‘ಸಂಜು ವೆಡ್ಸ್ ಗೀತಾ 2’ ಚಿತ್ರದ ಒಂದು ಹಾಡಿಗೆ 50 ಲಕ್ಷ ರೂಪಾಯಿ ಬಜೆಟ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಒಂದು ಹಾಡನ್ನು 45ರಿಂದ 50 ಲಕ್ಷ ರೂ. ಬಜೆಟನ್ಲ್ಲಿ ಚಿತ್ರೀಕರಿಸಲಾಗಿದೆ. ಕುಣಿಗಲ್ನಲ್ಲಿ ಅದ್ದೂರಿ ಶೂಟಿಂಗ್ ಮಾಡಲಾಗಿದೆ. ಈ ಸಾಂಗ್ ಮಾತ್ರವಲ್ಲದೆ ಬಾಕಿ ಹಾಡುಗಳನ್ನೂ ಸಹ ಸಖತ್ ಅದ್ದೂರಿಯಾಗಿ ಚಿತ್ರೀಕರಿಸಲು ನಿರ್ಮಾಪಕರು ಪ್ಲ್ಯಾನ್ ಮಾಡಿದ್ದಾರೆ. ನಾಗಶೇಖರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ಇಲ್ಲಿದೆ ಅಪ್ಡೇಟ್..
ನಾಗಶೇಖರ್ (Nagashekar) ನಿರ್ದೇಶನದ ಸಿನಿಮಾಗಳಲ್ಲಿ ಹಾಡಿಗೆ ವಿಶೇಷ ಮಹತ್ವ ಇರುತ್ತದೆ. ಅವರ ಸಿನಿಮಾದಲ್ಲಿ ಪ್ರೇಮಕಥೆ ಮಾತ್ರವಲ್ಲದೇ ಖುಷಿ, ತ್ಯಾಗದ ಜತೆಗೆ ಕಾಡುವ ಕಹಾನಿ ಇರಬೇಕು. ಆ ರೀತಿಯ ಕಥೆಗಳನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದು ಅವರು ಯಶಸ್ವಿ ಆಗಿದ್ದಾರೆ. ಈ ಮಾತಿಗೆ ‘ಮೈನಾ’, ‘ಸಂಜು ವೆಡ್ಸ್ ಗೀತಾ’ ಸಿನಿಮಾಗಳೇ ಸಾಕ್ಷಿ. ಈಗ ನಾಗಶೇಖರ್ ಅವರು ‘ಸಂಜು ಹಾಗೂ ಗೀತಾ 2’ (Sanju Weds Geetha 2) ಸಿನಿಮಾ ಮೂಲಕ ನವೀನ ಹೊಸ ಪ್ರೇಮಕಥೆಯನ್ನು ಹೇಳಲು ಸಜ್ಜಾಗಿದ್ದಾರೆ. ಶ್ರೀನಗರ ಕಿಟ್ಟಿ ಜತೆ ಈ ಬಾರಿ ರಮ್ಯಾ ಬದಲಿಗೆ ರಚಿತಾ ರಾಮ್ (Rachita Ram) ನಟಿಸುತ್ತಿದ್ದಾರೆ. ಈ ಸಿನಿಮಾದ ಹಾಡಿನ ಚಿತ್ರೀಕರಣ ಅದ್ದೂರಿಯಾಗಿ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ, ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕು ಎಂದು ಹೋರಾಡುವ ಈ ನೆಲದ ಪ್ರೇಮಿಗಳ ಲವ್ ಸ್ಟೋರಿ ಇದು. ಈ ಸಿನಿಮಾದ ಬಹುತೇಕ ಶೂಟಿಂಗ್, ಎಡಿಟಿಂಗ್ ಕೊನೇ ಹಂತದಲ್ಲಿದೆ. ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ವಿದೇಶದಲ್ಲಿ 15 ದಿನ 11 ಲೊಕೇಶನ್ಗಳಲ್ಲಿ 3ನೇ ಹಂತದ ಶೂಟಿಂಗ್ ಮುಗಿಸಲಾಗಿದೆ. ಈಗ 4ನೇ ಹಂತದ ಚಿತ್ರೀಕರಣ ಆರಂಭವಾಗಿದೆ. ವಿಶೇಷ ಎಂದರೆ, ಕುಣಿಗಲ್ನಲ್ಲಿ ಅದ್ದೂರಿ ಹಾಡಿನ ಚಿತ್ರೀಕರಣ ಮಾಡಲಾಗಿದೆ.
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿನ ಈ ಸಾಂಗ್ ಬಗ್ಗೆ ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿದ್ದಾರೆ. ‘ಕುಣಿಗಲ್ನ ಕುದುರೆ ಫಾರ್ಮ್ನಲ್ಲಿ 5 ದಿನಗಳ ಕಾಲ ಈ ಕಲರ್ಫುಲ್ ಸಾಂಗ್ನ ಶೂಟಿಂಗ್ ನಡೆಸಲಾಯಿತು. ಬಹಳ ಅದ್ದೂರಿಯಾಗಿ ಹಾಡು ಮೂಡಿಬಂದಿದೆ. ಸುಮಾರು 45ರಿಂದ 50 ಲಕ್ಷ ರೂಪಾಯಿವರೆಗೆ ಖರ್ಚು ಮಾಡಿದ್ದೇವೆ. ಈ ಹಾಡು ಮಾತ್ರವಲ್ಲದೆ ಇನ್ನುಳಿದ ಹಾಡುಗಳನ್ನೂ ಕೂಡ ಇದಕ್ಕಿಂತಲೂ ಅದ್ದೂರಿಯಾಗಿ ಚಿತ್ರೀಕರಿಸುತ್ತೇವೆ. ಒಟ್ಟಾರೆ ಈ ಸಿನಿಮಾ ವೈಭವದಿಂದ ಮೂಡಿಬರಬೇಕು. ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಅದ್ಭುತ ದೃಶ್ಯಕಾವ್ಯದ ರೀತಿ ಇರಬೇಕು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಲೂಸ್ ಮಾದ ಯೋಗಿ ನಟನೆಯ 50ನೇ ಸಿನಿಮಾದಲ್ಲಿ ಒರಟ ಪ್ರಶಾಂತ್, ಶ್ರೀನಗರ ಕಿಟ್ಟಿ
ಚೇತನ್ ಚಂದ್ರ, ರಾಗಿಣಿ ದ್ವಿವೇದಿ, ಸಾಧು ಕೋಕಿಲ, ರಂಗಾಯಣ ರಘು, ಗಿಚ್ಚಿ ಗಿಲಿಗಿಲಿ ವಿನೋದ್, ತಬಲಾ ನಾಣಿ, ಸಂಪತ್ ಕುಮಾರ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕ ಛಲವಾದಿ ಕುಮಾರ್ ಅವರು, ‘ಪವಿತ್ರ ಇಂಟರ್ನ್ಯಾಷನಲ್ ಮೂವೀ ಮೇಕರ್ಸ್’ ಸಂಸ್ಥೆಯ ಅಡಿಯಲ್ಲಿ ‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ನಾಗಶೇಖರ್ ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶ್ರೀಧರ ವಿ. ಸಂಭ್ರಮ್ ಅವರು 5 ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೇಯಾ ಘೋಷಾಲ್, ಸೋನು ನಿಗಂ, ಮಂಗ್ಲಿ ಅವರು ಈ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.