
ಬಣ್ಣದ ಲೋಕಕ್ಕೆ ಬರುವುದಕ್ಕೂ ಮುನ್ನ ರಾಗಿಣಿ ದ್ವಿವೇದಿ (Ragini Dwivedi) ಅವರು ಮಾಡಲಿಂಗ್ ಮಾಡುತ್ತಿದ್ದರು. ಪಂಜಾಬಿ ಬೆಡಗಿ ಆದ ಅವರು ‘ಹೋಳಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಕಿಚ್ಚ ಸುದೀಪ್ ಅಭಿನಯದ ‘ವೀರ ಮದಕರಿ’ ಸಿನಿಮಾಗೆ ಅವರು ನಾಯಕಿ ಆದರು. ಆ ಸಿನಿಮಾದಿಂದ ಅವರಿಗೆ ಭರ್ಜರಿ ಜನಪ್ರಿಯತೆ ಸಿಕ್ಕಿತು. ಈಗ ಅವರು ಮೋಹನ್ಲಾಲ್ ಜೊತೆ ನಟಿಸಿರುವ ‘ವೃಷಭ’ ಸಿನಿಮಾ ಬಿಡುಗಡೆ ಆಗುತ್ತಿದೆ. ಇಷ್ಟು ವರ್ಷಗಳ ಅವರ ಹಾದಿ ಸುಲಭದ್ದಾಗಿರಲಿಲ್ಲ. ಕಷ್ಟದ ಈ ಹಾದಿಯಲ್ಲಿ ಅವರು ತಮ್ಮ ಹೆಜ್ಜೆ ಗುರುತು ಮೂಡಿಸಿದರು. ಆ ದಿನಗಳನ್ನೆಲ್ಲ ಅವರು ನೆನಪಿಸಿಕೊಂಡಿದ್ದಾರೆ.
ರಾಗಿಣಿ ದ್ವಿವೇದಿ ಅವರು ತಾವು ನಡೆದು ಬಂದ ಹಾದಿಯನ್ನು ಹಿಂದಿರುಗಿ ನೋಡಿ ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದರು. ಬಳಿಕ ಎಲ್ಲವನ್ನೂ ನೆನಪು ಮಾಡಿಕೊಂಡರು. ‘ಬೇರೆ ರಾಜ್ಯದಲ್ಲಿ ಹುಟ್ಟಿದ್ದರೂ ಕನ್ನಡ ಚಿತ್ರರಂಗ ನನಗೆ ಜೀವನ ನೀಡಿದೆ. ಹೀಗಾಗಿ ಬದುಕಿನ ಕೊನೆಯ ಗಳಿಗೆ ತನಕ ಕನ್ನಡ ನಾಡಿನ ಪ್ರೀತಿ, ವಿಶ್ವಾಸ ಎಂದಿಗೂ ನಾನು ಮರೆಯಲ್ಲ. ಪರಭಾಷೆಯಲ್ಲಿ ನಟಿಸುವಾಗ ನಾನೊಬ್ಬಳು ಕನ್ನಡದ ನಟಿ ಎಂದು ಗುರುತಿಸುತ್ತಾರೆ. ಪರಭಾಷೆಯಲ್ಲಿ ಸಿಗುವ ಗೌರವ ಮನ್ನಣೆ ಕನ್ನಡ ಚಿತ್ರರಂಗದಲ್ಲಿ ಸಿಗಲಿಲ್ಲ’ ಎಂದು ಬೇಸರ ತೋಡಿಕೊಂಡರು ರಾಗಿಣಿ.
‘ಕನ್ನಡ ಚಿತ್ರರಂಗ ಇದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಮಾಡೆಲಿಂಗ್ ಮಾಡಿಕೊಂಡಿದ್ದೆ. ಆಗ ಸಿಕ್ಕದ್ದೇ ಹೋಳಿ ಸಿನಿಮಾ ಆಫರ್. ಅದು ಮೊದಲ ಸಿನಿಮಾ. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರ ಜೊತೆ ವಯಕ್ತಿಕ ವಿಷಯಕ್ಕಾಗಿ ಜಗಳ ಮಾಡಿಕೊಂಡಿದ್ದೆ. ಅಲ್ಲಿಂದ ನನ್ನ ಪರಿಚಯ ಚಿತ್ರರಂಗಕ್ಕೆ ಗೊತ್ತಾಯಿತು. ಮೊದಲು ಬಿಡುಗಡೆಯಾಗಿದ್ದು ಕಿಚ್ಚ ಸುದೀಪ್ ನಟನೆಯ ವೀರ ಮದಕರಿ ಸಿನಿಮಾ. ಸುದೀಪ್ ಅವರಿಂದ ಸಾಕಷ್ಟು ಕಲಿತೆ. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ, ಪರಭಾಷೆಯಲ್ಲಿ ಅಭಿನಯಿಸಿದೆ. ಎಲ್ಲೇ ನಟಿಸಿದರೂ ಕನ್ನಡವೇ ನನ್ನ ಮನೆ’ ಎಂದು ರಾಗಿಣಿ ದ್ವಿವೇದಿ ಹೇಳಿದರು.
ಈ 15 ವರ್ಷಗಳಲ್ಲಿ ರಾಗಿಣಿ ದ್ವಿವೇದಿ ಅವರು ಶಿವರಾಜ್ಕುಮಾರ್, ಉಪೇಂದ್ರ, ದುನಿಯಾ ವಿಜಯ್, ಕಿಚ್ಚ ಸುದೀಪ್, ಯೋಗಿ, ದಿಗಂತ್, ಆದಿತ್ಯ, ರಾಜವರ್ಧನ್ ಸೇರಿದಂತೆ ಅನೇಕ ನಟರ ಜೊತೆ ಕೆಲಸ ಮಾಡಿದ್ದಾರೆ. ಹಲವು ನಿರ್ದೇಶಕರು ಹಾಗೂ ತಂತ್ರಜ್ಞರ ಕೊಡುಗೆ, ಸಹಕಾರವನ್ನು ಅವರು ಸ್ಮರಿಸಿಕೊಂಡಿದ್ದಾರೆ. ‘15 ವರ್ಷಗಳ ಸಿನಿ ಪಯಣದಲ್ಲಿ ಏಳು-ಬೀಳು, ಸೋಲು-ಗೆಲುವು, ಸಂಕಷ್ಟಗಳ ಸರಮಾಲೆಯನ್ನೇ ನೋಡಿದ್ದೇನೆ. ಒಳ್ಳೆಯ ದಿನಗಳನ್ನೂ ನೋಡಿದ್ದೇನೆ. ತುಂಬ ಕಷ್ಟದ ದಿನಗಳನ್ನು ಸಹ ನೋಡಿಕೊಂಡಿ ಬಂದಿದ್ದೇನೆ’ ಎಂದರು ರಾಗಿಣಿ.
ಇದನ್ನೂ ಓದಿ: ಇಂಥ ಚಳಿಯಲ್ಲೂ ಹಾಟ್ ಅವತಾರ ತಾಳಿದ ರಾಗಿಣಿ ದ್ವಿವೇದಿ
‘ಬದುಕಿನ ಕಷ್ಟದ ಸಮಯದಲ್ಲಿದ್ದಾಗ ಯಾರೂ ನೆರವಿಗೆ ಬರಲಿಲ್ಲ. ಒಳ್ಳೆಯ ಸಮಯದಲ್ಲಿ ಎಲ್ಲರೂ ಇರ್ತಾರೆ. ನಾನು ಕಷ್ಟದ ಸಮಯದಲ್ಲಿ ಎಲ್ಲರ ಜೊತೆ ನಿಂತಿದ್ದೇನೆ. ಮುಂದೆಯೂ ನಿಲ್ಲುತ್ತೇನೆ. ಹಿಂದಿನದನ್ನು ನೆನಪಿಸಿಕೊಂಡರೆ ಕಣ್ಣಿರು ಬರುತ್ತದೆ. ಕನ್ನಡ ಚಿತ್ರರಂಗ ಬದುಕು ಕೊಟ್ಟಿದೆ. ಆದರೆ ಬೇರೆ ಇಂಡಸ್ಟ್ರಿಯಲ್ಲಿ ಸಿಕ್ಕ ಪ್ರೀತಿ, ಗೌರವ ಮನ್ನಣೆ ಕನ್ನಡ ಚಿತ್ರತಂಗದಲ್ಲಿ ಸಿಗಲಿಲ್ಲ. ಯಾರು ಬಂದರೂ ಬಾರದೇ ಇದ್ದರೂ ನಾವು ನಮಗಾಗಿ ನಿಲ್ಲಬೇಕು ಎನ್ನುವುದನ್ನು ಕಂಡುಕೊಂಡಿದ್ದೇನೆ’ ಎಂದು ರಾಗಿಣಿ ಹೇಳಿದರು.
ಇದನ್ನೂ ಓದಿ: ಹಿರಿಯ ಕಲಾವಿದರಿಗೆ ರಾಗಿಣಿ ದ್ವಿವೇದಿ ಕೊಡೋ ಗೌರವ ನೋಡಿ
ಇತ್ತೀಚೆಗೆ ಬಿಡುಗಡೆ ಆದ ದರ್ಶನ್ ಅವರ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಲು ಕೂಡ ರಾಗಿಣಿ ಅವರಿಗೆ ಆಫರ್ ಬಂದಿತ್ತಂತೆ. ಆದರೆ ಆ ಪಾತ್ರ ಇಷ್ಟ ಆಗಿಲ್ಲ ಎಂಬ ಕಾರಣಕ್ಕೆ ತಾವು ನಟಿಸಿಲ್ಲ ಎಂದು ಅವರು ಹೇಳಿದ್ದಾರೆ. ‘ಹೊಸ ವರ್ಷದ ಆರಂಭದಲ್ಲಿ 3 ಕನ್ನಡ ಸಿನಿಮಾಗಳಿಗೆ ಮತ್ತು ಪರಭಾಷೆಯಲ್ಲಿಯೂ ಅವಕಾಶ ಬಂದಿದೆ. ಸಮಾಜ ಸೇವೆಯೂ ಮುಂದುವರಿದಿದೆ. ಕಷ್ಟದಲ್ಲಿ ಇದ್ದವರಿಗೆ ನೆರವು ನೀಡುವುದು ನನ್ನ ಗುರಿ’ ಎಂದರು ರಾಗಿಣಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.