ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ಕುಮಾರ್ (Dr. Rajkumar) ಅವರ ಕುಟುಂಬಕ್ಕೆ ಇರುವ ಗೌರವ ಅಪಾರ. ಚಂದನವನವನ್ನು ಕಟ್ಟಿ ಬೆಳೆಸುವಲ್ಲಿ ಈ ಕುಟುಂಬದ ಕೊಡುಗೆ ದೊಡ್ಡದು. ಡಾ. ರಾಜ್ಕುಮಾರ್ ಅವರು ತೆರೆಮೇಲೆ ಮಾತ್ರವಲ್ಲದೇ ತೆರೆ ಹಿಂದೆಯೂ ಆದರ್ಶಯುತವಾದ ಜೀವನ ಸಾಗಿಸಿದವರು. ಅವರನ್ನು ಕಂಡರೆ ಎಲ್ಲರಿಗೂ ಅಪಾರವಾದ ಗೌರವ ಮತ್ತು ಅಭಿಮಾನ. ಅವರ ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಮತ್ತು ಪುನೀತ್ ರಾಜ್ಕುಮಾರ್ ಕೂಡ ಚಿತ್ರರಂಗದಲ್ಲಿ ಜನಮನ ಗೆದ್ದರು. ಅಣ್ಣಾವ್ರ ಮನೆ ಮೊದಲ ಒಂದಾಗಿತ್ತು. ಬಳಿಕ ಆ ಮನೆ ಎರಡು ಭಾಗವಾಯಿತು. ಆ ಘಟನೆಗೆ ಸಂಬಂಧಪಟ್ಟಂತೆ ದೊಡ್ಮನೆ ಕುಟುಂಬದವರು ಸಾರ್ವಜನಿಕವಾಗಿ ಮಾತನಾಡಿದ್ದು ಕಡಿಮೆ. ಆದರೆ ಈಗ ರಾಘವೇಂದ್ರ ರಾಜ್ಕುಮಾರ್ ಅವರು ಒಂದು ಮುಖ್ಯವಾದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಡೊಡ್ಮನೆ ಯಾಕೆ ಎರಡು ಭಾಗ ಆಯಿತು ಎಂಬುದನ್ನು ಅವರು ತಿಳಿಸಿದ್ದಾರೆ. ಮನೆ ಭಾಗ ಆಗುವಾಗ ತಾಯಿ ಪಾರ್ವತಮ್ಮ ರಾಜ್ಕುಮಾರ್ (Parvathamma Rajkumar) ಹೇಳಿದ್ದ ಮಾತನ್ನು ರಾಘಣ್ಣ ಈಗ ನೆನಪು ಮಾಡಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸಲು ಇತ್ತೀಚೆಗೆ ಹಾಡೊಂದನ್ನು ಬಿಡುಗಡೆ ಮಾಡಲಾಯಿತು ಆ ಕಾರ್ಯಕ್ರದಲ್ಲಿ ರಾಘಣ್ಣ ಈ ವಿಚಾರಗಳನ್ನು ಹಂಚಿಕೊಂಡರು.
‘ಅಪ್ಪು ಇಲ್ಲ ಎಂಬ ನೋವು ಈ ಸಂದರ್ಭದಲ್ಲಿ ನನ್ನನ್ನು ಕಾಡುತ್ತಿದೆ. ನಮ್ಮ ತಂದೆ ಇದ್ದಾಗ ನಮ್ಮದು ಒಂದೇ ದೊಡ್ಮನೆ ಇತ್ತು. ನಂತರ ಅದನ್ನು ಎರಡು ಭಾಗ ಮಾಡಿದೆವು. ಅದನ್ನು ನಮ್ಮ ತಾಯಿ ಮಾಡಿಕೊಟ್ಟಿದ್ದು. ‘ನಾನು ಇದ್ದಾಗಲೇ ನಿಮಗೆ ಎರಡು ಮನೆ ಮಾಡಿಕೊಡುತ್ತೇನೆ. ನಾನು ಹೋದಮೇಲೆ ನೀವು ಮಾಡಿಕೊಂಡರೆ ಬೇರೆ ಬೇರೆ ಆದರು ಅಂತ ಜನ ಹೇಳುತ್ತಾರೆ’ ಎಂದು ಅವರು ಈ ರೀತಿ ಮಾಡಿದ್ದು. ನಮಗೆ ಮನೆ ಕೊಟ್ಟು, ಅವರು ನಮ್ಮನ್ನು ಬಿಟ್ಟು ಹೋದರು’ ಎಂದಿದ್ದಾರೆ ರಾಘವೇಂದ್ರ ರಾಜ್ಕುಮಾರ್.
‘ಆಗ ಒಂದು ದಿನ ಅಮ್ಮ ನನ್ನನ್ನು ಕರೆದು ಹೇಳಿದ್ರು. ನಿನ್ನ ಎಡಗಡೆ, ನಿನ್ನ ಹೆಗಲಿಗೆ ನನ್ನ ಮಗುವನ್ನು ಹಾಕಿದ್ದೇನೆ. ಅವನ್ನನ್ನು ಚೆನ್ನಾಗಿ ನೋಡಿಕೋ ಅಂತ ಹೇಳಿದ್ರು. ಅಲ್ಲಿಂದ ‘ಅಪ್ಪು’ ಸಿನಿಮಾ ಶುರುವಾಯ್ತು. ನನಗೆ ಕೊನೆಗೆ ಏನು ಅನಿಸಿತು ಎಂದರೆ, ಅವನನ್ನು ನೋಡಿಕೊಳ್ಳಲು ನನಗೆ ಆಗಲಿಲ್ಲ. ಅಮ್ಮ, ಇವನನ್ನು ನೀವೇ ನೋಡಿಕೊಳ್ಳಿ ಅಂತ ಅವರ ಪಕ್ಕದಲ್ಲೇ ಮಲಗಿಸಿ ಬಂದುಬಿಟ್ಟೆ. ಇದು ನನ್ನನ್ನು ತುಂಬ ಕಾಡುತ್ತಿದೆ’ ಎಂದಿದ್ದಾರೆ ರಾಘಣ್ಣ.
ಪುನೀತ್ ರಾಜ್ಕುಮಾರ್ ಅವರ ಬರ್ತ್ಡೇ (ಮಾ.17) ಸಮೀಪಿಸುತ್ತಿದ್ದೆ. ಅವರ ಜನ್ಮದಿನವನ್ನು ಹೇಗೆ ಆಚರಣೆ ಮಾಡಬೇಕು ಎಂಬ ದೊಡ್ಡ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಅದಕ್ಕೆ ರಾಘವೇಂದ್ರ ರಾಜ್ಕುಮಾರ್ ಅವರು ಉತ್ತರ ನೀಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿಯೂ ಒಂದೊಂದು ಗಿಡ ನೆಡುವ ಮೂಲಕ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಬೇಕು. ಅದರಿಂದ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ರಾಘಣ್ಣ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಅವರು 500 ಸಸಿಗಳನ್ನು ವಿತರಣೆ ಮಾಡಿದ್ದಾರೆ. ‘ಅಪ್ಪು ಕಣ್ಣು ನೀಡಿದ್ದರಿಂದ ಈಗಾಗಲೇ ನೇತ್ರದಾನದ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿದೆ. ಅದೇ ರೀತಿ ಪರಿಸರ ಕಾಳಜಿ ಬಗ್ಗೆಯೂ ಸಂದೇಶ ಸಾರುವಂತಾಗಲಿ’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:
‘ಅಪ್ಪು ನಮಗೆ ಬಿಟ್ಟು ಹೋದ ಆಸ್ತಿ ಇದು’; ಪುನೀತ್ ಬಗ್ಗೆ ಸಹೋದರ ರಾಘಣ್ಣ ಭಾವುಕ ಮಾತು
ಪುನೀತ್ ನಿವಾಸಕ್ಕೆ ಭೇಟಿ ನೀಡಲಿರುವ ಅಲ್ಲು ಅರ್ಜುನ್; ಹೇಗಿರಲಿದೆ ಇಂದಿನ ಅವರ ವೇಳಾಪಟ್ಟಿ?