ಪುನೀತ್​ ನಿವಾಸಕ್ಕೆ ಭೇಟಿ ನೀಡಲಿರುವ ಅಲ್ಲು ಅರ್ಜುನ್​; ಹೇಗಿರಲಿದೆ ಇಂದಿನ ಅವರ ವೇಳಾಪಟ್ಟಿ?

ಅಲ್ಲು ಅರ್ಜುನ್​ ಅವರು ಬೆಂಗಳೂರಿಗೆ ಬಂದು ಪುನೀತ್​ ರಾಜ್​ಕುಮಾರ್​ ಕುಟುಂಬದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಅಪ್ಪು ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.

ಪುನೀತ್​ ನಿವಾಸಕ್ಕೆ ಭೇಟಿ ನೀಡಲಿರುವ ಅಲ್ಲು ಅರ್ಜುನ್​; ಹೇಗಿರಲಿದೆ ಇಂದಿನ ಅವರ ವೇಳಾಪಟ್ಟಿ?
TV9kannada Web Team

| Edited By: Madan Kumar

Feb 03, 2022 | 10:12 AM

ಹೃದಯಾಘಾತದಿಂದ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಕೂಡ ಅವರು ಸ್ನೇಹಿತರನ್ನು ಸಂಪಾದಿಸಿದ್ದರು. ಪುನೀತ್​ ನಿಧನದ ಬಳಿಕ ಅಕ್ಕಪಕ್ಕದ ರಾಜ್ಯಗಳ ಅನೇಕ ಸೆಲೆಬ್ರಿಟಿಗಳು ಬಂದು ಡಾ. ರಾಜ್​ಕುಮಾರ್​ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದರು. ಇಂದು (ಫೆ.3) ಟಾಲಿವುಡ್​ನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun)​ ಅವರು ಪುನೀತ್​ ರಾಜ್​ಕುಮಾರ್​ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಪ್ಪು ನಿಧನದಿಂದ ಕಣ್ಣೀರು ಹಾಕುತ್ತಿರುವ ಕುಟುಂಬದ ಸದಸ್ಯರಿಗೆ ಅವರು ಸಾಂತ್ವನ ಹೇಳಲಿದ್ದಾರೆ. ತಾವು ಪುನೀತ್​ ಮನೆಗೆ ಭೇಟಿ ನೀಡುವುದಾಗಿ ಈ ಮೊದಲೇ ಅವರು ತಿಳಿಸಿದ್ದರು. ಅದರಂತೆ ಈಗ ನಡೆದುಕೊಳ್ಳುತ್ತಿದ್ದಾರೆ. ಪುನೀತ್​ ನಿಧನರಾದ ಸಂದರ್ಭದಲ್ಲಿ ಅಲ್ಲು ಅರ್ಜುನ್​ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಹೈದರಾಬಾದ್​ನಲ್ಲಿ ನಡೆದ ಸಿನಿಮಾವೊಂದರ ಪ್ರಚಾರ ಕಾರ್ಯದ ವೇಳೆ ಮೌನಾಚರಣೆ ಮಾಡುವ ಮೂಲಕ ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದರು. ಈಗ ಅವರು ಬೆಂಗಳೂರಿಗೆ ಬಂದು ಪುನೀತ್​ ಕುಟುಂಬದ (Puneeth Rajkumar Family) ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

ಅಲ್ಲು ಅರ್ಜುನ್​ ಅವರು ಇಂದು ಬೆಳಗ್ಗೆ 11 ಗಂಟೆಗೆ ಖಾಸಗಿ ವಿಮಾನದಲ್ಲಿ ಹೈದರಾಬಾದ್​ನಿಂದ ಹೊರಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಎಚ್​ಎಎಲ್​ ತಲುಪಲಿದ್ದಾರೆ. ಬಳಿಕ ಅವರು ನೇರವಾಗಿ ಪುನೀತ್​ ನಿವಾಸಕ್ಕೆ ಬರಲಿದ್ದಾರೆ. ಅಲ್ಲಿ ಅವರನ್ನು ಶಿವರಾಜ್​ಕುಮಾರ್​ ಬರಮಾಡಿಕೊಳ್ಳಲಿದ್ದಾರೆ. ನಂತರ ಅಪ್ಪು ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಲಿದ್ದಾರೆ. ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಡಾ. ರಾಜ್​ ಕುಟುಂಬದವರಿಗೆ ಎಲ್ಲ ಭಾಷೆಯ ಸೆಲೆಬ್ರಿಟಿಗಳ ನಡುವೆ ಉತ್ತಮ ಬಾಂಧವ್ಯ ಇದೆ. ಪುನೀತ್​ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.

‘ಪುಷ್ಪ’ ಚಿತ್ರದ ಪ್ರಚಾರದ ಸಮಯದಲ್ಲಿ ಅಲ್ಲು ಅರ್ಜುನ್​ ಅವರು ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಆ ಸಂದರ್ಭದಲ್ಲಿ ಪುನೀತ್​ ನಿವಾಸಕ್ಕೆ ಭೇಟಿ ನೀಡದಿರಲು ಅವರು ನಿರ್ಧರಿಸಿದ್ದರು. ಅದಕ್ಕೆ ಕಾರಣ ಏನೆಂಬುದನ್ನೂ ಅವರು ವಿವರಿಸಿದ್ದರು. ‘ಪುನೀತ್​ ರಾಜ್​ಕುಮಾರ್​ ಕುಟುಂಬಕ್ಕೆ ನನ್ನ ಸಂತಾಪ ಇದೆ. ‘ಪುಷ್ಪ’ ಸಿನಿಮಾ ಕೆಲಸಗಳಿಂದ ಬೆಂಗಳೂರಿಗೆ ಬರೋಕೆ ಆಗಿರಲಿಲ್ಲ. ಈಗ ‘ಪುಷ್ಪ’ ಸಿನಿಮಾ ಪ್ರಮೋಷನ್​ಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗೋಕೆ ಇಷ್ಟಪಡುವುದಿಲ್ಲ. ‘ಪುಷ್ಪ’ ರಿಲೀಸ್​ ಆದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಬಂದು ಇಡೀ ಕುಟುಂಬವನ್ನು ಭೇಟಿ ಆಗುತ್ತೇನೆ. ಅದು ನನ್ನ ಕರ್ತವ್ಯ’ ಎಂದು ಅಲ್ಲು ಅರ್ಜುನ್​ ಹೇಳಿದ್ದರು.

‘ಪುಷ್ಪಕ ವಿಮಾನಂ’ ಸಿನಿಮಾದ ಪ್ರಚಾರದ ಸಮಯದಲ್ಲಿ ಪುನೀತ್​ ಬಗ್ಗೆ ಅಲ್ಲು ಅರ್ಜುನ್​ ಮಾತನಾಡಿದ್ದರು. ‘ಪುನೀತ್​ ರಾಜ್​ಕುಮಾರ್​ ಅವರು ನನಗೆ ಬಹಳ ಕಾಲದಿಂದ ಪರಿಚಯ. ನಮ್ಮ ಮನೆಗೆ ಬರುತ್ತಿದ್ದರು. ಎಷ್ಟೋ ಬಾರಿ ಜೊತೆಯಲ್ಲಿ ಕುಳಿತು ಊಟ ಮಾಡಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸ ಇತ್ತು. ಒಂದು ಡ್ಯಾನ್ಸ್​ ಕಾರ್ಯಕ್ರಮದಲ್ಲಿ ನಾವು ಜಡ್ಜ್​ ಆಗಿದ್ದೆವು. ಯಾವಾಗ ಮಾತನಾಡಿದರೂ ಬೆಂಗಳೂರಿಗೆ ಬನ್ನಿ ಎಂದು ಕರೆಯುತ್ತಿದ್ದರು. ಆದರೆ ಇಂದು ಸಡನ್​ ಆಗಿ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ಅಲ್ಲು ಅರ್ಜುನ್​ ಹೇಳಿದ್ದರು.

‘ಮೊದಲ ಬಾರಿಗೆ ಈ ಸುದ್ದಿ ಕೇಳಿದಾಗ ತುಂಬ ಶಾಕ್​ ಆಯಿತು. ಬದುಕು ತೀರಾ ಅನಿಶ್ಚಿತ. ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಬದುಕಿನಲ್ಲಿ ಯಾವಾಗಲೂ ಖುಷಿಯಾಗಿರಿ. ಎಂಥ ದೊಡ್ಡ ಸೂಪರ್​ ಸ್ಟಾರ್​ ಆಗಿದ್ದರು ಪುನೀತ್​ ರಾಜ್​ಕುಮಾರ್​. ತುಂಬ ಒಳ್ಳೆಯ ವ್ಯಕ್ತಿ. ಕನ್ನಡ ಚಿತ್ರರಂಗಕ್ಕಾಗಿ ಅವರು ತುಂಬ ಕೊಡುಗೆ ನೀಡಿದ್ದರು. ನಮ್ಮ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಆಗಿದ್ದರು’ ಎಂದಿದ್ದರು ಅಲ್ಲು ಅರ್ಜುನ್.​

ಇದನ್ನೂ ಓದಿ:

‘ಪುಷ್ಪ 2’ ರಿಲೀಸ್​ ಡೇಟ್​ ಬಗ್ಗೆ ಬಿಗ್​ ಅಪ್​ಡೇಟ್​; ಮತ್ತೆ ಆ ಯಶಸ್ವಿ ದಿನಾಂಕದ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​?

‘ಅಪ್ಪು ನಮಗೆ ಬಿಟ್ಟು ಹೋದ ಆಸ್ತಿ ಇದು’; ಪುನೀತ್​ ಬಗ್ಗೆ ಸಹೋದರ ರಾಘಣ್ಣ ಭಾವುಕ ಮಾತು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada