ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಾಯಕಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗ ಅವರ ಸಹೋದರ ರವಿರಾಜ್ ಅವರು ನಿರ್ಮಾಪಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಅವರು ರಾಧಿಕಾ ಕುಮಾರಸ್ವಾಮಿ ಅವರ ಶಮಿಕಾ ಎಂಟರ್ಪ್ರೈಸಸ್ನಲ್ಲಿ ಸಹ ನಿರ್ಮಾಪಕನಾಗಿ ಕೆಲಸ ಮಾಡುತ್ತಿದ್ದರು. ಸಿನಿಮಾ ನಿರ್ಮಾಣದ ಅನುಭವ ಪಡೆದಿರುವ ಅವರು ಈಗ ಪೂರ್ಣಪ್ರಮಾಣದ ನಿರ್ಮಾಪಕರಾಗುತ್ತಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರು ‘ಲಕ್ಕಿ’, ‘ಸ್ವೀಟಿ ನನ್ನ ಜೋಡಿ’, ‘ಭೈರಾದೇವಿ’ ಸಿನಿಮಾಗಳಲ್ಲಿ ರವಿರಾಜ್ ಕೆಲಸ ಮಾಡಿದ್ದರು. ಈಗ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಇದಕ್ಕೆ ‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಎಂದು ಹೆಸರು ಇಟ್ಟಿದ್ದಾರೆ. ಮೊದಲ ಸಿನಿಮಾ ಹಾರರ್ ಶೈಲಿಯಲ್ಲಿ ಮೂಡಿ ಬರುತ್ತಿದ್ದು, ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದೆ.
ಹಾಗಾದರೆ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಿದ್ದಾರೆ? ಯಾರು ನಿರ್ದೇಶನ ಮಾಡಿದ್ದಾರೆ ಎಂಬ ವಿಚಾರದಲ್ಲಿ ರಹಸ್ಯ ಕಾಪಾಡಿಕೊಳ್ಳಲಾಗಿದೆ. ‘ಈ ಚಿತ್ರದಲ್ಲಿ ದೊಡ್ಡ ಸ್ಟಾರ್ಸ್ ನಟಿಸಿದ್ದಾರೆ. ಖ್ಯಾತ ನಿರ್ದೇಶಕರೊಬ್ಬರು ಈ ಹಾರರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಡೀ ತಂಡದ ಜೊತೆ ಶೀಘ್ರವೇ ಬರುತ್ತೇವೆ’ ಎಂದಿದ್ದಾರೆ ಅವರು.
‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಅವರ ತಂದೆಯ ಕನಸಿನ ಬ್ಯಾನರ್. ತಂದೆಯ ಕನಸನ್ನು ಅವರು ಈಡೇರಿಸುತ್ತಿದ್ದಾರೆ. ಈಗಾಗಲೇ ಹಲವು ರೀತಿಯ ಹಾರರ್ ಸಿನಿಮಾಗಳು ಬಂದು ಹೋಗಿವೆ. ಆದರೆ ಈ ಸಿನಿಮಾದ ಸಬ್ಜೆಕ್ಟ್ ಭಿನ್ನವಾಗಿದೆ ಅನ್ನೋದು ರವಿರಾಜ್ ಅಭಿಪ್ರಾಯ.
ಇದನ್ನೂ ಓದಿ: ಡ್ಯಾನ್ಸ್ ಮಾಡುತ್ತಾ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ; ವಿಡಿಯೋ ವೈರಲ್
ತಮ್ಮ ಬ್ಯಾನರ್ ಮೂಲಕ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸನ್ನು ರವಿರಾಜ್ ಇಟ್ಟುಕೊಂಡಿದ್ದಾರೆ. ಹಲವರಿಗೆ ಅವಕಾಶ ನೀಡುವ ಉದ್ದೇಶವೂ ಇದೆ. ರಾಧಿಕಾ ಕುಮಾರಸ್ವಾಮಿ ಈಗಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅದೇ ರೀತಿಯಲ್ಲಿ ಹೆಸರು ಮಾಡುವ ಆಸೆ ರವಿರಾಜ್ ಅವರದ್ದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ