ಇಷ್ಟು ದಿನಗಳ ಕಾಲ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ರಘು ದೀಕ್ಷಿತ್ (Raghu Dixit) ಅವರನ್ನು ಜನರು ಗುರುತಿಸುತ್ತಿದ್ದರು. ಈಗ ಅವರು ಡಾನ್ ಅವತಾರ ತಾಳಿದ್ದಾರೆ. ಗಣೇಶ್ ಪರಶುರಾಮ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ‘ಬ್ಯಾಂಗ್’ನಲ್ಲಿ ರಘು ದೀಕ್ಷಿತ್ಗೆ ಡಾನ್ ಪಾತ್ರ ನೀಡಲಾಗಿದೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ (Shanvi Srivastava) ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ರಘು ದೀಕ್ಷಿತ್ ಅವರು ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಡ್ಯಾಡಿ ಹೆಸರಿನ ಡಾನ್ ಪಾತ್ರದಲ್ಲಿ ರಘು ದೀಕ್ಷಿತ್ ನಟಿಸುತ್ತಿದ್ದಾರೆ. ಶಾನ್ವಿ ಕೂಡ ಈ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರ ಮಾಡುತ್ತಿದ್ದಾರೆ. ‘ಎಂದಿಗೂ ನನಗೆ ನಟನಾಗುವ ಹಂಬಲವನ್ನು ಇರಲಿಲ್ಲ. ಆದರೆ, ಅಂತಹ ಅವಕಾಶ ಸಿಕ್ಕಿದೆ ಎಂಬ ಬಗ್ಗೆ ನನಗೆ ಖುಷಿ ಇದೆ. ಮೊದಲ ಚಿತ್ರದಲ್ಲಿ ನಾನು ಗ್ಯಾಂಗ್ಸ್ಟರ್ ಪಾತ್ರ ಮಾಡುತ್ತಿದ್ದೇನೆ. ನಾನು ತುಂಬಾ ಅದೃಷ್ಟಶಾಲಿ’ ಎಂದು ರಘು ದೀಕ್ಷಿತ್ ಅವರು ಹಿಂದೂಸ್ತಾನ್ ಟೈಮ್ಸ್ ಇಂಗ್ಲಿಷ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ನಾನು ಈ ಚಿತ್ರದ ನಿರ್ದೇಶಕ ಗಣೇಶ್ ಪರಶುರಾಮ್ ಅವರನ್ನು ಒಮ್ಮೆ ಭೇಟಿ ಮಾಡಿದೆ. ಅವರು ಸಿನಿಮಾ ಬಗ್ಗೆ ಮಾತನಾಡುವುದಿದೆ ಎಂದಿದ್ದರು. ನನ್ನ ಬಳಿ ಸಂಗೀತ ಸಂಯೋಜನೆ ಮಾಡಿಸಬಹುದು, ಇಲ್ಲವೇ ಹಾಡು ಹಾಡಿಸಬಹುದು ಎಂದುಕೊಂಡೆ. ಆದರೆ, ಅವರು ನನ್ನ ಬಳಿ ನಟಿಸುವಂತೆ ಕೋರಿದರು. ಆದರೆ, ನಾನು ನಿರಕಾರಿಸಿದೆ. ಕೆಲ ತಿಂಗಳು ಬಿಟ್ಟು ಅವರು ಮತ್ತೆ ಆಗಮಿಸಿದರು. ನಾನು ಒಮ್ಮೆ ಕಾಸ್ಟ್ಯೂಮ್ ಧರಿಸಿ ನೋಡಿದೆ. ನನಗೆ ಅದು ನಿಜಕ್ಕೂ ಖುಷಿ ನೀಡಿತು’ ಎಂದಿದ್ದಾರೆ ರಘು ದೀಕ್ಷಿತ್.
ಇದನ್ನೂ ಓದಿ: ಡಾನ್ ಆದ ರಘು ದೀಕ್ಷಿತ್ಗೆ ಡ್ಯಾಡಿ ಅಂತಾರೆ; ‘ಬ್ಯಾಂಗ್’ ಚಿತ್ರದಲ್ಲಿ ನಟಿ ಶಾನ್ವಿಗೆ ಹೊಸ ಅವತಾರ
ಶಾನ್ವಿ ಶ್ರೀವಾಸ್ತವ ಮತ್ತು ರಘು ದೀಕ್ಷಿತ್ ಅಲ್ಲದೆ ಈ ಚಿತ್ರದಲ್ಲಿ ಇನ್ನೂ 4 ಪಾತ್ರಗಳು ಬರಲಿವೆ. ಆ ಪಾತ್ರಗಳಲ್ಲಿ ಸಾತ್ವಿಕಾ, ರಿತ್ವಿಕ್ ಮುರಳಿಧರ್, ಸುನೀಲ್ ನಾಟ್ಯರಂಗ ನಟಿಸಿದ್ದಾರೆ. ಉದಯಲೀಲ ಛಾಯಾಗ್ರಹಣ, ನವೀನ್ ಕುಮಾರ್ ಸೌಂಡ್ ಡಿಸೈನ್, ವಿಜೇತ್ ಚಂದ್ರ ಸಂಕಲನ ಇದೆ. ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪೂಜಾ ವಸಂತ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ