AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಿಕಾ ಕುಮಾರಸ್ವಾಮಿ ನಟನೆಯ ಸಿನಿಮಾ ನಿರ್ದೆಶಕನಿಗೆ ದುಬಾರಿ ಕಾರು ಉಡುಗೊರೆ

ರಾಧಿಕಾ ಕುಮಾರಸ್ವಾಮಿ ನಟಿಸಿ ಅವರ ಸಹೋದರ ನಿರ್ಮಾಣ ಮಾಡಿರುವ ಅಜಾಗ್ರತ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಸಿನಿಮಾದ ನಿರ್ದೇಶಕರಿಗೆ ದುಬಾರಿ ಕಾರೊಂದನ್ನು ನಿರ್ಮಾಪಕ ರವಿರಾಜ್ ಉಡುಗೊರೆಯಾಗಿ ನೀಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ ನಟನೆಯ ಸಿನಿಮಾ ನಿರ್ದೆಶಕನಿಗೆ ದುಬಾರಿ ಕಾರು ಉಡುಗೊರೆ
ಮಂಜುನಾಥ ಸಿ.
|

Updated on: Jun 29, 2024 | 8:31 PM

Share

ತಮಿಳಿನ ‘ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಆದಾಗ ಅದರ ನಿರ್ಮಾಪಕ ಕಲಾನಿಧಿಮಾರನ್, ಸಿನಿಮಾದ ನಾಯಕ ರಜನೀಕಾಂತ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್, ನಿರ್ದೇಶಕ ನೆಲ್ಸನ್ ದಿಲೀಪ್​ಕುಮಾರ್ ಅವರಿಗೆ ಐಶಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಇತ್ತೀಚೆಗೆ ‘ಕಾಟೇರ’ ಸಿನಿಮಾ ಗೆದ್ದಾಗಲೂ ಸಹ ಸಿನಿಮಾದ ಕತೆಗಾರರಿಗೆ ಕಾರುಗಳನ್ನು ನೀಡಿ ಸತ್ಕರಿಸಲಾಗಿತ್ತು. ಇದೀಗ ರಾಧಿಕಾ ಕುಮಾರಸ್ವಾಮಿ ನಟಿಸಿರುವ ಸಿನಿಮಾದ ನಿರ್ದೇಶಕರಿಗೆ ಸಿನಿಮಾ ಬಿಡುಗಡೆಗೆ ಮುನ್ನವೇ ಕಾರು ನೀಡಿ ಗೌರವಿಸಲಾಗಿದೆ.

ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿ ಅವರ ಸಹೋದರ ರವಿರಾಜ್ ನಿರ್ಮಾಣ ಮಾಡಿ, ಎಂ.ಶಶಿಧರ್ ನಿರ್ದೇಶನ ಮಾಡಿರುವ ‘ಅಜಾಗ್ರತ’ ಸಿನಿಮಾದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದು ಸಿನಿಮಾದ ಮೊದಲ ಪ್ರತಿ ದೊರೆತಿದೆ. ಸಿನಿಮಾದ ಮೊದಲ ಪ್ರತಿ ನೋಡಿದ ನಿರ್ಮಾಪಕ ರವಿರಾಜ್​ಗೆ ಸಿನಿಮಾ ಬಹುವಾಗಿ ಇಷ್ಟವಾಗಿದೆ. ಹಾಗಾಗಿ ನಿರ್ಮಾಪಕ ರವಿರಾಜ್ ಅವರು ಶಶಿಧರ್ ಅವರಿಗೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಶಶಿಧರ್ ಅವರು ಹೇಗೆ ಹೇಳಿದ್ದರೋ ಅದಕ್ಕಿಂತಲೂ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ನೋಡಿದ ನನಗೆ ಬಹಳ ಇಷ್ಟವಾಗಿದೆ. ಹಾಗಾಗಿ ಶ್ರಮಪಟ್ಟು ಸಿನಿಮಾ ಅತ್ಯುತ್ತಮವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರಿಗೆ ಉಡುಗೊರೆ ನೀಡಬೇಕೆನಿಸಿತು, ಅದಕ್ಕೆ ಟೊಯೋಟಾ ಫಾರ್ಚ್ಯೂನರ್ ಕಾರು ಉಡುಗೊರೆಯಾಗಿ ನೀಡಿದ್ದೇನೆ” ಎಂದಿದ್ದಾರೆ ನಿರ್ಮಾಪಕ ರವಿರಾಜ್.

ಇದನ್ನೂ ಓದಿ:ನಿರ್ಮಾಪಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್

ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ‘ಅಜಾಗ್ರತ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೆ ‘777 ಚಾರ್ಲಿ’ ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ನಟ ಬಾಬಿ ಸಿಂಹ ಸಹ ಈ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ. ಹಿರಿಯ ಮತ್ತು ಹೆಸರಾಂತ ನಟರಾದ ರಾವ್ ರಮೇಶ್‌, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ಅಜಾಗ್ರತ’ ಸಿನಿಮಾ ಕನ್ನಡದಲ್ಲಿ ಮಾತ್ರವೇ ಅಲ್ಲದೆ ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಬಿಡುಗಡೆ ಆಗಲಿದೆ. ಹಾಗಾಗಿ ಬೇರೆ ಬೇರೆ ಭಾಷೆಯ ನಟರನ್ನು ಸಿನಿಮಾಕ್ಕೆ ಹಾಕಿಕೊಳ್ಳಲಾಗಿದೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ