Radhika Pandit: ರಾಧಿಕಾ ಪಂಡಿತ್​ ಕಂಬ್ಯಾಕ್​ ಯಾವಾಗ? ಶೀಘ್ರವೇ ಸಿಗಬಹುದೇ ಉತ್ತರ?

ರಾಧಿಕಾ ಕೊನೆಯ ಸಿನಿಮಾ ತೆರೆಗೆ ಬಂದು 2 ವರ್ಷ ಆಗುತ್ತಾ ಬಂದರೂ ಅವರ ಹೊಸ ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್​ ಸಿಗುತ್ತಿಲ್ಲ. ಅವರು ಕಂಬ್ಯಾಕ್​ ಮಾಡುತ್ತಾರೆ ಎಂದರೆ ಅಭಿಮಾನಿಗಳಲ್ಲಿ ಒಂದು ನಿರೀಕ್ಷೆ ಅಂತೂ ಇದ್ದೇ ಇರುತ್ತದೆ.

Radhika Pandit: ರಾಧಿಕಾ ಪಂಡಿತ್​ ಕಂಬ್ಯಾಕ್​ ಯಾವಾಗ? ಶೀಘ್ರವೇ ಸಿಗಬಹುದೇ ಉತ್ತರ?
ರಾಧಿಕಾ ಪಂಡಿತ್​
Edited By:

Updated on: Mar 28, 2021 | 7:38 AM

ರಾಧಿಕಾ ಪಂಡಿತ್​ ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಟಿಯಾಗಿದ್ದರು. ಮೊಗ್ಗಿನ ಮನಸು ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ಅವರು ನಂತರ ಸಾಲು ಸಾಲು ಹಿಟ್​ ಚಿತ್ರಗಳನ್ನು ನೀಡಿದರು. ಮದುವೆ ಆದ ನಂತರ ರಾಧಿಕಾ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಈಗ ರಾಧಿಕಾ ಕಂಬ್ಯಾಕ್​ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಯಾವಾಗ ಸ್ಯಾಂಡಲ್​ವುಡ್​ಗೆ ಮರಳಲಿದ್ದಾರೆ ಎಂದು ಕೌತುಕದಿಂದ ಕಾಯುತ್ತಿದ್ದಾರೆ.

ಸೀರಿಯಲ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ರಾಧಿಕಾ ಪಂಡಿತ್​, ಬೆಳ್ಳಿ ಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. 2009ರಲ್ಲಿ ತೆರೆಕಂಡ ಮೊಗ್ಗಿನ ಮನಸು ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಸೂಪರ್ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ಯಶ್​-ರಾಧಿಕಾ ಕಾಂಬಿನೇಷನ್​ ವರ್ಕ್​ ಆಗಿತ್ತು. ಈ ಸಿನಿಮಾದಲ್ಲಿ ರಾಧಿಕಾ ನಟನೆಗೆ 56ನೇ ಸಾಲಿನ ಫಿಲ್ಮ್​ಫೇರ್​ ಅವಾರ್ಡ್​ ಸೌತ್​ ಮತ್ತು 2008-09ನೇ ಸಾಲಿನ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ ಕೂಡ ಒಲಿದು ಬಂದಿತ್ತು.

ಪ್ರಶಸ್ತಿ ಮಾತ್ರವಲ್ಲ ರಾಧಿಕಾಗೆ ಸಾಲು ಸಾಲು ಆಫರ್​ಗಳು ಕೂಡ ಅರಸಿ ಬಂದವು. ಕನ್ನಡದ ಸ್ಟಾರ್​ ನಟರಾದ ಪುನೀತ್​ ರಾಜ್​ಕುಮಾರ್​, ಧ್ರುವ ಸರ್ಜಾ, ಶಿವರಾಜ್​ಕುಮಾರ್​, ಯಶ್ ಜತೆ ತೆರೆ ಹಂಚಿಕೊಂಡಿರುವ ಹೆಚ್ಚುಗಾರಿಕೆ ರಾಧಿಕಾ ಅವರದ್ದು.

2016ರಲ್ಲಿ ಯಶ್​-ರಾಧಿಕಾ ನಟನೆಯ ಸಂತು ಸ್ಟ್ರೇಟ್​ ಫಾರ್ವಡ್​ ಸಿನಿಮಾ ತೆರೆಗೆ ಬಂದಿತ್ತು. ಇದಾದ ನಂತರ ಅದೇ ವರ್ಷ ಡಿಸೆಂಬರ್​ನಲ್ಲಿ ಇಬ್ಬರೂ ಮದುವೆ ಆಗಿದ್ದರು. ಮದುವೆ ಆಗಿದ್ದು ಅಭಿಮಾನಿಗಳಿಗೆ ಖುಷಿ ನೀಡಿತ್ತಾದರೂ, ರಾಧಿಕಾ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದು ಬೇಸರ ತರಿಸಿತ್ತು. ಈ ಮಧ್ಯೆ 2019ರಲ್ಲಿ ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ ರಾಧಿಕಾ ಅಭಿನಯಿಸಿದ್ದರು. ಈ ಚಿತ್ರ ಹೇಳಿಕೊಳ್ಳುವಂತೆ ಯಶಸ್ಸು ಕಂಡಿಲ್ಲ.

ರಾಧಿಕಾ ಕೊನೆಯ ಸಿನಿಮಾ ತೆರೆಗೆ ಬಂದು 2 ವರ್ಷ ಆಗುತ್ತಾ ಬಂದರೂ ಅವರ ಹೊಸ ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್​ ಸಿಗುತ್ತಿಲ್ಲ. ರಾಧಿಕಾಗೆ ಮಕ್ಕಳಾದ ನಂತರ ಅವರ ಪಾಲನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹೀಗಾಗಿ, ಅವರಿಗೆ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ.

ರಾಧಿಕಾ ಕನ್ನಡ ಚಿತ್ರರಂಗವನ್ನೇ ತೊರೆಯುತ್ತಾರಾ ಎನ್ನುವ ಪ್ರಶ್ನೆಯನ್ನೂ ಅನೇಕರು ಕೇಳಿಕೊಂಡಿದ್ದಾರೆ. ಆದರೆ, ಹಾಗಿಲ್ಲ ಎನ್ನುತ್ತವೆ ಮೂಲಗಳು. ಮಕ್ಕಳು ಸ್ವಲ್ಪ ದೊಡ್ಡವರಾದ ನಂತರ ರಾಧಿಕಾ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆಯಂತೆ.


ರಾಧಿಕಾ ಕಂಬ್ಯಾಕ್​ ಮಾಡುತ್ತಿದ್ದಾರೆ ಎಂದರೆ ಅಭಿಮಾನಿಗಳಲ್ಲಿ ಒಂದು ನಿರೀಕ್ಷೆ ಅಂತೂ ಇದ್ದೇ ಇರುತ್ತದೆ. ಹೀಗಾಗಿ, ಒಳ್ಳೆಯ ಸ್ಕ್ರಿಪ್ಟ್​ ಮತ್ತು ಒಳ್ಳೆಯ ತಂಡದ ಜತೆ ಕೈ ಜೋಡಿಸುವ ಆಲೋಚನೆ ಅವರದ್ದು. ಕೆಜಿಎಫ್​-2 ತೆರೆಕಂಡ ನಂತರದಲ್ಲಿ ರಾಧಿಕಾ ಆ ಬಗ್ಗೆ ಆಲೋಚನೆ ಮಾಡುತ್ತಾರೆ ಎಂಬುದು ಮೂಲಗಳ ಮಾಹಿತಿ.

ಇದನ್ನೂ ಓದಿ: ಬೇಸಿಗೆಯಲ್ಲೂ ಯಶ್​ ಪುತ್ರಿ ಎಷ್ಟೊಂದು ಕೂಲ್​! ಮುದ್ದು ಗೊಂಬೆ ಆಯ್ರಾ ಲುಕ್​ಗೆ ಮನಸೋಲದವರಿಲ್ಲ