಲು ಆರಂಭ ಆಗಿದೆ.
ಇದನ್ನೂ ಓದಿ:
‘ನಾನು ಸಿಗರೇಟ್ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ
‘ಊಟ, ತಿಂಡಿ ಇಲ್ಲದೇ ಗಾಂಧಿನಗರದಲ್ಲಿ ಅಲೆದವನು ನಾನು’: ಜೋಗಿ ಪ್ರೇಮ್ ಫ್ಲ್ಯಾಶ್ ಬ್ಯಾಕ್